
ಅಹಮದಾಬಾದ್: ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನದಲ್ಲಿ 270 ಜನ ಸಾವನ್ನಪ್ಪಿದ 1 ವಾರದ ನಂತರ, ಡಿಎನ್‌ಎ ಹೊಂದಾಣಿಕೆಯ ಮೂಲಕ ಇದುವರೆಗೆ 190 ಜನರನ್ನು ಗುರುತಿಸಲಾಗಿದ್ದು, 159 ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಇಂದು ಬೆಳಗ್ಗೆವರೆಗೆ 190 ಡಿಎನ್‌ಎ ಮಾದರಿಗಳನ್ನು ಹೊಂದಿಸಲಾಗಿದೆ ಮತ್ತು 159 ಶವಗಳನ್ನು ಈಗಾಗಲೇ ಆಯಾ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅಹಮದಾಬಾದ್ ಸಿವಿಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಕೇಶ್ ಜೋಶಿ ತಿಳಿಸಿದ್ದಾರೆ.
ಶೀಘ್ರದಲ್ಲೇ ಉಳಿದ ಶವಗಳನ್ನು ಅವರ ಪ್ರೀತಿಪಾತ್ರರಿಗೆ ಹಸ್ತಾಂತರಿಸಲಾಗುವುದು. ಉಳಿದ ಕುಟುಂಬಗಳು ಪ್ರಸ್ತುತ ಆಸ್ಪತ್ರೆ ಆಡಳಿತದೊಂದಿಗೆ ಸಂಪರ್ಕದಲ್ಲಿವೆ ಎಂದು ಹೇಳಿದ್ದಾರೆ.
ಜೂನ್ 12 ರಂದು ಮಧ್ಯಾಹ್ನ 1.39ಕ್ಕೆ 242 ಜನರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾದ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ವೈದ್ಯಕೀಯ ಕಾಲೇಜು ಸಂಕೀರ್ಣಕ್ಕೆ ಅಪ್ಪಳಿಸಿತ್ತು.
ಪತನಗೊಂಡ ಏರ್ ಇಂಡಿಯಾ ವಿಮಾನದಲ್ಲಿದ್ದ 242 ಮಂದಿಯ ಪೈಕಿ 241 ಮಂದಿ ಮೃತಪಟ್ಟಿದ್ದರೆ, ವಿಮಾನ ಡಿಕ್ಕಿ ಹೊಡೆದ ಸ್ಥಳದಲ್ಲಿದ್ದ ಎಂಬಿಬಿಎಸ್ ವಿದ್ಯಾರ್ಥಿಗಳೂ ಸೇರಿ 29 ಮಂದಿ ಮೃತಪಟ್ಟಿದ್ದರು.
Advertisement