
ಮಥುರಾ: ಮಥುರಾ-ವೃಂದಾವನ ಪ್ರದೇಶಕ್ಕೆ ಭೇಟಿ ನೀಡುವ ಭಕ್ತರಿಗೆ ಎದುರಾಗುವ ಕೋತಿಗಳ ದೊಡ್ಡ ಗುಂಪು ಸಾಮಾನ್ಯವಾಗಿ ಕನ್ನಡಕ, ಕ್ಯಾಪ್‌ಗಳು ಮತ್ತು ಆಹಾರವನ್ನು ಕಸಿದೊಯ್ಯುವುದು ಸಾಮಾನ್ಯ ಎನ್ನುವಂತಾಗಿದೆ. ಆದರೆ, ಭಕ್ತರ ಕುಟುಂಬವೊಂದು ದೇವಾಲಯಕ್ಕೆ ಭೇಟಿ ನೀಡಿದ ವೇಳೆ ಮಂಗವೊಂದು ಆಭರಣಗಳಿದ್ದ ಬ್ಯಾಗ್ ಅನ್ನು ಕಸಿಕೊಂಡಿರುವ ಘಟನೆ ವರದಿಯಾಗಿದೆ.
ವೃಂದಾವನದ ಠಾಕೂರ್ ಬಂಕೆ ಬಿಹಾರಿ ದೇವಸ್ಥಾನಕ್ಕೆ ಅಲಿಘಢ ಮೂಲದ ವಜ್ರ ವ್ಯಾಪಾರಿ ಅಭಿಷೇಕ್ ಅಗರ್ವಾಲ್ ಮತ್ತು ಅವರ ಕುಟುಂಬ ಭೇಟಿ ನೀಡಿದ ಸಂದರ್ಭದಲ್ಲಿ 20 ಲಕ್ಷ ರೂ. ಮೌಲ್ಯದ ಆಭರಣಗಳು ಇದ್ದ ಬ್ಯಾಗ್ ಅನ್ನು ಕೋತಿಯೊಂದು ಕಸಿದುಕೊಂಡಾಗ ಆಘಾತ ಉಂಟಾಗಿದೆ.
ಎಂಟು ಗಂಟೆಗಳ ಪ್ರಯತ್ನದ ನಂತರ, ಪೊಲೀಸರು ಕೋತಿಯಿಂದ ಬ್ಯಾಗನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಭಿಷೇಕ್ ಅಗರ್ವಾಲ್ ಶುಕ್ರವಾರ ತಮ್ಮ ಕುಟುಂಬದೊಂದಿಗೆ ಪ್ರಾರ್ಥನೆ ಸಲ್ಲಿಸಿದ ನಂತರ ಮನೆಗೆ ಮರಳಲು ತಮ್ಮ ನಿಲ್ಲಿಸಿದ್ದ ಕಾರಿನ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ರಸ್ತೆಯಲ್ಲಿ ಜಮಾಯಿಸಿದ್ದ ಗುಂಪಿನಿಂದ ಇದ್ದಕ್ಕಿದ್ದಂತೆ ಬಂದ ಕೋತಿಯೊಂದು ಅವರ ಕೈಯಿಂದ 20 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ವಜ್ರಾಭರಣಗಳಿದ್ದ ಬ್ಯಾಗನ್ನು ಕಸಿದುಕೊಂಡಿತ್ತು.
ಚಿಂತೆಗೀಡಾದ ಉದ್ಯಮಿ ಜನರು ಸೂಚಿಸಿದ ಪ್ರತಿಯೊಂದು ವಿಧಾನವನ್ನು ಅನುಸರಿಸಿ ಕೋತಿಗೆ ಇತರ ಆಹಾರವನ್ನು ನೀಡಲು ಪ್ರಯತ್ನಿಸಿದರು. ಆದರೆ, ಎಲ್ಲ ಪ್ರಯತ್ನಗಳು ವಿಫಲವಾದಾಗ, ಅವರು ಪೊಲೀಸರ ಮೊರೆ ಹೋದರು.
ಪೊಲೀಸರು ಕೋತಿಯನ್ನು ಗುರುತಿಸಿ ಅದನ್ನು ಸುತ್ತುವರೆದರು. ಹಲವು ಗಂಟೆಗಳ ಕಠಿಣ ಪರಿಶ್ರಮದ ನಂತರ, ಅಂತಿಮವಾಗಿ ಬ್ಯಾಗನ್ನು ಸುರಕ್ಷಿತವಾಗಿ ಮರಳಿ ಪಡೆದು ಅದರ ಮಾಲೀಕರಿಗೆ ಹಸ್ತಾಂತರಿಸಿದರು ಎಂದು ವೃತ್ತ ಅಧಿಕಾರಿ (ಸದರ್) ಸಂದೀಪ್ ಸಿಂಗ್ ಹೇಳಿದರು.
Advertisement