
ಪಾಟ್ನಾ: ವಿಧಾನಸಭೆ ಚುನಾವಣೆಗೂ ಮುನ್ನ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶನಿವಾರ ಹಿರಿಯ ನಾಗರಿಕರು, ವಿಧವೆಯರು ಮತ್ತು ಅಂಗವಿಕಲರಿಗೆ ಸಿಹಿ ಸುದ್ದಿ ನೀಡಿದ್ದು, ಅವರ ಪಿಂಚಣಿಯನ್ನು 700 ರೂ. ಹೆಚ್ಚಿಸುವುದಾಗಿ ಶನಿವಾರ ಘೋಷಿಸಿದ್ದಾರೆ.
ಈ ಪಿಂಚಣಿ ಹೆಚ್ಚಳ ಜುಲೈನಿಂದಿಲೇ ಜಾರಿಗೆ ಬರಲಿದ್ದು, ಮುಂದಿನ ತಿಂಗಳಿಂದ ಫಲಾನುಭವಿಗಳಿಗೆ 1,100 ರೂ.ಗಳ ಪಿಂಚಣಿ ಸಿಗಲಿದೆ ಎಂದು ಬಿಹಾರ ಸಿಎಂ ತಿಳಿಸಿದ್ದಾರೆ.
"ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿಯಲ್ಲಿ, ಎಲ್ಲಾ ವೃದ್ಧರು, ಅಂಗವಿಕಲರು ಮತ್ತು ವಿಧವೆಯರು ಈಗ ಪ್ರತಿ ತಿಂಗಳು 400 ರೂ.ಗಳ ಬದಲಿಗೆ 1,100 ರೂ.ಗಳ ಪಿಂಚಣಿ ಪಡೆಯುತ್ತಾರೆ ಎಂದು ನಿಮಗೆ ತಿಳಿಸಲು ನನಗೆ ಸಂತೋಷವಾಗುತ್ತಿದೆ. ಜುಲೈನಿಂದ ಎಲ್ಲಾ ಫಲಾನುಭವಿಗಳಿಗೆ 1100 ಪಿಂಚಣಿ ಸಿಗಲಿದೆ" ಎಂದು ನಿತೀಶ್ ಕುಮಾರ್ Xನಲ್ಲಿ ಬರೆದುಕೊಂಡಿದ್ದಾರೆ.
ಪ್ರತಿ ತಿಂಗಳ 10ನೇ ದಿನದಂದು ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಪಿಂಚಣಿ ಮೊತ್ತವನ್ನು ಹಾಕಲಾಗುವುದು ಎಂದು ಅವರು ಹೇಳಿದ್ದಾರೆ.
"ಸರ್ಕಾರದ ಈ ನಿರ್ಧಾರವು ಫಲಾನುಭವಿಗಳಿಗೆ ಸಹಾಯವಾಗಲಿದೆ ಮತ್ತು ಅವರು ಗೌರವಾನ್ವಿತ ಜೀವನ ನಡೆಸಬಹದು. ಇದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ" ಎಂದು ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಬಂದಾನ ಪ್ರಿಯಾಶಿ ಅವರು ಪಿಟಿಐಗೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಪಿಂಚಣಿ ಯೋಜನೆಯಲ್ಲಿ ಒಟ್ಟು 1.96 ಕೋಟಿ ಫಲಾನುಭವಿಗಳಿದ್ದಾರೆ ಎಂದು ಸಿಎಂ ಹೇಳಿದ್ದಾರೆ.
Advertisement