
ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಕಾಳಿಗಂಜ್‌ನಲ್ಲಿ ಸೋಮವಾರ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಒಂಬತ್ತು ವರ್ಷದ ಬಾಲಕಿ ಸಾವಿಗೀಡಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಳಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಬರೋಚಂದ್‌ಗರ್‌ನಲ್ಲಿ ಸೋಮವಾರ ಮಧ್ಯಾಹ್ನ ಸ್ಫೋಟಗೊಂಡ ಬಾಂಬ್‌ನಿಂದ ಬಾಲಕಿ ಮೃತಪಟ್ಟಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾಳಿಗಂಜ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (TMC) ಅಭ್ಯರ್ಥಿ ಅಲಿಫಾ ಅಹಮದ್ ತಮ್ಮ ಹತ್ತಿರದ ಬಿಜೆಪಿ ಪ್ರತಿಸ್ಪರ್ಧಿ ಆಶಿಶ್ ಘೋಷ್ ವಿರುದ್ಧ 50,049 ಮತಗಳ ಅಂತರದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ವರ್ಷ ಫೆಬ್ರುವರಿಯಲ್ಲಿ ಅವರ ತಂದೆ ನಾಸಿರುದ್ದೀನ್ ಅಹ್ಮದ್ ನಿಧನರಾದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಈ ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತು.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪೊಲೀಸರು ಅಪರಾಧಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
'ಬರೋಚಂದ್‌ಗರ್‌ನಲ್ಲಿ ನಡೆದ ಸ್ಫೋಟದಲ್ಲಿ ಬಾಲಕಿಯೊಬ್ಬಳು ಸಾವಿಗೀಡಾಗಿದ್ದು ನನಗೆ ಆಘಾತ ಮತ್ತು ತೀವ್ರ ದುಃಖ ತಂದಿದೆ. ದುಃಖದ ಈ ಸಮಯದಲ್ಲಿ ಅವರ ಕುಟುಂಬದೊಂದಿಗೆ ನನ್ನ ಪ್ರಾರ್ಥನೆಗಳು ಮತ್ತು ಆಲೋಚನೆಗಳು ಇವೆ' ಎಂದು ಬ್ಯಾನರ್ಜಿ X ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಪೊಲೀಸರು ಆದಷ್ಟು ಬೇಗ ಅಪರಾಧಿಗಳ ವಿರುದ್ಧ ಬಲವಾದ ಮತ್ತು ನಿರ್ಣಾಯಕ ಕಾನೂನು ಕ್ರಮ ಕೈಗೊಳ್ಳಬೇಕು' ಎಂದು ಅವರು ಹೇಳಿದರು.
'ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸ್ಫೋಟದ ಕಾರಣದ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ' ಎಂದು ಪೊಲೀಸ್ ಅಧಿಕಾರಿ ಹೇಳಿದರು.
Advertisement