
ಮುಂಬೈ: ಅಹಮದಾಬಾದ್ ವಿಮಾನ ದುರಂತದ ಬೆನಲ್ಲೇ ಏರ್‌ಇಂಡಿಯಾವು ಬೋಯಿಂಗ್ ಡ್ರೀಮ್‌ಲೈನರ್ ಸೇರಿದಂತೆ ಕೆಲವು ದೊಡ್ಡ ಗಾತ್ರದ, ಅಂತರರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಶೇ 15ರಷ್ಟು ಕಡಿತಗೊಳಿಸಿದೆ.
ಈ ನಿರ್ಧಾರ ಈಗಿನಿಂದಲೇ ಜಾರಿಗೆ ಬರಲಿದ್ದು, ಜುಲೈ ಮಧ್ಯದವರೆಗೆ ಮುಂದುವರಿಯುವ ನಿರೀಕ್ಷೆಯಿದೆ ಎಂದು ವರದಿಗಳು ತಿಳಿಸಿವೆ.
ಏರ್ ಇಂಡಿಯಾ ಎದುರಿಸುತ್ತಿರುವ ಸಂಕೀರ್ಣ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು, ನಮ್ಮ ಕಾರ್ಯಾಚರಣೆಗಳ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು, ಉತ್ತಮ ದಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಪ್ರಯಾಣಿಕರಿಗೆ ಅನಾನುಕೂಲತೆಯನ್ನು ಕಡಿಮೆ ಮಾಡಲು, ಮುಂದಿನ ಕೆಲವು ವಾರಗಳವರೆಗೆ ದೊಡ್ಡ ಗಾತ್ರದ ವಿಮಾನಗಳಲ್ಲಿ ಅಂತರರಾಷ್ಟ್ರೀಯ ಸೇವೆಗಳನ್ನು ಶೇ.15 ರಷ್ಟು ಕಡಿಮೆ ಮಾಡಲು ನಿರ್ಧರಿಸಲಾಗಿದೆ ಎಂದು ಏರ್ ಇಂಡಿಯಾ ಹೇಳಿದೆ.
ಹೆಚ್ಚುವರಿ ಸುರಕ್ಷತಾ ತಪಾಸಣೆ ದೃಷ್ಟಿಯಿಂದ ದೊಡ್ಡ ಗಾತ್ರದ ಕೆಲವು ವಿಮಾನಗಳ ಹಾರಾಟವನ್ನು ಕಡಿಮೆ ಮಾಡಲಾಗಿದೆ. ಕಳೆದ 6 ದಿನಗಳಲ್ಲಿ 83 ಅಂತರರಾಷ್ಟ್ರೀಯ ವಿಮಾನ ಹಾರಾಟವನ್ನು ರದ್ದುಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತು ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ಬೋಯಿಂಗ್ 787 ಡ್ರೀಮ್‌ಲೈನರ್ (ವಿಮಾನ ಸಂಖ್ಯೆ AI171) ವಿಮಾನ ಗುರುವಾರ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲೇ ಅಪಘಾತಕ್ಕೀಡಾಗಿತ್ತು. ಘಟನೆ ನಡೆದು ಒಂದು ವಾರದ ನಂತರ ಟಾಟಾ ಗ್ರೂಪ್ ಒಡೆತನದ ವಿಮಾನಯಾನ ಸಂಸ್ಥೆಯು ಈ ನಿರ್ಧಾರಕ್ಕೆ ಬಂದಿದೆ.
ಕಳೆದ ಆರು ದಿನಗಳಲ್ಲಿ ಅಂತರರಾಷ್ಟ್ರೀಯ ಕಾರ್ಯಾಚರಣೆಗಳಲ್ಲಿನ ಅಡಚಣೆಗಳಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.
ಈ ಕಡಿತಗಳಿಂದ ತೊಂದರೆಗೊಳಗಾದ ಪ್ರಯಾಣಿಕರಿಗೆ ಏರ್ ಇಂಡಿಯಾ ಕ್ಷಮೆಯಾಚಿಸುತ್ತದೆ ಮತ್ತು ಅವರಿಗೆ ಮುಂಚಿತವಾಗಿ ತಿಳಿಸುತ್ತದೆ. ಪರ್ಯಾಯ ವಿಮಾನಗಳಲ್ಲಿ ಅವರಿಗೆ ಅವಕಾಶ ಕಲ್ಪಿಸಲು ನಾವು ನಮ್ಮ ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತೇವೆ. ಪ್ರಯಾಣಿಕರಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ತಮ್ಮ ಪ್ರಯಾಣವನ್ನು ಮರುಹೊಂದಿಸಲು ಅಥವಾ ಅವರ ಆಯ್ಕೆಯ ಪ್ರಕಾರ ಪೂರ್ಣ ಮರುಪಾವತಿಯನ್ನು ಪಡೆಯುವ ಆಯ್ಕೆಯನ್ನೂ ಕೂಡ ನೀಡಲಾಗುವುದು. ಜೂನ್ 20, 2025 ರಿಂದ ಜಾರಿಗೆ ಬರುವ ನಮ್ಮ ಅಂತರರಾಷ್ಟ್ರೀಯ ಸೇವೆಗಳ ಪರಿಷ್ಕೃತ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು ಎಂದು ಹೇಳಿದೆ.
Advertisement