
ನವದೆಹಲಿ: ಅಹ್ಮದಾಬಾದ್ ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದು, ಅಚ್ಚರಿ ಎಂದರೆ ಈ ವಿಮಾನ ದುರಂತ ಸಂಭವಿಸಿದ ದಿನ ಬೆಳಗ್ಗೆ ಪತ್ರಿಕೆಯೊಂದರ ಜಾಹಿರಾತು ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ಗುಜರಾತ್ನ ಅಹಮದಾಬಾದ್‌ನಿಂದ (Ahmedabad Plane Crash) ಗ್ಯಾಟ್ವಿಕ್ (ಇಂಗ್ಲೆಂಡ್)ಗೆ ಹೋಗುತ್ತಿದ್ದ ಏರ್ ಇಂಡಿಯಾ ಎಐ 171 ವಿಮಾನ ಟೇಕ್ ಆಫ್ ಆದ ಕೇವಲ ಐದೇ ನಿಮಿಷದಲ್ಲಿ ಪತನಗೊಂಡಿತು. ವಿಮಾನದಲ್ಲಿ 10 ಸಿಬ್ಬಂದಿ, ಇಬ್ಬರು ಪೈಲಟ್ ಗಳು ಸೇರಿದಂತೆ 242 ಜನರು ಈ ವಿಮಾನದಲ್ಲಿದ್ದರು. ಈ ಪೈಕಿ 241 ಮಂದಿ ಸಾವನ್ನಪ್ಪಿದ್ದಾರೆ. ವಿಮಾನದಲ್ಲಿ 169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸ್ ಮತ್ತು ಒಬ್ಬ ಕೆನಡಾದ ಪ್ರಯಾಣಿಕ ಇದ್ದರು.
ಈ ವಿಮಾನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಇದ್ದ ಡಾಕ್ಟರ್ ಹಾಸ್ಟೆಲ್ನೊಳಗೆ ನುಗ್ಗಿ ಅಲ್ಲಿಯೇ ಸ್ಫೋಟಗೊಂಡಿದೆ. ಇದರಿಂದ ವಿಮಾನದಲ್ಲಿರುವ ಪ್ರಯಾಣಿಕರು ಮಾತ್ರವಲ್ಲದೆ 5 ವೈದ್ಯಕೀಯ ವಿದ್ಯಾರ್ಥಿಗಳು ಕೂಡ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಅಪಘಾತ ಸಂಭವಿಸಿದಾಗ ಅಹಮದಾಬಾದ್‌ನ ಮೇಘನಿನಗರ ಪ್ರದೇಶದ ಬಳಿಯ ಧಾರ್ಪುರದಿಂದ ಭಾರೀ ಹೊಗೆ ಕಾಣಿಸಿಕೊಂಡಿತ್ತು. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಅಲ್ಲದೆ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿಮಾನ ದುರಂತ ಬೆನ್ನಲ್ಲೇ ಪತ್ರಿಕಾ ಜಾಹಿರಾತು ವೈರಲ್
ಇನ್ನು ಅಹ್ಮದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ದುರಂತಕ್ಕೀಡಾದ ಅದೇ ದಿನ ರಾಷ್ಟ್ರೀಯ ಆಂಗ್ಲ ಪತ್ರಿಕೆಯೊಂದರಲ್ಲಿ ಜಾಹಿರಾತು ವೈರಲ್ ಆಗುತ್ತಿದೆ. ಪ್ರವಾಸೋಧ್ಯಮಕ್ಕೆ ಕುರಿತ ಜಾಹಿರಾತಿನಲ್ಲಿ ಏರ್ ಇಂಡಿಯಾ ವಿಮಾನ ಕಟ್ಟಡದಿಂದ ಹೊರಗೆ ಬರುತ್ತಿರುವ ಚಿತ್ರವಿದ್ದು, ಆ ಚಿತ್ರದಂತೆಯೇ ನಿನ್ನೆ ಏರ್ ಇಂಡಿಯಾ ವಿಮಾನ ಬಿಜೆ ವೈದ್ಯಕೀಯ ಕಾಲೇಜು ಆಸ್ಪತ್ರೆಯ UG ಹಾಸ್ಟೆಲ್ ನ ಕಟ್ಟಡಕ್ಕೆ ಢಿಕ್ಕಿಯಾಗಿದೆ. ಇದೀಗ ಈ ಜಾಹಿರಾತು ವ್ಯಾಪಕ ವೈರಲ್ ಆಗುತ್ತಿದೆ.
ಇಷ್ಟಕ್ಕೂ ಏನದು ಜಾಹಿರಾತು?
ವಿಮಾನ ಪತನವಾದ ದಿನ ಬೆಳಗ್ಗೆ ಗುಜರಾತ್‌ನಲ್ಲಿ ಜನಪ್ರಿಯವಾಗಿರುವ ಮಿಡ್-ಡೇ ಪತ್ರಿಕೆಯು ತನ್ನ ಮುಖಪುಟದಲ್ಲಿ ಕಿಡ್‌ಝಾನಿಯಾ ಸಂಸ್ಥೆಯ ಜಾಹಿರಾತು ಪ್ರಕಟಿಸಿತ್ತು. ಮುಂಬರುವ ಫಾದರ್ಸ್ ಡೇ ವಾರಾಂತ್ಯದ ಕಾರ್ಯಕ್ರಮವನ್ನು ಪ್ರಚಾರ ಮಾಡುವ ದೊಡ್ಡ ಜಾಹೀರಾತನ್ನು ಇದು ಒಳಗೊಂಡಿತ್ತು. 4-16 ವರ್ಷ ವಯಸ್ಸಿನ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾದ ಒಳಾಂಗಣ ಚಿಕಣಿ ನಗರವಾದ ಕಿಡ್‌ಝಾನಿಯಾ, ಮಕ್ಕಳು ಪೈಲಟ್‌ಗಳು, ವೈದ್ಯರು, ಅಡುಗೆಯವರು ಮತ್ತು ಎಂಜಿನಿಯರ್‌ಗಳಂತಹ ನೈಜ-ಪ್ರಪಂಚದ ವೃತ್ತಿಗಳನ್ನು ನಿರ್ವಹಿಸಲು ಇದು ಅನುವು ಮಾಡಿಕೊಡುತ್ತದೆ.
ಈ ಜಾಹೀರಾತು ಶೈಲೀಕೃತ ಕಾರ್ಟೂನ್ ನಗರದೃಶ್ಯವನ್ನು ಒಳಗೊಂಡಿತ್ತು, ಪ್ರಮುಖವಾಗಿ ಬ್ರಾಂಡ್ ಮಾಡಲಾದ ಏರ್ ಇಂಡಿಯಾ ವಿಮಾನವು ಕಟ್ಟಡದ ಮುಂಭಾಗದಿಂದ ಹೊರಹೊಮ್ಮಿತು. ಏರ್ ಇಂಡಿಯಾದ ಡ್ರೀಮ್‌ಲೈನರ್ ವಿಮಾನ ಅಹಮದಾಬಾದ್ ವೈದ್ಯಕೀಯ ಕಾಲೇಜು ಹಾಸ್ಟೆಲ್‌ಗೆ ಡಿಕ್ಕಿ ಹೊಡೆದು ಐದು ಜನರನ್ನು ಕೊಂದ ನೈಜ-ಜೀವನದ ದುರಂತವನ್ನು ಪ್ರತಿಧ್ವನಿಸುವ ದೃಶ್ಯ ಇದಾಗಿತ್ತು.
ಏರ್ ಇಂಡಿಯಾ ಸಹಭಾಗಿತ್ವ
ಇನ್ನು ಕಿಡ್‌ಝಾನಿಯಾ ಸಂಸ್ಥೆಯೊಂದಿಗೆ ಏರ್ ಇಂಡಿಯಾ ಕೂಡ ಕೈ ಜೋಡಿಸಿದ್ದು, ಈ ಕುರಿತ ವಿಡಿಯೋದಲ್ಲಿ "ಕನಸುಗಳು ಇಲ್ಲಿ ಪ್ರಾರಂಭವಾಗುತ್ತವೆ! ದೆಹಲಿ-NCR ನಲ್ಲಿರುವ @KidZaniaIndia ನಲ್ಲಿ ಏರ್ ಇಂಡಿಯಾ ವಾಯುಯಾನ ಅಕಾಡೆಮಿಯ ಭವ್ಯ ಉದ್ಘಾಟನೆಯೊಂದಿಗೆ ವಾಯುಯಾನ ಶ್ರೇಷ್ಠತೆಯ ಹೊಸ ಅಧ್ಯಾಯ ಪ್ರಾರಂಭವಾಗುತ್ತದೆ. ಫ್ಲೈಟ್ ಸಿಮ್ಯುಲೇಟರ್ ಅನ್ನು ನ್ಯಾವಿಗೇಟ್ ಮಾಡುವುದಾಗಲಿ ಅಥವಾ ವಿಮಾನ ನಿಲ್ದಾಣದ ಕಾರ್ಯಾಚರಣೆಗಳ ಬಗ್ಗೆ ಕಲಿಯುವುದಾಗಲಿ, ಕಿಡ್‌ಝಾನಿಯಾದ ಏರ್ ಇಂಡಿಯಾ ವಾಯುಯಾನ ಅಕಾಡೆಮಿಯು ಹಾರಾಟದ ಕನಸುಗಳು ಪ್ರಾರಂಭವಾಗುವ ಸ್ಥಳವಾಗಿದೆ. ನೀವು ಇನ್ನೂ ನಿಮ್ಮ ವಾಯುಯಾನ ಸಾಹಸವನ್ನು ಪ್ರಾರಂಭಿಸಿದ್ದೀರಾ?" ಎಂದು ಟ್ವೀಟ್ ಮಾಡಿದೆ.
ಕಾಕತಾಳಿಯವೋ, ದುರಂತದ ಮುನ್ಸೂಚನೆಯೋ?
ಇನ್ನು ಈ ಜಾಹಿರಾತು ಕುರಿತು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಈ ಹಿಂದೆ ಸಿಂಪ್ಸನ್ ವಿಡಿಯೋಗಳು ಇದೇ ರೀತಿ ಭವಿಷ್ಯವಾಣಿ ನುಡಿದು ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಇದೀಗ ಮಿಡ್ ಡೇ ಪತ್ರಿಕೆಯ ಈ ಜಾಹಿರಾತು ಕೂಡ ಪರೋಕ್ಷವಾಗಿ ನಿಜವಾಗಿದ್ದು, ಇದು ಕಾಕತಾಳಿಯವೋ, ದುರಂತದ ಮುನ್ಸೂಚನೆಯೋ? ನೆಟ್ಟಿಗರು ಚರ್ಚೆ ನಡೆಸಿದ್ದಾರೆ.
ದುರಂತದ ಕುರಿತು ಕಿಡ್‌ಝಾನಿಯಾ ಆಘಾತ
ಇದೇ ವೇಳೆ ದುರಂತ ಅಪಘಾತದ ಬಗ್ಗೆ ದುಃಖ ವ್ಯಕ್ತಪಡಿಸಿದ ಕಿಡ್‌ಝಾನಿಯಾ ಇಂಡಿಯಾ, ತಮ್ಮ ಕುಟುಂಬಗಳನ್ನು ದುಃಖಿಸುತ್ತಿರುವ ಕುಟುಂಬಗಳೊಂದಿಗೆ ಒಗ್ಗಟ್ಟಿನಲ್ಲಿ ನಿಲ್ಲುವುದಾಗಿ ಹೇಳಿದೆ. "ಬಾಧಿತರಾದ ಎಲ್ಲರಿಗೂ ನಮ್ಮ ಹೃತ್ಪೂರ್ವಕ ಸಂತಾಪಗಳು" ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಅಂತೆಯೇ "ಮಿಡ್-ಡೇ ಪತ್ರಿಕೆಯಲ್ಲಿ ಪ್ರಕಟವಾದ ಜಾಹೀರಾತಿಗೆ ಸಂಬಂಧಿಸಿದಂತೆ, ವಿಮಾನದ ಚಿತ್ರವು ವಿಶ್ವಾದ್ಯಂತ ಕಿಡ್‌ಝಾನಿಯಾ(ಗಳು) ನಲ್ಲಿ ಜಾಗತಿಕವಾಗಿ ಗುರುತಿಸಲ್ಪಟ್ಟ ವಾಸ್ತುಶಿಲ್ಪದ ಅಂಶವಾಗಿದೆ ಮತ್ತು ಏರ್ ಇಂಡಿಯಾ ಸೇರಿದಂತೆ ಪ್ರಮುಖ ವಿಮಾನಯಾನ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಮ್ಮ ವಾಯುಯಾನ ಅಕಾಡೆಮಿಯನ್ನು ಪ್ರತಿನಿಧಿಸುತ್ತದೆ ಎಂದು ನಾವು ಸ್ಪಷ್ಟಪಡಿಸುತ್ತೇವೆ.
ಪೂರ್ವ-ಯೋಜಿತ ಬೇಸಿಗೆ ಅಭಿಯಾನದ ಭಾಗವಾಗಿ ಇದು ನಮ್ಮ ವಾಯುಯಾನ ಅಕಾಡೆಮಿಯನ್ನು ಪ್ರತಿನಿಧಿಸುತ್ತದೆ. ಬಹಳ ಹಿಂದೆಯೇ ಜಾಹೀರಾತನ್ನು ಸಲ್ಲಿಸಲಾಗಿತ್ತು. ಈ ದುರಂತದ ಬಗ್ಗೆ ನಾವು ಸಂವೇದನಾಶೀಲರಾಗಿದ್ದೇವೆ ಮತ್ತು ಹೇಳಲಾದ ದೃಶ್ಯದ ಯಾವುದೇ ಹೆಚ್ಚಿನ ಪ್ರಚಾರವನ್ನು ಸ್ಥಗಿತಗೊಳಿಸಿದ್ದೇವೆ" ಎಂದು ಸಂಸ್ಥೆ ಹೇಳಿದೆ.
Advertisement