
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಇಂಡಿಗೋ ವಿಮಾನಗಳು ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದು ಇದೀಗ ಹದ್ದು ಢಿಕ್ಕಿಯಿಂದಾಗಿ ಮತ್ತೊಂದು ವಿಮಾನ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ನಡೆದಿದೆ.
ಈ ಹಿಂದೆ ಆಲಿಕಲ್ಲುಗಳ ಹೊಡೆತದಿಂದಾಗಿ ಇಂಡಿಗೋ ಸಂಸ್ಥೆಗೆ ಸೇರಿದ್ದ ವಿಮಾನ ತುರ್ತು ಭೂಸ್ಪರ್ಶ ಮಾಡಿತ್ತು. ಇದರ ಬೆನ್ನಲ್ಲೇ ನಿನ್ನೆ ರಾಯ್‌ಪುರದಿಂದ ದೆಹಲಿಗೆ ಹೋಗುತ್ತಿದ್ದ ಇಂಡಿಗೋ ವಿಮಾನವು ಧೂಳಿನ ಬಿರುಗಾಳಿಯಿಂದಾಗಿ ತೀವ್ರ ಪ್ರಕ್ಷುಬ್ಧತೆಯನ್ನು ಎದುರಿಸಿ ಲ್ಯಾಂಡಿಂಗ್ ವಿಳಂಬವಾಗಿತ್ತು.
ಇದೀಗ ಮತ್ತೊಂದು ಇಂಡಿಗೋ ವಿಮಾನ ಹದ್ದು ಢಿಕ್ಕಿಯಿಂದಾಗಿ ತುರ್ತು ಭೂಸ್ಪರ್ಶ ಮಾಡಿದೆ.
ಸೋಮವಾರ ರಾಂಚಿಯ ಬಿರ್ಸಾ ಮುಂಡಾ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಕ್ಕೆ ಹದ್ದು ಡಿಕ್ಕಿಯಾದ ಪರಿಣಾಮ ಸುಮಾರು 175 ಪ್ರಯಾಣಿಕರಿದ್ದ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ.
ಈ ಘಟನೆಯಲ್ಲಿ ಏರ್‌ಬಸ್ 320 ವಿಮಾನವು ಹಾನಿಗೊಳಗಾಗಿದ್ದು, ಅದೃಷ್ಟವಶಾತ್ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂದು ವಿಮಾನಯಾನ ಸಂಸ್ಛೆ ಮಾಹಿತಿ ನೀಡಿದೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ರಾಂಚಿಯ ಬಿರ್ಸಾ ಮುಂಡಾ ವಿಮಾನ ನಿಲ್ದಾಣದ ನಿರ್ದೇಶಕ ಆರ್ ಆರ್ ಮೌರ್ಯ, "ರಾಂಚಿ ಬಳಿ ಇಂಡಿಗೋ ವಿಮಾನಕ್ಕೆ ಮಧ್ಯಾಹ್ನ 1.14ರಲ್ಲಿ ಹಕ್ಕಿ ಡಿಕ್ಕಿ ಹೊಡೆದಿದೆ. ಇಲ್ಲಿಂದ ಸುಮಾರು 10 ರಿಂದ 12 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ 3,000 ರಿಂದ 4,000 ಅಡಿ ಎತ್ತರದಲ್ಲಿ ಈ ಘಟನೆ ಸಂಭವಿಸಿದೆ.
ಇಂಡಿಗೋ ವಿಮಾನವು ಪಾಟ್ನಾದಿಂದ ರಾಂಚಿಗೆ ಬರುತ್ತಿತ್ತು. ಪೈಲಟ್ ಇಲ್ಲಿ ತುರ್ತು ಲ್ಯಾಂಡಿಂಗ್ ಮಾಡಬೇಕಾಯಿತು. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಅಧಿಕಾರಿಗಳ ವಿಮಾನಕ್ಕಾಗ ಹಾನಿ ಕುರಿತು ತನಿಖೆ ನಡೆಸುತ್ತಿದ್ದು, ಎಂಜಿನಿಯರ್‌ಗಳು ಹಾನಿಯನ್ನು ನಿರ್ಣಯಿಸುತ್ತಿದ್ದಾರೆ" ಎಂದು ಅವರು ಹೇಳಿದರು.
ಇನ್ನು ಘಟನೆ ಕುರಿತಂತೆ ಇಂಡಿಗೋ ವಿಮಾನಯಾನವ ಸಂಸ್ಥೆ ಈ ವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Advertisement