
ವಿಶಾಖಪಟ್ಟಣಂ: ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನರು ಕಾರ್ಯಕ್ರಮಕ್ಕಾಗಿ ನೀಡಲಾಗಿದ್ದ ಯೋಗ ಮ್ಯಾಟ್ ಗಳನ್ನೇ ಹೊತ್ತೊಯ್ದಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
11ನೇ ಅಂತರರಾಷ್ಟ್ರೀಯ ಯೋಗ ದಿನ (2025)ವನ್ನು ಆಂಧ್ರ ಪ್ರದೇಶದ ಕರಾವಳಿಯಲ್ಲಿರುವ ವಿಶಾಖಪಟ್ಟಣಂನಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಸ್ವತಃ ಈ ಭವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
yoga for one health one earth ಎಂಬ ಥೀಮ್‌ನೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮವನ್ನು ಆಂಧ್ರಪ್ರದೇಶ ಸರ್ಕಾರದ ಆಶ್ರಯದಲ್ಲಿ ಯೋಗ ಆಂಧ್ರ 2025 ಎಂಬ ಹೆಸರಿನಲ್ಲಿ ಆಯೋಜಿಸಲಾಯಿತು.
ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ಸಚಿವ ನಾರಾ ಲೋಕೇಶ್, ಇತರ ಸಾರ್ವಜನಿಕ ಪ್ರತಿನಿಧಿಗಳು, ಕೇಂದ್ರ ಸಚಿವರು ಮತ್ತು ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅಲ್ಲದೆ ಸರ್ಕಾರಿ ನೌಕರರು, ಶಾಲಾ ವಿದ್ಯಾರ್ಥಿಗಳು, ಎನ್‌ಸಿಸಿ, ಎನ್‌ಎಸ್‌ಎಸ್ ಸ್ವಯಂಸೇವಕರು, ಯೋಗ ಸಂಘಗಳು, ನೌಕಾಪಡೆ, ಕೋಸ್ಟ್ ಗಾರ್ಡ್ ಸದಸ್ಯರು ಮತ್ತು ಕೈಗಾರಿಕೋದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
Yoga mat ಹೊತ್ತೊಯ್ದ ಜನರು
ಅತ್ತ ಯೋಗ ದಿನಾಚರಣೆ ಕಾರ್ಯಕ್ರಮ ಮುಕ್ತಾಯವಾಗುತ್ತಲೇ ಇತ್ತ ಕಾರ್ಯಕ್ರಮದಲಲಿ ಪಾಲ್ಗೊಂಡಿದ್ದ ಜನರು ಯೋಗ ಮ್ಯಾಟ್ ಗಳನ್ನು ಹೊತ್ತೊಯ್ದರು. ತಾವು ಕುಳಿತ ಯೋಗ ಮ್ಯಾಟ್ ಗಳು ಮಾತ್ರವಲ್ಲದೇ ಇತರರು ಕುಳಿತಿದ್ದ ಯೋಗ್ ಮ್ಯಾಟ್ ಗಳನ್ನೂ ಕೂಡ ಜನ ಹೊತ್ತೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಜನರು ತಮ್ಮ ಕೈಗೆ ಸಿಕ್ಕಷ್ಟು ಯೋಗ ಮ್ಯಾಟ್ ಗಳನ್ನು ಸುತ್ತಿಕೊಂಡು ಎತ್ತಿಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಒಬ್ಬೊಬ್ಬರು 3-4 ರಂತೆ ತಮ್ಮ ಕೈಲಾದಷ್ಟು ಯೋಗ ಮ್ಯಾಟ್ ಗಳನ್ನು ಸುತ್ತಿಕೊಂಡು ಹೊತ್ತೊಯ್ದರು.
ಅಂದಹಾಗೆ ಈ ವಿಶೇಷ ಕಾರ್ಯಕ್ರಮದಲ್ಲಿ ಸುಮಾರು 5 ಲಕ್ಷ ಮಂದಿ ಪಾಲ್ಗೊಂಡಿದ್ದರು. 326 ಗೊತ್ತುಪಡಿಸಿದ ವಿಭಾಗಗಳಲ್ಲಿ ತಲಾ ಸುಮಾರು 1,000 ಜನ ಯೋಗದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕಾಗಿ ಆಂಧ್ರ ಪ್ರದೇಶ ಸರ್ಕಾರ ಸುಮಾರು 300 ಕೋಟಿ ರೂಗಳನ್ನು ವೆಚ್ಚ ಮಾಡಿದೆ ಎಂದು ಹೇಳಲಾಗಿದೆ.
Advertisement