
ಅಹ್ಮದಾಬಾದ್: ಅಹ್ಮದಾಬಾದ್ ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ ರಮೇಶ್ ವಿಶ್ವಾಸ್ ಕುಮಾರ್ ಅವರ ಸೀಟ್ ನಂಬರ್ 11 ಎ..
ಅಚ್ಚರಿ ಎಂದರೆ ಈಗ್ಗೇ 3 ದಶಕಗಳ ಹಿಂದೆ ನಡೆದಿದ್ದ ವಿಮಾನ ದುರಂತದಲ್ಲೂ ಇದೇ 11 ಎ ಸೀಟ್ ನಲ್ಲಿ ಕುಳಿತಿದ್ದ ಪ್ರಯಾಣಿಕ ಬದುಕುಳಿದಿದ್ದ ಅಂಶ ಇದೀಗ ಬೆಳಕಿಗೆ ಬಂದಿದೆ.
270ಕ್ಕೂ ಅಧಿಕ ಮಂದಿ ಸಾವಿಗೀಡಾದ ಏರ್ ಇಂಡಿಯಾ ವಿಮಾನ ದುರಂತ ಪ್ರಕರಣದ ಕುರಿತು ದಿನಕ್ಕೊಂದು ಕುತೂಹಲಕಾರಿ ಮಾಹಿತಿ ಲಭ್ಯವಾಗುತ್ತಿದ್ದು, ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ತಮ್ಮ ಲಕ್ಕಿ ನಂಬರ್ ದಿನವೇ ಸಾವನ್ನಪ್ಪಿದ್ದಾರೆ.
ಇತ್ತ ತನ್ನ ಪತ್ನಿ ಅಸ್ಥಿ ವಿಸರ್ಜಿಸಲು ಬಂದ ಲಂಡನ್ ಪ್ರಜೆ ಕೂಡ ಇದೇ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಇಂತಹ ಹಲವು ಹೃದಯ ವಿದ್ರಾವಕ ಕಥೆಗಳು ಈ ವಿಮಾನ ದುರಂತದಲ್ಲಿ ಬೆಳಕಿಗೆ ಬರುತ್ತಿವೆ.
ಆಗ Thai Airways, ಈಗ Air India: ಪ್ರಯಾಣಿಕರ ಜೀವ ಉಳಿಸಿದ 11A ಸೀಟು
ಇನ್ನು ಏರ್ ಇಂಡಿಯಾ ವಿಮಾನ ದುರಂತದಲ್ಲಿ ಈ ವರೆಗೂ ಸಾವನ್ನಪ್ಪಿದವರ ಸಂಖ್ಯೆ 270ರ ಗಡಿ ದಾಟಿದ್ದು, ವಿಮಾನದಲ್ಲಿದ್ದ 241 ಪ್ರಯಾಣಿಕರು ಮತ್ತು ಸಿಬ್ಬಂದಿ, ಹಾಸ್ಟೆಲ್ ಕಟ್ಟಡದಲ್ಲಿದ್ದವರು ಸೇರಿ ಸಾವ್ನಪ್ಪಿದವರ ಸಂಖ್ಯೆ 270ರ ಗಡಿ ದಾಟಿದೆ. ಇಡೀ ಪ್ರಕರಣದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ ಎಂದರೆ ಅದು ರಮೇಶ್ ವಿಶ್ವಾಸ್ ಕುಮಾರ್.. ಅವರು ಕುಳಿತಿದ್ದ ಸೀಟ್ ಅವರ ಪ್ರಾಣ ಉಳಿಸಿತು ಎಂದರೆ ಅಚ್ಚರಿಯಾಗಬಹುದು.
ವಿಮಾನದ 11ಎ ಸೀಟು ತುರ್ತು ನಿರ್ಗಮನ ಡೋರ್ ನ ಸಮೀಪದ ಸೀಟ್. ಇದೇ ಸೀಟ್ ರಮೇಶ್ ವಿಶ್ವಾಸ್ ಕುಮಾರ್ ಅವರ ಜೀವ ಉಳಿಸಿದ ರೋಚಕ ಕಥೆ ವ್ಯಾಪಕ ವೈರಲ್ ಆಗಿರುವಂತೆಯೇ ಇಂತಹುದೇ ಘಟನೆ ಬರೊಬ್ಬರಿ 3 ದಶಕಗಳ ಹಿಂದೆ ಕೂಡ ನಡೆದಿತ್ತು ಎನ್ನಲಾಗಿದೆ.
ಹೌದು.. 1998 ರಲ್ಲಿ ಥೈಲ್ಯಾಂಡ್‌ನಲ್ಲಿ ಸಂಭವಿಸಿದ್ದ ಭೀಕರ ವಿಮಾನ ಅಪಘಾತದಲ್ಲೂ ಇದೇ ರೀತಿ ಸೀಟ್ ನಂಬರ್ 11ಎ ನಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರು ಪವಾಡಸದೃಶವಾಗಿ ಪಾರಾಗಿದ್ದರು.
3 ದಶಕಗಳ ಹಿಂದಿನ ಕರಾಳ ಅನುಭವ ಬಿಚ್ಚಿಟ್ಟ ಥೈಲ್ಯಾಂಡ್‌ನ ನಟ-ಗಾಯಕ
ಇನ್ನು ಏರ್ ಇಂಡಿಯಾದ ರಮೇಶ್ ವಿಶ್ವಾಸ್ ಕುಮಾರ್ ರೀತಿಯಲ್ಲೇ 1998ರಲ್ಲೂ 11A ಸೀಟ್ ನಲ್ಲಿ ಕುಳಿತಿದ್ದ ಪ್ರಯಾಣಿಕ ಪವಾಡಸದೃಶ ಪಾರಾಗಿದ್ದ ವಿಚಾರ ಬೆಳಕಿಗೆ ಬಂದಿದೆ. ಥೈಲ್ಯಾಂಡ್‌ನ ನಟ ಮತ್ತು ಗಾಯಕ ಜೇಮ್ಸ್ ರುವಾಂಗ್ಸಾಕ್ ಲೊಯ್ಚುಸಾಕ್, ಏರ್ ಇಂಡಿಯಾ ವಿಮಾನ ದುರಂತ ವಿಚಾರ ಕೇಳಿ ಆಘಾತಕ್ಕೊಳಗಾಗಿದ್ದರು.
ಪ್ರಮುಖವಾಗಿ ವಿಮಾನದ 11ಎ ಸೀಟಿನಲ್ಲಿದ್ದ ಪ್ರಯಾಣಿಕ ಪಾರಾದ ಸುದ್ದಿಕೇಳಿ ಅಚ್ಚರಿಗೊಂಡಿದ್ದಾರೆ. ಅವರ ಅಚ್ಚರಿಗೆ ಕಾರಣ ಎಂದರೆ 27 ವರ್ಷಗಳ ಹಿಂದೆ ತಾವೂ ಕೂಡ ಇದೇ ರೀತಿ 11 ಸೀಟ್ ನಲ್ಲಿ ಕುಳಿತ ಅಪಘಾತದಿಂದ ಪವಾಡ ಸದೃಶ ಪಾರಾಗಿದ್ದರು.
ಅಂದು ಆಗಿದ್ದೇನು?
47 ವರ್ಷದ ಲೊಯ್ಚುಸಾಕ್, 1998 ರಲ್ಲಿ ಥಾಯ್ ಏರ್‌ವೇಸ್ ವಿಮಾನ TG261 ನಲ್ಲಿ ಪ್ರಯಾಣಿಸಿದ್ದರು. ಬ್ಯಾಂಕಾಕ್‌ನಿಂದ ಹೊರಟಿದ್ದ ವಿಮಾನ ದಕ್ಷಿಣ ಥೈಲ್ಯಾಂಡ್‌ನ ಸೂರತ್ ಥಾನಿ ನಗರದಲ್ಲಿ ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾಯಿತು. ಆದರೆ ಇಳಿಯುವ ಸಮಯದಲ್ಲಿ, ಅದು ಗಾಳಿಯಲ್ಲಿ ನಿಂತು ಅಪಘಾತಕ್ಕೀಡಾಯಿತು, ವಿಮಾನದಲ್ಲಿದ್ದ 146 ಜನರಲ್ಲಿ 101 ಜನರು ಸಾವನ್ನಪ್ಪಿದರು. ಅವರು ಬದುಕುಳಿದವರ ಪೈಕಿ ಲೊಯ್ಚುಸಾಕ್ ಕೂಡ ಒಬ್ಬರಾಗಿದ್ದರು. ಅಚ್ಚರಿ ಎಂದರೆ ಲೊಯ್ಚುಸಾಕ್ ಕೂಡ ಆ ವಿಮಾನದ 11A ಸೀಟ್ ನಲ್ಲಿ ಕುಳಿತಿದ್ದರು ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ.
ಈ ಬಗ್ಗೆ ಲೊಯ್ಚುಸಾಕ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, "ಭಾರತದಲ್ಲಿ ವಿಮಾನ ಅಪಘಾತದಿಂದ ಬದುಕುಳಿದವರು. ಅವರು ನನ್ನಂತೆಯೇ ಅದೇ 11A ಸೀಟಿನಲ್ಲಿ ಕುಳಿತಿದ್ದರು ಎಂದು ಬರೆದುಕೊಂಡಿದ್ದಾರೆ.
Advertisement