
ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮಧ್ಯಪ್ರವೇಶದ ನಂತರ, ರಾಜಸ್ಥಾನದಲ್ಲಿ ಬಾಂಗ್ಲಾದೇಶೀಯರು ಎಂಬ ಅನುಮಾನದ ಮೇಲೆ ಬಂಧಿಸಲ್ಪಟ್ಟಿದ್ದ ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ಇಟಾಹಾರ್‌ನ ವಲಸೆ ಕಾರ್ಮಿಕರನ್ನು ಬಿಡುಗಡೆ ಮಾಡಲಾಗಿದೆ.
ಬಂಧಿತ ವಲಸೆ ಕಾರ್ಮಿಕರಲ್ಲಿ ಒಬ್ಬರಾದ ಐನುಲ್ ಹಕ್ ಬುಧವಾರ ಬೆಳಗ್ಗೆ ರಾಜಸ್ಥಾನದಿಂದ ದೂರವಾಣಿ ಮೂಲಕ ಪಶ್ಚಿಮ ಬಂಗಾಳದ 200 ವಲಸೆ ಕಾರ್ಮಿಕರನ್ನು ಮತ್ತು ಅಸ್ಸಾಂನ ಬಂಗಾಳಿ ಮಾತನಾಡುವ 200 ಕಾರ್ಮಿಕರನ್ನು ಬಿಡುಗಡೆ ಮಾಡಿದ್ದು, ಅವರು ಕೆಲಸಕ್ಕೆ ಮರಳಿದ್ದಾರೆ ಎಂದು ತಿಳಿಸಿದ್ದಾರೆ.
"ಪಶ್ಚಿಮ ಬಂಗಾಳ ಸರ್ಕಾರ ರಾಜಸ್ಥಾನ ಸರ್ಕಾರದೊಂದಿಗೆ ಮಾತನಾಡಿದ ನಂತರ ಮಂಗಳವಾರ ಮಧ್ಯಾಹ್ನ ನಮ್ಮನ್ನು ಬಿಡುಗಡೆ ಮಾಡಲಾಯಿತು. ನಾವು ಬುಧವಾರ ಬೆಳಗ್ಗೆ ನಮ್ಮ ನಮ್ಮ ಕೆಲಸಗಳಿಗೆ ಮರಳಿದ್ದೇವೆ. ಇದಕ್ಕಾಗಿ, ನಾವೆಲ್ಲರೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಧನ್ಯವಾದ ಅರ್ಪಿಸುತ್ತೇವೆ" ಎಂದು ಹಕ್ ಹೇಳಿದ್ದಾರೆ.
ಮಂಗಳವಾರ, ರಾಜಸ್ಥಾನಕ್ಕೆ ಕೆಲಸಕ್ಕಾಗಿ ಪ್ರಯಾಣಿಸಿದ್ದ ತಮ್ಮ ಕ್ಷೇತ್ರದ ಸುಮಾರು 300 ವಲಸೆ ಕಾರ್ಮಿಕರನ್ನು, ಭಾರತೀಯ ಪೌರತ್ವದ ಪುರಾವೆಗಳನ್ನು ಹೊಂದಿದ್ದರೂ ಸಹ, ಬಾಂಗ್ಲಾದೇಶಿಗಳು ಎಂಬ ಅನುಮಾನದ ಮೇಲೆ ಬಂಧಿಸಲಾಗಿದೆ ಎಂದು ಇಟಾಹಾರ್ ಶಾಸಕ ಮೊಸರಾಫ್ ಹೊಸೈನ್ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಮನಕ್ಕೆ ತಂದಿದ್ದರು.
ಘಟನೆಯ ಬಗ್ಗೆ ತೀವ್ರ ಅಸಮಾಧಾನ ಮತ್ತು ಪ್ರತಿಭಟನೆ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, "ಬಂಗಾಳಿ ಮಾತನಾಡುವ ಜನರನ್ನು ಏಕೆ ಇಷ್ಟೊಂದು ತಾರತಮ್ಯದಿಂದ ನಡೆಸಿಕೊಳ್ಳಲಾಗುತ್ತಿದೆ? ಬಂಗಾಳಿ ಮಾತನಾಡುವ ಜನ ಈ ದೇಶದ ನಾಗರಿಕರಲ್ಲವೇ? ಇದು ಮೊದಲ ಬಾರಿಯಲ್ಲ. ಇದೇ ರೀತಿಯ ಘಟನೆಗಳು ಈ ಹಿಂದೆಯೂ ನಡೆದಿವೆ. ಪ್ರಧಾನಿಗೆ ತಿಳಿದಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ನಾನು ಪ್ರಧಾನಿಯೊಂದಿಗೆ ಮಾತನಾಡುತ್ತೇನೆ" ಎಂದು ಹೇಳಿದ್ದಾರೆ.
ಕಾರ್ಮಿಕರ ಬಿಡುಗಡೆಗಾಗಿ ರಾಜಸ್ಥಾನ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಧಾಂಶ್ ಪಂತ್ ಅವರನ್ನು ತಕ್ಷಣ ಸಂಪರ್ಕಿಸುವಂತೆ ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಅವರಿಗೆ ಸೂಚನೆ ನೀಡಿದ್ದರು.
Advertisement