
ಮುಂಬೈ: ತನ್ನ ಚಾಲಕನಿಗೆ ಚಾಕುವಿನಿಂದ ಹಲ್ಲೆ ನಡೆಸಿ ಗಾಯಗೊಳಿದ ಆರೋಪದ ಮೇಲೆ ಬಾಲಿವುಡ್ ನಿರ್ದೇಶಕ ಮನೀಶ್ ಗುಪ್ತಾ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸಂಬಳ ವಿಚಾರವಾಗಿ ವಾದ-ವಿವಾದ ನಡೆದು ತಾರಕ್ಕಕೇರಿದ ನಂತರ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಮನೀಶ್ ಗುಪ್ತಾ ಹಲ್ಲೆ ನಡೆಸಿ, ಗಾಯಗೊಳಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಸಾಗರ್ ಸಂಜೋಗ್ ಕಟ್ಟಡದಲ್ಲಿರುವ ಗುಪ್ತಾ ಅವರ ನಿವಾಸದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ ಎಂದು ವರ್ಸೋವಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. ಗುಪ್ತಾ ಚಾಕುವಿನಿಂದ ಹಲ್ಲೆ ನಡೆಸಿದ್ದರಿಂದ ಚಾಲಕ ರಾಜಿಬುಲ್ ಇಸ್ಲಾಂ ಲಷ್ಕರ್ (32) ಗಾಯಗೊಂಡಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಗುಪ್ತಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 118(2), 115(2) ಮತ್ತು 352 ರ ಅಡಿಯಲ್ಲಿ ಮಾರಕ ಆಯುಧದಿಂದ ಗಂಭೀರವಾದ ಗಾಯ ಉಂಟುಮಾಡಿದ, ಶಾಂತಿಗೆ ಭಂಗ ತರಲು ಉದ್ದೇಶಪೂರ್ವಕವಾಗಿ ಅವಮಾನ ಮತ್ತಿತರ ಇತರ ಅಪರಾಧಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ಇನ್ನೂ ಬಂಧಿಸಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
ಗುಪ್ತಾ ಅವರನ್ನು ತಕ್ಷಣ ಬಂಧಿಸುವಂತೆ ಲಷ್ಕರ್ ಪರ ವಕೀಲ ಅಲಿ ಕಾಶಿಫ್ ಖಾನ್ ದೇಶಮುಖ್ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಮನೀಶ್ ಗುಪ್ತಾ ಅವರು 2023ರಲ್ಲಿ ಒನ್ ಫ್ರೈಡೇ ನೈಟ್, 2021ರಲ್ಲಿ 420 ಐಪಿಸಿ, 2015 ರಲ್ಲಿ ರಹಸ್ಯ, 2011 ರಲ್ಲಿ ಹಾಸ್ಟೆಲ್, 2009ರಲ್ಲಿ ದಿ ಸ್ಟೋನ್‌ಮ್ಯಾನ್ ಮರ್ಡರ್ಸ್ ಮತ್ತಿತರ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
Advertisement