
ದೆಹಲಿ: ರಾಷ್ಟ್ರ ರಾಜಧಾನಿಯ ಅಪಾರ್ಟ್ ಮೆಂಟ್ ವೊಂದರಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಇಬ್ಬರು ಮಕ್ಕಳೊಂದಿಗೆ ತಂದೆ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ.
ದ್ವಾರಕಾ ಸೆಕ್ಟರ್ 13ರಲ್ಲಿನ ಸಾಬಾದ್ ಅಪಾರ್ಟ್ ಮೆಂಟ್ ನ ಏಳನೇ ಮಹಡಿಯಲ್ಲಿರುವ ಫ್ಲಾಟ್ ವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ದಗದಗನೇ ಹೊತ್ತಿ ಉರಿದಿದೆ. ಇದರಿಂದ ಆತಂಕಗೊಂಡ ವ್ಯಕ್ತಿಯೊಬ್ಬರು ತನ್ನ 10 ವರ್ಷದ ಇಬ್ಬರು ಮಕ್ಕಳೊಂದಿಗೆ ಕಟ್ಟಡದಿಂದ ಜಿಗಿದು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಅಗ್ನಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ. ಸರ್ಟ್ ಸರ್ಕಿಟ್ ನಿಂದ ಬೆಂಕಿ ಉಂಟಾಯಿತೇ ಅಥವಾ ಬೇರೆ ಕಾರಣದಿಂದ ಬೆಂಕಿ ಹೊತ್ತಿಕೊಂಡಿತ್ತೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ.
ದ್ವಾರಕಾದ ಎಂಆರ್‌ವಿ ಶಾಲೆಯ ಬಳಿ ಇರುವ ಸಬಾದ್ ಅಪಾರ್ಟ್‌ಮೆಂಟ್‌ನಿಂದ ಬೆಳಿಗ್ಗೆ 10.01 ಕ್ಕೆ ಬೆಂಕಿ ಹೊತ್ತಿಕೊಂಡಿರುವ ಬಗ್ಗೆ ಕರೆ ಬಂದಿತು. ಆರಂಭದಲ್ಲಿ ಎಂಟು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು. ಬೆಂಕಿಯ ಪ್ರಮಾಣ ಹೆಚ್ಚಾಗುತ್ತಿದ್ದಂತೆಯೇ ಮತ್ತಷ್ಟು ಅಗ್ನಿ ಶಾಮಕ ಸಿಬ್ಬಂದಿಯನ್ನು ನಿಯೋಜಿಸಲಾಯಿತು. ಗಾಯಾಳುಗಳ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ ಎಂದು ದೆಹಲಿ ಅಗ್ನಿಶಾಮಕ ಸೇವೆ ಇಲಾಖೆ ತಿಳಿಸಿದೆ.
Advertisement