
ನವದೆಹಲಿ: ಇರಾನ್ ಮತ್ತು ಇಸ್ರೇಲ್ ನಡುವಿನ ಕದನ ವಿರಾಮವನ್ನು ಭಾರತ ಸ್ವಾಗತಿಸಿದೆ. ಇತ್ತೀಚಿನ ಯುದ್ಧಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಭಾರತ, ಈ ಪ್ರದೇಶದಲ್ಲಿ ಶಾಂತಿ ಸ್ಥಾಪಿಸಲು ಮಾತುಕತೆ ಮತ್ತು ದೀರ್ಘಕಾಲೀನ ಸ್ಥಿರತೆ ಖಚಿತಪಡಿಸಿಕೊಳ್ಳಲು "ತನ್ನ ಪಾತ್ರವನ್ನು ನಿರ್ವಹಿಸಲು" ಸಿದ್ಧತೆ ಎಂದು ಪುನರುಚ್ಚರಿಸಿದೆ.
ಕದನ ವಿರಾಮವನ್ನು ಖಚಿತಪಡಿಸಿಕೊಳ್ಳಲು ಯುನೈಟೆಡ್ ಸ್ಟೇಟ್ಸ್ ಮತ್ತು ಕತಾರ್ ಪಾತ್ರವನ್ನು ಒಪ್ಪಿಕೊಂಡ ವಿದೇಶಾಂಗ ಸಚಿವಾಲಯ, ಪಶ್ಚಿಮ ಏಷ್ಯಾ ಎದುರಿಸುತ್ತಿರುವ ಹಲವು ಸಂಘರ್ಷಗಳಿಗೆ ರಾಜತಾಂತ್ರಿಕತೆಯು ಏಕೈಕ ಕಾರ್ಯಸಾಧ್ಯ ಪರಿಹಾರವಾಗಿ ಉಳಿದಿದೆ ಎಂದು ಒತ್ತಿ ಹೇಳಿದೆ.
"ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದ ಬೆಳವಣಿಗೆಗಳನ್ನು ನಾವು ರಾತ್ರಿಯಿಡೀ ಗಮನಿಸುತ್ತಿದ್ದೇವೆ. ಇದರಲ್ಲಿ ಇರಾನ್‌ನ ಪರಮಾಣು ಸೌಲಭ್ಯಗಳ ವಿರುದ್ಧ ಅಮೆರಿಕದ ಕ್ರಮ ಮತ್ತು ಕತಾರ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ವಿರುದ್ಧ ಇರಾನಿನ ಪ್ರತೀಕಾರವೂ ಸೇರಿದೆ" ಎಂದು ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ ಪ್ರಕಟಣೆ ತಿಳಿಸಿದೆ.
"ಒಟ್ಟಾರೆ ಮತ್ತು ನಿರಂತರ ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಯ ನಿರೀಕ್ಷೆಗಳ ಬಗ್ಗೆ ನಾವು ತೀವ್ರ ಕಳವಳ ಹೊಂದಿದ್ದರೂ, ಇರಾನ್ ಮತ್ತು ಇಸ್ರೇಲ್ ನಡುವಿನ ಕದನ ವಿರಾಮ ಮತ್ತು ಅದನ್ನು ಜಾರಿಗೆ ತರುವಲ್ಲಿ ಅಮೆರಿಕ ಮತ್ತು ಕತಾರ್ ವಹಿಸಿದ ಪಾತ್ರದ ವರದಿಗಳನ್ನು ನಾವು ಸ್ವಾಗತಿಸುತ್ತೇವೆ" ಎಂದು ಹೇಳಿದೆ.
ಮಿಲಿಟರಿ ಕಾರ್ಯಾಚರಣೆಗಿಂತ ರಾಜತಾಂತ್ರಿಕ ಮಾರ್ಗದ ಮಹತ್ವವನ್ನು ಭಾರತ ಒತ್ತಿ ಹೇಳಿದೆ. "ಈ ಪ್ರದೇಶದಲ್ಲಿನ ಹಲವು ಸಂಘರ್ಷಗಳನ್ನು ಪರಿಹರಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆಗೆ ಇತರೆ ಯಾವುದೇ ಪರ್ಯಾಯ ಮಾರ್ಗ ಇಲ್ಲ ಎಂದು ನಾವು ಪುನರುಚ್ಚರಿಸಲು ಬಯಸುತ್ತೇವೆ" ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
Advertisement