'ತುಂಡುಡುಗೆ ಧರಿಸುವ ಹುಡುಗಿಯರು ನನಗೆ ಇಷ್ಟವಿಲ್ಲ': ಹೊಸ ವಿವಾದ ಹುಟ್ಟುಹಾಕಿದ ಬಿಜೆಪಿ ಸಚಿವ

ಕೈಲಾಶ್ ವಿಜಯವರ್ಗಿಯ ಅವರು ಸಾರ್ವಜನಿಕವಾಗಿ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವುದು ಇದೇ ಮೊದಲಲ್ಲ.
ಕೈಲಾಶ್ ವಿಜಯವರ್ಗಿಯ
ಕೈಲಾಶ್ ವಿಜಯವರ್ಗಿಯ
Updated on

ಭೋಪಾಲ್: 'ನನಗೆ ತುಂಡು ಉಡುಗೆ ಧರಿಸುವ ಹುಡುಗಿಯರು ಇಷ್ಟವಿಲ್ಲ' ಎಂದು ಹೇಳುವ ಮೂಲಕ ಮಧ್ಯ ಪ್ರದೇಶದ ಸಚಿವ ಮತ್ತು ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.

ಇಂದೋರ್‌ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಗರದ ಮಾಜಿ ಮೇಯರ್ ಕೂಡ ಆಗಿರುವ ವಿಜಯವರ್ಗಿಯ, 'ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ, ತುಂಡು ಉಡುಗೆಯನ್ನು ಧರಿಸುವ ಮಹಿಳೆಯನ್ನು ಸುಂದರಿ ಎಂದು ಪರಿಗಣಿಸಲಾಗುತ್ತದೆ. ನಾನು ಅದನ್ನು ಒಪ್ಪುವುದಿಲ್ಲ. ಭಾರತದಲ್ಲಿ, ನಾವು ಹುಡುಗಿ ಚೆನ್ನಾಗಿ ಉಡುಗೆ ತೊಟ್ಟಾಗ, ಆಭರಣಗಳನ್ನು ಧರಿಸಿದಾಗ ಮತ್ತು ತನ್ನನ್ನು ತಾನು ಅಲಂಕರಿಸಿಕೊಂಡಾಗ ಅವಳನ್ನು ಸುಂದರಿ ಎಂದು ಪರಿಗಣಿಸುತ್ತೇವೆ' ಎಂದು ಹೇಳಿದರು.

ಸಣ್ಣ ಭಾಷಣಗಳು ಮತ್ತು ಸಣ್ಣ ಉಡುಪುಗಳ ನಡುವೆ ಹೋಲಿಕೆ ಮಾಡಿದ ರಾಜ್ಯದ ನಗರಾಭಿವೃದ್ಧಿ ಮತ್ತು ವಸತಿ ಸಚಿವರು, 'ಪಾಶ್ಚಿಮಾತ್ಯ ದೇಶಗಳಲ್ಲಿ, ಕಡಿಮೆ ಬಟ್ಟೆ ಧರಿಸುವ ಮಹಿಳೆಯನ್ನು ತುಂಬಾ ಸುಂದರಿ ಎಂದು ಮತ್ತು ಕಡಿಮೆ ಮಾತನಾಡುವ ನಾಯಕರನ್ನು ಒಳ್ಳೆಯವರು ಎಂದು ಪರಿಗಣಿಸಲಾಗುತ್ತದೆ. ಆದರೆ, ನಾನು ಅದನ್ನು ನಂಬುವುದಿಲ್ಲ. ಮಹಿಳೆ ದೇವತೆಯ ರೂಪ ಎಂದು ನಾನು ನಂಬುತ್ತೇನೆ. ಅವಳು ಒಳ್ಳೆಯ ಬಟ್ಟೆಗಳನ್ನು ಧರಿಸಬೇಕು. ತುಂಡು ಬಟ್ಟೆ ಧರಿಸಿದ ಮಹಿಳೆಯರು ಆಕರ್ಷಕವಾಗಿ ಕಾಣುವುದಿಲ್ಲ' ಎಂದು ಹೇಳಿದರು.

'ಕೆಲವೊಮ್ಮೆ ಹುಡುಗಿಯರು ನನ್ನ ಜೊತೆ ಸೆಲ್ಫಿ ತೆಗೆದುಕೊಳ್ಳಲು ಬರುತ್ತಾರೆ. ಆಗ ನಾನು, 'ಬೇಟಾ, ಮುಂದಿನ ಬಾರಿ ಸರಿಯಾದ ಬಟ್ಟೆಯಲ್ಲಿ ಬಾ, ನಂತರ ನಾವು ಫೋಟೊ ತೆಗೆದುಕೊಳ್ಳೋಣ' ಎಂದು ಅವರಿಗೆ ನಾನು ಹೇಳುತ್ತೇನೆ ಎಂದರು.

ಕೈಲಾಶ್ ವಿಜಯವರ್ಗಿಯ ಅವರು ಸಾರ್ವಜನಿಕವಾಗಿ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವುದು ಇದೇ ಮೊದಲಲ್ಲ.

2022ರಲ್ಲಿ ಇಂದೋರ್‌ನಲ್ಲಿ ನಡೆದ ಹನುಮಾನ್ ಜಯಂತಿ ಕಾರ್ಯಕ್ರಮದಲ್ಲಿ ಅವರು, 'ನಾನು ಹನುಮಾನ್ ಜಯಂತಿಯಂದು ಸುಳ್ಳು ಹೇಳುವುದಿಲ್ಲ... ಆದರೆ ಇತ್ತೀಚಿನ ದಿನಗಳಲ್ಲಿ ಹುಡುಗಿಯರು ಕೊಳಕು ಬಟ್ಟೆಗಳನ್ನು ಧರಿಸುತ್ತಾರೆ... ನಾವು ಮಹಿಳೆಯರನ್ನು ದೇವತೆಗಳೆಂದು ಕರೆಯುತ್ತೇವೆ. ಆದರೆ, ಅವರು ಹಾಗೆ ಕಾಣುವುದಿಲ್ಲ... ಅವರು ಶೂರ್ಪನಖಿಯಂತೆ ಕಾಣುತ್ತಾರೆ. ದೇವರು ನಿಮಗೆ ಸುಂದರವಾದ ದೇಹವನ್ನು ನೀಡಿದ್ದಾನೆ. ಕನಿಷ್ಠ ಯೋಗ್ಯವಾದ ಬಟ್ಟೆಗಳನ್ನು ಧರಿಸಿ. ನಿಮ್ಮ ಮಕ್ಕಳಿಗೆ ಮೌಲ್ಯಗಳನ್ನು ಕಲಿಸಿ' ಎಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com