
ಬಿಹಾರ: ರಾಷ್ಟ್ರೀಯ ಜನತಾ ದಳ (RJD)ನಾಯಕ ತೇಜಸ್ವಿ ಯಾದವ್ ಅವರ ಬೆಂಗಾವಲಿನ ಎರಡು ವಾಹಳಿಗೆ ವೇಗವಾಗಿ ಬಂದ ಟ್ರಕ್ ವೊಂದು ಡಿಕ್ಕಿ ಹೊಡೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಮೂವರು ಭದ್ರತಾ ಸಿಬ್ಬಂದಿಗೆ ಗಾಯಗಳಾಗಿವೆ. ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಇಂದು ಮುಂಜಾನೆ ಈ ಅಪಘಾತ ಸಂಭವಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವಿಪಕ್ಷ ನಾಯಕ ಪ್ರಯಾಣಿಸುತ್ತಿದ್ದ ಕಾರನ್ನು ಟ್ರಕ್ ಡಿಕ್ಕಿ ಹೊಡೆದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾಟ್ನಾ- ಮುಜಾಫರ್ ಪುರ್ ರಾಷ್ಟ್ರೀಯ ಹೆದ್ದಾರಿಯ ಗೋರೌಲ್ ನಲ್ಲಿ ಟೀ ಕುಡಿಯುವುದ್ದಕ್ಕಾಗಿ ಬೆಂಗಾವಲು ವಾಹನಗಳನ್ನು ನಿಲ್ಲಿಸಿದ್ದಾಗ ಮುಂಜಾನೆ 12-30 ರ ಸುಮಾರಿನಲ್ಲಿ ಈ ದುರ್ಘಟನೆ ನಡೆದಿದೆ. ಮಧೇಪುರದಿಂದ ಪಾಟ್ನಾಕ್ಕೆ ತೇಜಸ್ವಿ ಯಾದವ್ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಪ್ರಾಣಾಪಾಯದಿಂದ ಯಾದವ್ ಪಾರಾಗಿದ್ದಾರೆ. ಮೂರು ಭದ್ರತಾ ಸಿಬ್ಬಂದಿಗೆ ತೀವ್ರವಾದ ಗಾಯಗಳಾಗಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ. ಯಾದವ್ ಕೂಡಾ ಆಸ್ಪತ್ರೆಗೆ ಭೇಟಿ ನೀಡಿದ್ದು, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಆಸ್ಪತ್ರೆ ಬಳಿ ಮಾತನಾಡಿದ ಯಾದವ್, ಮಧೇಪುರದಿಂದ ಪಾಟ್ನಾದಿಂದ ವಾಪಸ್ಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಟ್ರಕ್ ವೊಂದು ಬೆಂಗಾವಲು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮೂವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ನನ್ನ ಕಾರಿನಿಂದ ಐದು ಅಡಿ ಅಂತರದಲ್ಲಿ ಅಪಘಾತ ನಡೆದಿದೆ. ಟ್ರಕ್ ಹಾಗೂ ಅದರ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧದ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
Advertisement