
ಶಿಲ್ಲಾಂಗ್: ಪತಿಯನ್ನು ಹನಿಮೂನ್ ಗೆ ಕರೆದೊಯ್ದು ಪ್ರಿಯಕರನೊಂದಿಗೆ ಸೇರಿ ಹತ್ಯೈಗೈದಿದ್ದ ಸೋನಮ್ ರಘುವಂಶಿ ಗರ್ಭಿಣಿ ಅಲ್ಲ.. ಆಕೆಯ ಗರ್ಭಧಾರಣೆಯ ಪರೀಕ್ಷೆ ನೆಗೆಟಿವ್ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇಘಾಲಯ ಪೊಲೀಸರ ವಿಶೇಷ ತನಿಖಾ ತಂಡವು ಮಧ್ಯರಾತ್ರಿ ಹೊತ್ತಿಗೆ ಆರೋಪಿಗಳನ್ನು ಶಿಲ್ಲಾಂಗ್‌ಗೆ ಕರೆತಂದಿತು. ಇಂದೋರ್ ಮೂಲದ ಉದ್ಯಮಿ ಪತಿ ರಾಜಾ ರಘುವಂಶಿಯ ಕೊಲೆ ಪ್ರಕರಣದ ಐವರು ಆರೋಪಿಗಳಲ್ಲಿ ಒಬ್ಬರಾದ ಸೋನಮ್ ರಘುವಂಶಿಯನ್ನು ಕೂಡ ಈ ವೇಳೆ ಕರೆತರಲಾಗಿದೆ. ಸೊಹ್ರಾದಲ್ಲಿ ಅಪರಾಧದ ಸ್ಥಳವನ್ನು ಪುನರ್ನಿರ್ಮಿಸಲು ಅವರನ್ನು ಕರೆದೊಯ್ಯಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಕೊಲೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಿಂದ ಬಂಧಿಸಲ್ಪಟ್ಟ ಇತರ ನಾಲ್ವರನ್ನು ಸಹ ಶಿಲ್ಲಾಂಗ್‌ಗೆ ಕರೆದೊಯ್ಯಲಾಯಿತು ಮತ್ತು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಅವರು ಹೇಳಿದರು.
ಸೋನಂಗೆ ಗರ್ಭಧಾರಣೆ ಪರೀಕ್ಷೆ
ಇದೇ ವೇಳೆ ಈ ಪ್ರಕರಣದ ಪ್ರಮುಖ ಆರೋಪಿ ಸೋನಮ್ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಶಿಲ್ಲಾಂಗ್‌ನ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ತನಿಖೆಯನ್ನು ಪೂರ್ಣಗೊಳಿಸಲು ಎಸ್‌ಐಟಿ ಆಕೆಯ ಪೊಲೀಸ್ ಕಸ್ಟಡಿಯನ್ನು ಕೋರಲಿದೆ ಎಂದು ಅವರು ಹೇಳಿದರು.
"ಸೋನಮ್ ಅವರನ್ನು ಕರೆತಂದ ಎಸ್‌ಐಟಿ ಮಧ್ಯರಾತ್ರಿ ಸ್ವಲ್ಪ ಮೊದಲು ಇಲ್ಲಿಗೆ ಬಂದಿತು. ಅವರು ಗರ್ಭಿಣಿಯಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಅವರನ್ನು ಇಲ್ಲಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರಿಗೆ ಮೂರು ಪರೀಕ್ಷೆಗಳನ್ನು ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ಅವರು ಗರ್ಭಧರಿಸಿಲ್ಲ ಎಂಬುದು ಸಾಬೀತಾಗಿದೆ. ಹೀಗಾಗಿ ಸೋನಮ್ ಅವರನ್ನು ಇಲ್ಲಿನ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಪೂರ್ವ ಖಾಸಿ ಹಿಲ್ಸ್ ಜಿಲ್ಲಾ ಎಸ್‌ಪಿ ವಿವೇಕ್ ಸೈಮ್ ಅವರು ಸೋನಂರ ವೈದ್ಯಕೀಯ ಪರೀಕ್ಷೆಗಳ ಫಲಿತಾಂಶಗಳು ನಕಾರಾತ್ಮಕವಾಗಿವೆ ಎಂದು ದೃಢಪಡಿಸಿದರು. "ಇತರ ನಾಲ್ವರು ಆರೋಪಿಗಳಾದ ರಾಜ್ ಕುಶ್ವಾಹ, ಆಕಾಶ್ ರಜಪೂತ್, ವಿಶಾಲ್ ಸಿಂಗ್ ಚೌಹಾಣ್ ಮತ್ತು ಆನಂದ್ ಕುಲಿ ಅವರನ್ನು ಬುಧವಾರ ಇಲ್ಲಿಗೆ ಟ್ರಾನ್ಸಿಟ್ ರಿಮಾಂಡ್‌ನಲ್ಲಿ ಕರೆತರಲಾಗಿದೆ. ಬಂಧಿತ ಎಲ್ಲ ವ್ಯಕ್ತಿಗಳನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಮತ್ತು ಸೊಹ್ರಾದಲ್ಲಿ ಅಪರಾಧದ ಸ್ಥಳವನ್ನು ಪುನರ್ನಿರ್ಮಿಸಲು" ಎಸ್‌ಐಟಿ ಕೋರಲಿದೆ ಎಂದು ಅವರು ಹೇಳಿದರು.
'ಆಪರೇಷನ್ ಹನಿಮೂನ್' ಎಂಬ ಸಂಕೇತನಾಮ ಹೊಂದಿರುವ ಮೇಘಾಲಯ ಪೊಲೀಸರು, ಇಂದೋರ್ ಮತ್ತು ಘಾಜಿಪುರದಲ್ಲಿ ಆರೋಪಿಗಳು ಹೆಚ್ಚಾಗಿ ಭೇಟಿ ನೀಡಿದ ನಿವಾಸಗಳು ಮತ್ತು ಇತರ ಸ್ಥಳಗಳಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ ಎಂದು ಸೈಯೆಮ್ ಹೇಳಿದರು.
ಕಳೆದ ತಿಂಗಳು ರಾಜಾ ರಘುವಂಶಿ ಅವರನ್ನು ಪಿತೂರಿ ನಡೆಸಿ ಹತ್ಯೆ ಮಾಡಿದ ಆರೋಪದ ಮೇಲೆ ಸೋನಮ್ ಮತ್ತು ಆಕೆಯ ಪ್ರಿಯಕರ ರಾಜ್ ಕುಶ್ವಾಹ್ ಮತ್ತು ಇತರರನ್ನು ಮಧ್ಯಪ್ರದೇಶದ ಇಂದೋರ್ ಮತ್ತು ಉತ್ತರ ಪ್ರದೇಶದ ಘಾಜಿಪುರದಲ್ಲಿ ಬಂಧಿಸಲಾಯಿತು. ಇಂದೋರ್‌ನ ಆರೋಪಿಗಳಿಗೆ ಆರು ದಿನಗಳ ಮತ್ತು ಘಾಜಿಪುರದಿಂದ ಬಂಧಿತನಾದ ಒಬ್ಬನಿಗೆ ಮೂರು ದಿನಗಳ ಕಸ್ಟಡಿ ವಿಧಿಸಲಾಗಿದೆ ಎಂದು ಅವರು ಹೇಳಿದರು.
ಆಕೆ ಮುಗ್ದೆಯಲ್ಲ.. ಆಕೆಯ ಹಿಂದೆ ಹಲವರ ಕೈವಾಡವಿದೆ: ರಾಜಾ ತಂದೆ ಅಶೋಕ್ ರಘುವಂಶಿ
ಇದೇ ವೇಳೆ ಸೋನಂ ಕುರಿತು ಮಾತನಾಡಿರುವ ಹತ್ಯೆಗೀಡಾದ ರಾಜಾ ರಘುವಂಶಿಯ ತಂದೆ ಅಶೋಕ್ ರಘುವಂಶಿ, "ಸೋನಮ್ ರಘುವಂಶಿಯನ್ನು ಕಠಿಣವಾಗಿ ಪ್ರಶ್ನಿಸಿದರೆ, ಪ್ರಕರಣದ ಹಲವು ಸಂಗತಿಗಳು ಹೊರಬರುತ್ತವೆ. ಒಬ್ಬ ಮಹಿಳೆ ಇದನ್ನು ಒಬ್ಬಂಟಿಯಾಗಿ ಮಾಡಲು ಸಾಧ್ಯವಿಲ್ಲ. ಇದರಲ್ಲಿ ಇತರರು ಭಾಗಿಯಾಗಿರಬೇಕು. ಆಕೆಗೆ 'ಮಂಗಳ ದೋಷ' ಇತ್ತು. ಅದಾಗ್ಯೂ ನಾವು ಮದುವೆ ಮಾಡಿದೆವು. ಆದರೆ ಆಕೆ ತನ್ನ ಗಂಡನನ್ನು ಕೊಂದು ಬೇರೊಬ್ಬರನ್ನು ಮದುವೆಯಾಗಲು ಯೋಚಿಸಿದಳು. ನನ್ನ ಮಗ ತುಂಬಾ ಮುಗ್ಧನಾಗಿದ್ದನು'' ಎಂದು ಅಳಲು ತೋಡಿಕೊಂಡಿದ್ದಾರೆ.
Advertisement