
ಹಿಸಾರ್: ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಬಂಧಿಸಲಾಗಿರುವ ಹರಿಯಾಣ ಮೂಲದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಸ್ಥಳೀಯ ನ್ಯಾಯಾಲಯ ಸೋಮವಾರ ವಿಸ್ತರಿಸಿದ್ದು, ಪ್ರಕರಣದ ವಿಚಾರಣೆಯನ್ನು ಜೂನ್ 23ಕ್ಕೆ ನಿಗದಿಪಡಿಸಿದೆ.
33 ವರ್ಷದ ಯೂಟ್ಯೂಬರ್ ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಹಿಸಾರ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ (ಪ್ರಥಮ ದರ್ಜೆ) ಸುನಿಲ್ ಕುಮಾರ್ ಅವರ ಮುಂದೆ ಹಾಜರಾಗಿದ್ದರು. ನ್ಯಾಯಾಲಯ ಇದೀಗ ಅವರ ನ್ಯಾಯಾಂಗ ಬಂಧನವನ್ನು ಎರಡು ವಾರಗಳವರೆಗೆ ವಿಸ್ತರಿಸಿದೆ.
'ನ್ಯಾಯಾಲಯವು ಅವರ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದೆ ಮತ್ತು ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 23ಕ್ಕೆ ನಿಗದಿಪಡಿಸಿದೆ' ಎಂದು ಜ್ಯೋತಿ ಮಲ್ಹೋತ್ರಾ ಅವರ ವಕೀಲ ಕುಮಾರ್ ಮುಖೇಶ್ ಹೇಳಿದರು.
ಹಿಸಾರ್ ಪೊಲೀಸರು ಮೇ 16ರಂದು ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಮಲ್ಹೋತ್ರಾ ಅವರನ್ನು ಬಂಧಿಸಿದರು.
ನಂತರ ನ್ಯಾಯಾಲಯವು ಆಕೆಯನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿತು. ಕಸ್ಟಡಿ ಅವಧಿ ಪೂರ್ಣಗೊಂಡ ನಂತರ, ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ಮನವಿಯ ಮೇರೆಗೆ ನ್ಯಾಯಾಲಯವು ಅದನ್ನು ನಾಲ್ಕು ದಿನಗಳವರೆಗೆ ವಿಸ್ತರಿಸಿತು. ಮೇ 26 ರಂದು ನ್ಯಾಯಾಲಯವು ಆಕೆಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.
ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ನ ಉದ್ಯೋಗಿಯಾಗಿದ್ದ ಎಹ್ಸಾನ್-ಉರ್-ರಹೀಮ್ ಅಲಿಯಾಸ್ ಡ್ಯಾನಿಶ್ ಸೇರಿದಂತೆ ಪಾಕ್ ಪ್ರಮುಖ ಏಜೆಂಟರ್ ಜೊತೆಗೆ ಮಲ್ಹೋತ್ರಾ ನಿರಂತರ ಸಂಪರ್ಕದಲ್ಲಿದ್ದರು. ಕಳೆದ ವರ್ಷ ನವದೆಹಲಿಯ ಪಾಕಿಸ್ತಾನ ಹೈಕಮಿಷನ್‌ನಲ್ಲಿ ನಡೆದ ವಿಶೇಷ ಇಫ್ತಾರ್ ಔತಣಕೂಟದಲ್ಲಿ ಡ್ಯಾನಿಶ್ ಜೊತೆ ಭಾಗವಹಿಸಿದ್ದರು ಎಂದು ವರದಿಯಾಗಿದೆ.
Advertisement