
ನವದೆಹಲಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಇಂದು ವಿಶ್ವದಾದ್ಯಂತ ಜನರು ಯೋಗ ಪ್ರದರ್ಶನ ಮಾಡಿದ್ದಾರೆ. ಮಸೀದಿಗಳ ಬಳಿಯೂ ಯೋಗ ಪ್ರದರ್ಶನ ನಡೆದಿದೆ. ಆದರೆ ಸೂರ್ಯ ನಮಸ್ಕಾರ ಮಾತ್ರ ಮಾಡಿಲ್ಲ. ಇದಕ್ಕೆ ಇಸ್ಲಾಂನಲ್ಲಿ ನಿರ್ಬಂಧಿಸಲಾಗಿದೆ.
ಬರೇಲಿಯ ಇ-ಅಲ್ಹಾ ಹಜರಾತ್ ದರ್ಮದ ಬಳಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಮುಸ್ಲಿಂ ಧರ್ಮ ಗುರು ಹಾಗೂ ಅಲ್ ಇಂಡಿಯಾ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ, ಮಸೀದಿ, ಮದರಾಸಗಳಲ್ಲಿಯೂ ಯೋಗವನ್ನು ಪ್ರೋತ್ಸಾಹಿಸಲಾಗುತ್ತದೆ ಆದರೆ, ಸೂರ್ಯ ನಮಸ್ಕಾರ ಮಾಡುವಂತಿಲ್ಲ. ಇಸ್ಲಾಂನಲ್ಲಿ ಇದನ್ನು ನಿರ್ಬಂಧಿಸಲಾಗಿದೆ. ಯಾವುದೇ ಕಾರಣಕ್ಕೂ ಮುಸ್ಲಿಮರು ಸೂರ್ಯ ನಮಸ್ಕಾರ ಮಾಡಬಾರದು ಎಂದು ತಿಳಿಸಿದರು.
ಯೋಗವನ್ನು ಪ್ರೋತ್ಸಾಹಿಸುತ್ತೇನೆ. ಆದರೆ ಸೂರ್ಯ ನಮಸ್ಕಾರವನ್ನು ವಿರೋಧಿಸುತ್ತೇನೆ. ಮುಸ್ಲಿಮರು ಸೂರ್ಯ ನಮಸ್ಕಾರ ಮಾಡುವಂತಿಲ್ಲ. ಯೋಗದಲ್ಲಿ ಸೂರ್ಯ ನಮಸ್ಕಾರ ಒಂದು ಚಟುವಟಿಕೆಯಾಗಿದೆ. ಪ್ರತಿಯೊಬ್ಬ ಪುರುಷ ಹಾಗೂ ಮಹಿಳೆಯರು ಯೋಗ ಮಾಡಬೇಕು. ಮದರಾಸ, ಮಸೀದಿಗಳಲ್ಲಿಯೂ ಯೋಗ ಮಾಡಬಹುದು ಆದರೆ, ಸೂರ್ಯನಿಗೆ ನಮಿಸುವುದು, ಸೂರ್ಯನಿಗೆ ಪೂಜೆಸುವುದನ್ನು ಇಸ್ಲಾಂ ಧರ್ಮದಲ್ಲಿ ನಿರ್ಬಂಧಿಸಲಾಗಿದೆ ಎಂದು ಹೇಳಿದರು.
ಸೂರ್ಯ ನಮಸ್ಕಾರ ಇಸ್ಲಾಂನ ಭಾಗವಲ್ಲ: ಇಸ್ಲಾಂನಲ್ಲಿ ಸೂರ್ಯನಿಗೆ ಪೂಜೆಸುವುದು ಕಾನೂನುಬದ್ಧ ನಿಷೇಧವಾಗಿದೆ. ಆದ್ದರಿಂದ ಪ್ರತಿಯೊಬ್ಬರು ಸೂರ್ಯ ನಮಸ್ಕಾರ ಮಾಡದಂತೆ ನಿಷೇಧಿಸಿದ್ದೇವೆ. ಸೂರ್ಯ ನಮಸ್ಕಾರ ಇಸ್ಲಾಂನ ಭಾಗವಲ್ಲ. ಹಾಗಾಗಿ ಮುಸ್ಲಿಮರು ಸೂರ್ಯ ನಮಸ್ಕಾರ ಮಾಡಬಾರದು ಎಂದರು.
ಇಸ್ಲಾಂನಲ್ಲೂ ಯೋಗ ಅಭ್ಯಾಸ ಇದೆ. ಯೋಗ ಧರ್ಮದ ಭಾಗವಲ್ಲ. ಅದರೊಂದಿಗೆ ಯಾವುದೇ ಧರ್ಮವನ್ನು ಬೇಕಾದರೆ ಸೇರಿಕೊಳ್ಳಬಹುದು. ಆದರೆ ಸೂರ್ಯ ನಮಸ್ಕಾರ ಸನಾತನ ಧರ್ಮದ ಭಾಗವಾಗಿದೆ. ಅರ್ಥಾತ್ ಹಿಂದೂ ಪೂಜೆಯಾಗಿದೆ. ಇದಕ್ಕೆ ಇಸ್ಲಾಂ ಧರ್ಮದಲ್ಲಿ ಅನುಮತಿ ಇಲ್ಲ. ಸೂರ್ಯ ನಮಸ್ಕಾರ ಇಸ್ಲಾಂ ಧರ್ಮಕ್ಕೆ ಹಾನಿಕಾರಕವಾದದ್ದು ಎಂದು ಮೌಲಾನಾ ಶಹಾಬುದ್ದೀನ್ ರಜ್ವಿ ಹೇಳಿದರು.
ಇಸ್ಲಾಂ ಧರ್ಮಗುರುವಿಗೆ ತಿರುಗೇಟು ನೀಡಿದ ಸಚಿವ ರಾಥೋರ್: ಇದೇ ವೇಳೆ ಇಸ್ಲಾಂ ಧರ್ಮ ಗುರು ಹೇಳಿಕೆಗೆ ತಿರುಗೇಟು ನೀಡಿದ ಉತ್ತರ ಪ್ರದೇಶದ ಸಚಿವ ಜೆಪಿಎಸ್ ರಾಥೋರ್, "ನಮ್ಮ ಸೂರ್ಯ ಹೇಗೆ ಸತ್ಯವೋ, ಹಾಗೆಯೇ ಸೂರ್ಯ ನಮಸ್ಕಾರವೂ ಹೌದು, ಸೂರ್ಯೋದಯವಾದರೆ, ಸೂರ್ಯ ನಮಸ್ಕಾರವೂ ಮುಂದುವರಿಯುತ್ತದೆ. ಸೂರ್ಯನಿಗೆ ಉಗುಳಿದರೆ ಅಂತಿಮವಾಗಿ ಅವರ ಮುಖದ ಮೇಲೆಯೇ ಉಗುಳು ಬೀಳುತ್ತದೆ. ಸೂರ್ಯ ನಮಸ್ಕಾರ ವಿರೋಧಿಸುವವರಿಗೆ ಅದೇ ಭವಿಷ್ಯವು ಕಾಯುತ್ತಿದೆ. ಇದು ಪ್ರತಿಯೊಬ್ಬರೂ ಒಪ್ಪಿಕೊಳ್ಳಬೇಕಾದ ಪುರಾತನ ಯೋಗಾಭ್ಯಾಸವಾಗಿದೆ. ಅದನ್ನು ವಿರೋಧಿಸುವವರು ಸಂಕುಚಿತ ಮನೋಭಾವವುಳ್ಳವರು ಎಂದು ಟೀಕಿಸಿದರು.
Advertisement