ಅಹಮದಾಬಾದ್ Air india ವಿಮಾನ ದುರಂತ: ಅಧಿಕಾರಿಗಳಿಂದ ತನಿಖೆ ಆರಂಭ: ಘಟನಾ ಸ್ಥಳಕ್ಕೆ ಮೋದಿ ಭೇಟಿ, ಗಾಯಾಳು ಆರೋಗ್ಯ ವಿಚಾರಿಸಿದ ಪ್ರಧಾನಿ
ನವದೆಹಲಿ: 230 ಮಂದಿ ಪ್ರಯಾಣಿಕರು ಹಾಗೂ 12 ಮಂದಿ ಸಿಬ್ಬಂದಿಗಳ ಸಾವಿಗೆ ಕಾರಣವಾದ ಅಹಮದಾಬಾದ್ ವಿಮಾನ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಶುಕ್ರವಾರ ತನಿಖೆ ಆರಂಭಿಸಿದ್ದು, ಈ ನಡುವಲ್ಲೇ ಘಟನಾ ಸ್ಥಳಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭೇಟಿ ನೀಡಿದ್ದಾರೆ.
ಪ್ರಕರಣ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಾಪು ಅವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಅಹಮದಾಬಾದ್‌ನಲ್ಲಿ ನಡೆದ ದುರಂತ ಘಟನೆಯ ನಂತರ, ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ ನಿಗದಿಪಡಿಸಿರುವ ಅಂತರರಾಷ್ಟ್ರೀಯ ನಿಯಮಗಳಿಗೆ ಅನುಗುಣವಾಗಿ ವಿಮಾನ ಅಪಘಾತ ತನಿಖಾ ಬ್ಯೂರೋ (ಇದು ನಾಗರಿಕ ವಿಮಾನಯಾನ ಸಚಿವಾಲಯದ ಅಡಿಯಲ್ಲಿ ಸ್ವತಂತ್ರ ನಿಯಂತ್ರಕ ಸಂಸ್ಥೆಯಾಗಿದೆ) ಔಪಚಾರಿಕ ತನಿಖೆಯನ್ನು ಪ್ರಾರಂಭಿಸಿದೆ ಎಂದು ಹೇಳಿದ್ದಾರೆ.
ಹೆಚ್ಚುವರಿಯಾಗಿ, ದುರ್ಘಟನೆಯ ಕುರಿತು ವಿವರವಾಗಿ ಪರಿಶೀಲಿಸಲು ಸರ್ಕಾರ ಕೂಡ ಬಹು ವಿಭಾಗಗಳ ತಜ್ಞರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸುತ್ತಿದೆ ಎಂದು ತಿಳಿಸಿದ್ದಾರೆ.
ವಿಮಾನ ದುರಂತ ಘಟನೆಯ ಬಳಿಕ ವಿಮಾನ ನಿಲ್ದಾಣದಲ್ಲಿ ಎಲ್ಲಾ ವಿಮಾನ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಘಟನೆ ಬೆನ್ನಲ್ಲೇ ವಿಮಾನ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಅತ್ಯಂತ ಎಚ್ಚರಿಕೆಯಿಂದ ಅನುಸರಿಸಲಾಗುತ್ತಿದ್ದು, ಅಹಮದಾಬಾದ್ ವಿಮಾನ ನಿಲ್ದಾಣವು ಸಂಜೆ 4.05 ರಿಂದ ವಿಮಾನ ಕಾರ್ಯಾಚರಣೆಗಳಿಗೆ ಲಭ್ಯವಿರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದುರಂತಕ್ಕೀಡಾದ AI-171 ವಿಮಾನದಲ್ಲಿ ಇಬ್ಬರು ಮಕ್ಕಳು ಮತ್ತು 10 ಸಿಬ್ಬಂದಿ ಸೇರಿದಂತೆ 232 ಪ್ರಯಾಣಿಕರಿದ್ದರು ಎಂದು ವಾಯುಯಾನ ನಿಯಂತ್ರಕ, ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಮಾಹಿತಿ ನೀಡಿದೆ.
ವಿಮಾನವು ಮಧ್ಯಾಹ್ನ 1.38 ಕ್ಕೆ ಹೊರಟಿದ್ದು, ಟೇಕ್ ಆಫ್ ಆದ ಐದು ನಿಮಿಷಗಳಲ್ಲೇ ವಸತಿ ಪ್ರದೇಶವಾದ ಮೇಘಾನಿ ನಗರದಲ್ಲಿ ಕುಸಿದು ಬಿದ್ದಿದೆ. ಪೈಲಟ್ ಇನ್ ಕಮಾಂಡ್ ಸುಮಿತ್ ಸಭರ್ವಾಲ್ ಮತ್ತು ಸಹ-ಪೈಲಟ್ ಕ್ಲೈವ್ ಕುಂದರ್ ಕಾಕ್‌ಪಿಟ್‌ನಲ್ಲಿದ್ದರು. ದೂರದಿಂದಲೇ ಹೊಗೆ ಸ್ಪಷ್ಟವಾಗಿ ಕಾಣಿಸಿಕೊಂಡಿತ್ತು ಎಂದು ಅದು ಹೇಳಿದೆ.
ಈ ನಡುವೆ ಘಟನಾ ಸ್ಥಳಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭೇಟಿ ನೀಡಿದ್ದು, ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆಂದು ತಿಳಿದುಬಂದಿದೆ.
ಮೋದಿಯವರು ಇಲ್ಲಿನ ಸರ್ದಾರ್ ವಲ್ಲಭಭಾಯಿ ಪಟೇಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿ ನೇರವಾಗಿ ಮೇಘನಿನಗರ ಪ್ರದೇಶದ ಅಪಘಾತದ ಸ್ಥಳಕ್ಕೆ ಕಾರಿನಲ್ಲಿ ಭೇಟಿ ನೀಡಿದ್ದಾರೆಂದು ತಿಳಿದುಬಂದಿದೆ. ಪ್ರಧಾನಿ ಮೋದಿ ಅವರೊಂದಿಗೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್. ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಾಪು, ಕೇಂದ್ರ ಸಚಿವ ಮುರಳೀಧರ್ ಮೊಹೋಲ್ ಮತ್ತು ರಾಜ್ಯ ಗೃಹ ಸಚಿವ ಹರ್ಷ ಸಂಘವಿ ಸಾಥ್ ನೀಡಿದ್ದಾರೆಂದು ವರದಿಗಳು ತಿಳಿಸಿವೆ.
ದುರ್ಘಟನೆಯಲ್ಲಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುವನ್ನು ಮೋದಿಯವರು ಭೇಟಿಯಾಗಿದ್ದು, ಆರೋಗ್ಯ ವಿಚಾರಿಸಿದ್ದಾರೆ.

