
ಅಹ್ಮದಾಬಾದ್: ಏರ್ ಇಂಡಿಯಾ ವಿಮಾನ ದುರಂತದ ವೇಳೆ ಸಾವನ್ನಪ್ಪಿದ 241 ಮಂದಿಯ ಪೈಕಿ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಕೂಡ ಇದ್ದರು. ಆದರೆ ರೂಪಾನಿ ತಮ್ಮ ಲಕ್ಕಿ ನಂಬರ್ 1206 ಅಂದರೆ ಜೂನ್ 12ರಂದೇ ಪ್ರಯಾಣಿಸಬೇಕು ಎಂದು ನಿರ್ಣಯಿಸಿರಲಿಲ್ಲ ಎಂದು ಹೇಳಲಾಗಿದೆ.
ಜೂನ್ 12 ರಂದು ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾದ ಏರ್ ಇಂಡಿಯಾ 787-8 ಡ್ರೀಮ್‌ಲೈನರ್‌ನಲ್ಲಿದ್ದ 242 ಜನರಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಒಬ್ಬರು. ಈ ದುರಂತದಲ್ಲಿ ಒಬ್ಬರು ಮಾತ್ರ ಬದುಕುಳಿದಿದ್ದರು. ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 241 ಜನರು ಸಾವನ್ನಪ್ಪಿದ್ದಾರೆ.
ಆದರೆ, ಜೂನ್ 12 ರಂದು ತಮ್ಮ ಪತ್ನಿ ಮತ್ತು ಮಗಳನ್ನು ಭೇಟಿಯಾಗಲು ಲಂಡನ್‌ಗೆ ಹಾರುವುದು ರೂಪಾನಿ ಅವರ ಮೊದಲ ಆಯ್ಕೆಯಾಗಿರಲಿಲ್ಲ. ಅವರು ಒಂದಲ್ಲ ಎರಡು ಬಾರಿ ಟಿಕೆಟ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ದರು.
ಈ ಬಗ್ಗೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದ್ದು, ವಿಜಯ್ ರೂಪಾನಿ ಮೊದಲು ಮೇ 19 ರಂದು AI171 ವಿಮಾನದಲ್ಲಿ ಟಿಕೆಟ್ ಕಾಯ್ದಿರಿಸಿದ್ದರು ಮತ್ತು ಜೂನ್ 25 ರಂದು ಭಾರತಕ್ಕೆ ಹಿಂತಿರುಗಲು ಉದ್ದೇಶಿಸಿದ್ದರು. ಆದರೆ ಬದಲಾದ ಪರಿಸ್ಥಿತಿಯಲ್ಲಿ ರೂಪಾನಿ ತಮ್ಮ ಪ್ರಯಾಣದಲ್ಲಿ ಬದಲಾವಣೆ ಮಾಡಿದ್ದರು.
ಮೇ 19 ರಂದು ತಮ್ಮ ಟಿಕೆಟ್ ಅನ್ನು ರದ್ದುಗೊಳಿಸಿದರು ಮತ್ತು ಜೂನ್ 5 ರಂದು ಲಂಡನ್ ಗೆ ತೆರಳಲು ನಿರ್ಧರಿಸಿ ಟಿಕೆಟ್ ಬುಕ್ ಮಾಡಿದ್ದರು. ಆದರೆ ಜೂನ್ 5ಕ್ಕೆ ಬುಕ್ ಆಗಿದ್ದ ಟಿಕೆಟ್ ಅನ್ನೂ ಕೂಡ ರೂಪಾನಿ ರದ್ದು ಮಾಡಿದ್ದರು ಎನ್ನಲಾಗಿದೆ.
ಇದಾದ ಬಳಿಕ ರೂಪಾನಿ ಜೂನ್ 12 ರಂದು AI 171 ವಿಮಾನದಲ್ಲಿ ಸೀಟ್ ಸಂಖ್ಯೆ 12D ಅನ್ನು ಬುಕ್ ಮಾಡಿದರು. ಆದರೆ ಅದು ಟೇಕಾಫ್ ಆದ ಕೆಲವೇ ನಿಮಿಷದಲ್ಲಿ ಅಪಘಾತಕ್ಕೀಡಾಯಿತು. ರನ್‌ವೇಯಿಂದ ತೆಗೆದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ವಿಮಾನವು ಕೇವಲ 32 ಸೆಕೆಂಡುಗಳ ಕಾಲ ಗಾಳಿಯಲ್ಲಿದ್ದು, ನಂತರ ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿರುವ ಬಿಜೆ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ ಎಂದು ತೋರಿಸಿದೆ.
ಅಪಘಾತದ ನಂತರ ಒಂದು ದೊಡ್ಡ ಬೆಂಕಿಯ ಚೆಂಡು ಕಾಣಿಸಿಕೊಂಡು, ಹಾಸ್ಟೆಲ್ ಕಟ್ಟಡಕ್ಕೆ ಹಾನಿಯಾಗಿದೆ. ವಿಮಾನದಲ್ಲಿದ್ದ ಅಪಾರ ಪ್ರಮಾಣದ ಇಂಧನ ವಿಮಾನ ಢಿಕ್ಕಿಯಾಗುತ್ತಲೇ ಸ್ಫೋಟಗೊಂಡು ಇಡೀ ಕಟ್ಟಡ ಮತ್ತು ಅದರ ಸಮೀಪದ ಕಟ್ಟಡಗಳಿಗೆ ಬೆಂಕಿ ತಗುಲುವಂತೆ ಮಾಡಿದೆ. ಇದು ವಿಮಾನದ ಪ್ರಯಾಣಿಕರು ಮಾತ್ರವಲ್ಲದೇ ವಿಮಾನ ಢಿಕ್ಕಿಯಾದ ಹಾಸ್ಟೆಲ್ ಕಟ್ಟಡದ ವಿದ್ಯಾರ್ಥಿಗಳೂ ಸಾವಿಗೀಡಾಗುವಂತೆ ಮಾಡಿದೆ.
1206 ವಿಜಯ್ ರೂಪಾನಿ ಲಕ್ಕಿ ನಂಬರ್!
ಅಂದಹಾಗೆ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಅವರ ಲಕ್ಕಿ ನಂಬರ್ 1206 ಆಗಿದ್ದು, ಈ ಸಂಖ್ಯೆಯನ್ನು ಅವರು ಅದೃಷ್ಟದ ಸಂಖ್ಯೆ ಎಂದು ಭಾವಿಸಿದ್ದರು. ಇದೇ ಕಾರಣಕ್ಕೆ ಅವರು ತಮ್ಮ ಕಾರು, ಸ್ಕೂಟರ್ ಗಳಿಗೆ ಇದೇ ಸಂಖ್ಯೆಯನ್ನು ಹೊಂದಿದ್ದರು.
ಮಾತ್ರವಲ್ಲದೇ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕವೂ ತಮ್ಮ ವಾಹನದ ಅಧಿಕೃತ ನಂಬರ್ ಪ್ಲೇಟ್‌ನಲ್ಲಿ ಈ ಸಂಖ್ಯೆಯನ್ನು ಬಳಸುತ್ತಿದ್ದರು. ಆದರೆ ದುರಂತ ವೆಂದರೆ ಇದೇ ಸಂಖ್ಯೆ ದಿನ ಅಂದರೆ 12/06 ಜೂನ್ 12ರಂದು ಅವರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
Advertisement