
ಅಹಮದಾಬಾದ್: ಆಯಸ್ಸು ಗಟ್ಟಿಗಿದ್ದರೆ ಎಷ್ಟೇ ದೊಡ್ಡ ಅಪಾಯ ಎದುರಾದರೂ ಕೂದಲೆಳೆ ಅಂತರದಲ್ಲಿ ಪಾರಾಗ್ತಾರೆ ಎಂಬ ಮಾತು ಅನೇಕ ಸಲ ಸತ್ಯವೆನಿಸಿಕೊಂಡಿದೆ. ಇದೀಗ ಈ ಮಾತಿಗೆ ಅಹಮದಾಬಾದ್ ನಲ್ಲಿ ಸಂಭವಿಸಿದ ವಿಮಾನ ದುರಂತದ ವೇಳೆ ಕೂದಲೆಳೆ ಅಂತರದಲ್ಲಿ ಬದುಕುಳಿದ ಭೂಮಿ ಚೌಹಾಣ್ ಮತ್ತು ರೋಹನ್ ಬಗಾಡೆಯೇ ನಿದರ್ಶನವಾಗಿದ್ದಾರೆ.
ಏರ್ ಇಂಡಿಯಾದಲ್ಲಿ ತೆರಳಬೇಕಿದ್ದ ಭೂಮಿ ಏರ್ಪೋರ್ಟ್ ಗೆ ತಲುಪುವುದು 10 ನಿಮಿಷ ತಡವಾಗಿದ್ದಕ್ಕೆ ಜೀವ ಉಳಿಸಿಕೊಂಡಿದ್ದಾರೆ. ಮತ್ತೊಂದೆಡೆ ಹಾಸ್ಟೆಲ್ ಮೆಸ್‌ನಿಂದ 15 ನಿಮಿಷ ಮುಂಚೆ ತೆರಳಿದ್ದಕ್ಕೆ ರೋಹನ್ ಬದುಕುಳಿದಿದ್ದಾರೆ.
ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳಬೇಕಿದ್ದ ಭೂಮಿ ಟ್ರಾಫಿಕ್ ಕಾರಣದಿಂದ ವಿಮಾನ ನಿಲ್ದಾಣಕ್ಕೆ 10 ನಿಮಿಷ ತಡವಾಗಿ ಬಂದಿದ್ದರು. ಇದು ಅವರ ಜೀವ ಉಳಿಯಲು ಕಾರಣವಾಗಿದೆ.
ಈ ಬಗ್ಗೆ ಸ್ವತಃ ಭೂಮಿಯವರೇ ಪ್ರತಿಕ್ರಿಯಿಸಿದ್ದು, 'ಆ 10 ನಿಮಿಷ ತಡವಾಗಿದ್ದ ಕಾರಣಕ್ಕೆ ವಿಮಾನ ಹತ್ತಲು ಆಗಲಿಲ್ಲ. ಇದನ್ನು ಹೇಗೆ ವಿವರಿಸಬೇಕೆಂದು ತಿಳಿಯುತ್ತಿಲ್ಲ. ನನ್ನ ದೇಹ ಅಕ್ಷರಶಃ ನಡುಗುತ್ತಿದೆ. ದೇವರಿಗೆ ಕೃತಜ್ಞತೆ ಸಲ್ಲಿಸುವೆ' ಎಂದು ಹೇಳಿದ್ದಾರೆ.
ಇನ್ನು ಮತ್ತೊಂದು ಘಟನೆಯಲ್ಲಿ ಬಿ.ಜೆ ಆಸ್ಪತ್ರೆಯ ಇಂಟರ್ನಿ ರೋಹನ್ ಬಗಾಡೆ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.
ರೋಹನ್ ದುರಂತ ನಡೆದ ಹಾಸ್ಟೆಲ್‌ನಲ್ಲಿದ್ದರು. ದುರಂತಕ್ಕೂ ಕೇವಲ 15 ನಿಮಿಷದ ಮುನ್ನ ಊಟ ಮಾಡಿ ಮೆಸ್‌ನಿಂದ ತೆರಳಿ ಜೀವ ಉಳಿಸಿಕೊಂಡಿದ್ದಾರೆ.
ಈ ಬಗ್ಗೆ ರೋಹನ್ ಪ್ರತಿಕ್ರಿಯಿಸಿದ್ದು, 'ನಾನು ಇನ್ನು 15 ನಿಮಿಷಗಳ ಕಾಲ ಆ ಸ್ಥಳದಲ್ಲೇ ಇದ್ದಿದ್ದರೆ ಗಾಯಗೊಂಡ ಅನೇಕರಲ್ಲಿ ನಾನೂ ಒಬ್ಬನಾಗುತ್ತಿದ್ದೆ. ಆಗಷ್ಟೇ ಮೆಸ್‌ನಲ್ಲಿ ಊಟ ಮುಗಿಸಿ ಹಾಸ್ಟೆಲ್‌ಗೆ ತೆರಳಿದ್ದೆ. ಆಗ ದೊಡ್ಡ ಶಬ್ದ ಕೇಳಿಸಿತು. ಹೊರಬಂದು ನೋಡಿದಾಗ ವಿಮಾನ ಪತನವಾಗಿ ಆಕಾಶ ಕಪ್ಪು ಹೊಗೆಯಿಂದ ತುಂಬಿತ್ತು ಎಂದು ಹೇಳಿದ್ದಾರೆ.
Advertisement