
ನವದೆಹಲಿ: ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳಿಗೆ ಭಾರತದ ಸೇನಾ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಒಡಿಶಾದ ಪುರಿ ಮೂಲದ ಯೂಟ್ಯೂಬರ್ ಮತ್ತು ಜ್ಯೋತಿ ಮಲ್ಹೋತ್ರಾ ನಡುವಿನ ನಂಟಿನ ಕುರಿತು ಕುರಿತು ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಟ್ರಾವೆಲ್ ವಿತ್ JO ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಮಲ್ಹೋತ್ರಾ, ಸೆಪ್ಟೆಂಬರ್ 2024 ರಲ್ಲಿ ಪುರಿಗೆ ಭೇಟಿ ನೀಡಿದ್ದರು. ಅಲ್ಲದೇ ಅಲ್ಲಿನ ಮಹಿಳಾ ಯು ಟ್ಯೂಬರ್ ಒಬ್ಬರನ್ನು ಭೇಟಿಯಾಗಿರುವುದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ ಎಂದು ಪುರಿ ಎಸ್ಪಿ ವಿನಿತ್ ಅಗರವಾಲ್ ಹೇಳಿದ್ದಾರೆ.
ಜ್ಯೋತಿ ಅವರ ಯೂಟ್ಯೂಬ್ ಚಾನೆಲ್ ನಲ್ಲಿ 3.77 ಲಕ್ಷ ಚಂದಾದಾರರು ಮತ್ತು ಇನ್ಸ್ಟಾಗ್ರಾಮ್ ನಲ್ಲಿ 1.33 ಲಕ್ಷ ಫಾಲೋವರ್ಸ್ ಇದ್ದಾರೆ. ಅವರು ದೆಹಲಿಯ ಪಾಕಿಸ್ತಾನ ಹೈಕಮಿಷನ್‌ನಲ್ಲಿ ಕೆಲಸ ಮಾಡುವ ಪಾಕ್ ಸಿಬ್ಬಂದಿಯೊಂದಿಗೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಬೇಹುಗಾರಿಕೆಯಲ್ಲಿ ತೊಡಗಿರುವ ಆರೋಪದ ಮೇಲೆ ಆ ಪಾಕಿಸ್ತಾನಿ ಅಧಿಕಾರಿಯನ್ನು ಭಾರತ ಮೇ 13 ರಂದು ಹೊರಹಾಕಿತ್ತು. ಪುರಿಯಲ್ಲಿರುವ ಯು ಟ್ಯೂಬರ್ ಇತ್ತೀಚೆಗೆ ಪಾಕಿಸ್ತಾನದ ಕರ್ತಾರ್‌ಪುರ ಸಾಹಿಬ್ ಗುರುದ್ವಾರಕ್ಕೂ ಪ್ರಯಾಣ ಬೆಳೆಸಿದ್ದರು ಎಂದು ಎಸ್‌ಪಿ ತಿಳಿಸಿದ್ದಾರೆ.
"ಜ್ಯೋತಿ ಮಲ್ಹೋತ್ರಾ ಕಳೆದ ವರ್ಷ ಪುರಿಗೆ ಭೇಟಿ ನೀಡಿದ್ದರು ಎಂಬುದು ತಿಳಿದುಬಂದಿದೆ. ಈ ಕುರಿತು ಪರಿಶೀಲಿಸುತ್ತಿದ್ದೇವೆ. ಪರಿಶೀಲನೆಯ ನಂತರ ಹೆಚ್ಚಿನ ಮಾಹಿತಿ ಹಂಚಿಕೊಳ್ಳುತ್ತೇವೆ ಎಂದು ಅವರು ಹೇಳಿದರು. ಪುರಿಯ ಮಹಿಳೆ ಮಲ್ಹೋತ್ರಾ ಅವರೊಂದಿಗೆ ಗುಪ್ತಚರ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಗರವಾಲ್, ಹರಿಯಾಣ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಮತ್ತು ನಾವು ಅವರಿಗೆ ಅಗತ್ಯವಿರುವ ನೆರವನ್ನು ನೀಡುತ್ತಿದ್ದೇವೆ ಎಂದರು.
ಮಲ್ಹೋತ್ರಾ ಅವರ ಪುರಿಗೆ ಭೇಟಿಯ ಉದ್ದೇಶವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ ಮತ್ತು ಅವರು ಎಲ್ಲಿ ಉಳಿದುಕೊಂಡಿದ್ದರು. ಯಾರನ್ನು ಸಂಪರ್ಕಿಸಿದ್ದಾರೆ ಮತ್ತಿತರ ಅನುಮಾನಾಸ್ಪದ ಚಟುವಟಿಕೆ ಪತ್ತೆಗೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಪುರಿ ಎಸ್ಪಿ ಹೇಳಿದ್ದಾರೆ. ನಾವು ವಿವಿಧ ಕೇಂದ್ರೀಯ ಸಂಸ್ಥೆಗಳು ಮತ್ತು ಹರಿಯಾಣ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದೇವೆ. ಈ ಕುರಿತ ಸಮಗ್ರ ಪರಿಶೀಲನೆಯ ನಂತರ ಮಾಧ್ಯಮಗಳೊಂದಿಗೆ ವಿವರಗಳನ್ನು ಹಂಚಿಕೊಳ್ಳುತ್ತೇವೆ" ಎಂದು ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ಒಡಿಶಾ ಪೊಲೀಸರು ಪುರಿ ಯೂಟ್ಯೂಬರ್‌ನ ಗುರುತನ್ನು ಬಹಿರಂಗಪಡಿಸಲಿಲ್ಲ. ಪೊಲೀಸರು ಶನಿವಾರ ತನ್ನ ಮಗಳನ್ನು ಪ್ರಶ್ನಿಸಿದ್ದು, ಕೆಲವು ಮಾಹಿತಿಗಳನ್ನು ಪಡೆದಿದ್ದಾರೆ ಎಂದು ಪುರಿಯ ಯೂಟ್ಯೂಬರ್ ತಂದೆ ಹೇಳಿದ್ದಾರೆ. ಈ ಸಂಬಂಧ ತನಿಖೆಗಾಗಿ ಪೊಲೀಸ್ ಸಿಬ್ಬಂದಿ ತಂಡ ಪುರಿಯಲ್ಲಿರುವ ಮಹಿಳೆಯ ನಿವಾಸಕ್ಕೆ ಭೇಟಿ ನೀಡಿತ್ತು.
"ನನ್ನ ಮಗಳು ಯೂಟ್ಯೂಬರ್ ಆಗಿದ್ದರಿಂದ ಜ್ಯೋತಿ ಮಲ್ಹೋತ್ರಾ ಅವರ ಸಂಪರ್ಕಕ್ಕೆ ಬಂದಿದ್ದರು. ಅವರ ನಡುವೆ ಸ್ನೇಹ ಬೆಳೆಯುತ್ತಿದ್ದಂತೆ ಮಲ್ಹೋತ್ರಾ ಅವರು ಪುರಿಗೆ ಭೇಟಿ ನೀಡಿದ್ದರು. ಇದು ರಾಷ್ಟ್ರದ ಭದ್ರತೆಯ ವಿಷಯವಾಗಿರುವುದರಿಂದ ಸೂಕ್ತ ತನಿಖೆ ನಡೆಸಬೇಕು. ನಾವು ಪೊಲೀಸರೊಂದಿಗೆ ಸಹಕರಿಸುತ್ತೇವೆ" ಎಂದರು.
"ನನ್ನ ಮಗಳು ಮೂರ್ನಾಲ್ಕು ತಿಂಗಳ ಹಿಂದೆ ಮಲ್ಹೋತ್ರಾ ಅಲ್ಲ, ಮತ್ತೊಬ್ಬರ ಜೊತೆಗೆ ಪಾಕಿಸ್ತಾನದ ಕರ್ತಾರ್‌ಪುರಕ್ಕೆ ಭೇಟಿ ನೀಡಿದ್ದಳು. ನನ್ನ ಮಗಳು ಯಾವುದೇ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಮತ್ತು ಮಲ್ಹೋತ್ರಾ ಅವರ ಬೇಹುಗಾರಿಕೆಯ ಬಗ್ಗೆ ತಿಳಿದಿರಲಿಲ್ಲ" ಎಂದು ಪುರಿ ಯೂಟ್ಯೂಬರ್ ತಂದೆ ಹೇಳಿದ್ದಾರೆ.
ಮತ್ತೊಂದೆಡೆ ಸೋಷಿಯಲ್ ಮೀಡಿಯಾದಲ್ಲಿ ಫೋಸ್ಟ್ ಮಾಡಿರುವ ಪುರಿಯ ಯು ಟ್ಯೂಬರ್, "ಜ್ಯೋತಿ ಕೇವಲ ನನ್ನ ಸ್ನೇಹಿತೆ. ನಾನು ಆಕೆಯೊಂದಿಗೆ ಯೂಟ್ಯೂಬ್ ಮೂಲಕ ಸಂಪರ್ಕಕ್ಕೆ ಬಂದಿದ್ದೇನೆ. ಆಕೆಯ ಆರೋಪದ ಬಗ್ಗೆ ನನಗೆ ತಿಳಿದಿರಲಿಲ್ಲ. ಆಕೆ ಶತ್ರು ಪಾಕಿಸ್ತಾನಕ್ಕಾಗಿ ಗೂಢಚಾರಿಕೆ ಮಾಡುತ್ತಿದ್ದಾಳೆ ಎಂದು ನನಗೆ ತಿಳಿದಿದ್ದರೆ ನಾನು ಆಕೆಯೊಂದಿಗೆ ಸಂಪರ್ಕ ಹೊಂದುತ್ತಿರಲಿಲ್ಲ. ಈ ವಿಚಾರದಲ್ಲಿ ಯಾವುದೇ ತನಿಖಾ ಸಂಸ್ಥೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ರಾಷ್ಟ್ರ ಎಲ್ಲಕ್ಕಿಂತ ಮುಖ್ಯ ಎಂದು ಬರೆದುಕೊಂಡಿದ್ದಾರೆ.
Advertisement