
ಚೆನ್ನೈ: ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕಿ ತಮಿಳಿಸೈ ಸೌಂದರರಾಜನ್ ಶನಿವಾರ ನಟ ಕಮಲ್ ಹಾಸನ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಮಲ್ ಹಾಸನ್ ತಮಿಳನ್ನು ಗೌರವಿಸುವುದಿಲ್ಲ. ನೀವು ನಿಜವಾದ ತಮಿಳಿಗರಾಗಿದ್ದರೆ, ನಿಮ್ಮ ಚಿತ್ರವನ್ನು ತಮಿಳಿನಲ್ಲಿ ಏಕೆ ನಿರ್ಮಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.
'ನಾನು ಕಮಲ್ ಹಾಸನ್ ಅವರನ್ನು ಬೆಂಬಲಿಸದಿದ್ದರೆ, ನಾನು ತಮಿಳಿಗಳಲ್ಲ ಎಂದು ಜನರು ನನಗೆ ಹೇಳುತ್ತಿದ್ದಾರೆ. ನಾನು ಕಮಲ್ ಹಾಸನ್ ಅವರನ್ನು ಕೇಳುತ್ತೇನೆ, ಅವರು ನಿಜವಾದ ತಮಿಳಿಗರೇ ಆಗಿದ್ದರೆ, ಅವರು ತಮ್ಮ ಚಿತ್ರವನ್ನು ತಮಿಳಿನಲ್ಲಿ ಏಕೆ ನಿರ್ಮಿಸಲಿಲ್ಲ?... 'ಥಗ್ ಲೈಫ್' ಎಂದರೇನು? ಅದು ತಮಿಳು ಪದಗುಚ್ಛವೇ?... ವ್ಯವಹಾರ ಅಂತ ಬಂದಾಗ, ಅವರು ತಮಿಳನ್ನು ಗೌರವಿಸುವುದಿಲ್ಲ. ವೃತ್ತಿಜೀವನದ ಉತ್ತುಂಗದಲ್ಲಿರುವಾಗಲೂ ಅವರು ತಮಿಳಿನ ಬಗ್ಗೆ ಗೌರವ ವ್ಯಕ್ತಪಡಿಸಲಿಲ್ಲ. ಅವರು ಕನ್ನಡ, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸುತ್ತಿದ್ದರು' ಎಂದು ಸೌಂದರರಾಜನ್ ANI ಗೆ ತಿಳಿಸಿದರು.
'ಈಗ ಅವರು ತಮ್ಮ ಸಿನಿಮಾವನ್ನು ಭಾವನಾತ್ಮಕವಾಗಿ ಪ್ರಚಾರ ಮಾಡಲು ಬಯಸುತ್ತಾರೆ. ರಾಜ್ಯಸಭಾ ಸ್ಥಾನವನ್ನು ನೀಡಿದ್ದಕ್ಕಾಗಿ ಅವರು ಡಿಎಂಕೆ ಸರ್ಕಾರಕ್ಕೆ ಧನ್ಯವಾದ ಹೇಳುತ್ತಿದ್ದಾರೆ. ಆರಂಭದಲ್ಲಿ, ಡಿಎಂಕೆಗೆ ಸವಾಲು ಹಾಕಲು ಮಾತ್ರ ಪಕ್ಷವನ್ನು ಪ್ರಾರಂಭಿಸಿದ್ದೇನೆ ಎಂದು ಅವರು ಹೇಳಿದ್ದರು. ಈಗ ಅವರು ತಮಿಳಿನ ಹೆಸರಿನಲ್ಲಿ ಜನರನ್ನು ವಿಭಜಿಸುತ್ತಿದ್ದಾರೆ' ಎಂದು ಆರೋಪಿಸಿದರು.
ಚಿತ್ರದ ಆಡಿಯೋ ಬಿಡುಗಡೆ ಸಂದರ್ಭದಲ್ಲಿ ಕಮಲ್ ಹಾಸನ್ ಅವರು ಕನ್ನಡ ತಮಿಳು ಭಾಷೆಯಿಂದ ಹುಟ್ಟಿದೆ ಎಂದು ಹೇಳಿದ್ದರು. ಇದು ಕರ್ನಾಟಕದಲ್ಲಿ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ.
ಕನ್ನಡ ಪರ ಸಂಘಟನೆಗಳ ನಾಯಕರು ಮತ್ತು ರಾಜ್ಯದ ಚಲನಚಿತ್ರ ಮಂಡಳಿಯು ನಟ ಕಮಲ್ ಹಾಸನ್ ತನ್ನ ಹೇಳಿಕೆಯನ್ನು ಹಿಂತೆಗೆದುಕೊಳ್ಳಬೇಕು ಮತ್ತು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿತು. ಆದರೆ, ನಟ ಕ್ಷಮೆಯಾಚಿಸಲು ನಿರಾಕರಿಸಿದರು ಮತ್ತು ಜೂನ್ 5ರಂದು ವಿಶ್ವದಾದ್ಯಂತ ಬಿಡುಗಡೆಯಾದಾಗ ಕರ್ನಾಟಕದಲ್ಲಿ ಚಿತ್ರ ಬಿಡುಗಡೆಗೆ ನಿಷೇಧ ಹೇರಲಾಯಿತು.
Advertisement