
ಭೋಪಾಲ್: ಪೆಟ್ರೋಲ್ ಬಂಕ್ ಗಳ ಕಲಬೆರಕೆ ಆಟದ ಬಿಸಿ ಇದೀಗ ಸ್ವತಃ ಸಿಎಂ ಗೂ ತಟ್ಟಿದ್ದು, ಬೆಂಗಾವಲು ವಾಹನಗಳಿಗೆ ಕಲಬೆರಕೆ ಡೀಸೆಲ್ ಪೂರೈಕೆ ಮಾಡಿದ ಹಿನ್ನಲೆಯಲ್ಲಿ ಪೆಟ್ರೋಲ್ ಬಂಕ್ ಅನ್ನು ಸೀಜ್ ಮಾಡಲಾಗಿದೆ.
ಹೌದು.. ಪೆಟ್ರೋಲ್ ಬಂಕ್ ವ್ಯಾಪಾರಿಗಳ ಕಲಬೆರಕೆ ಆಟ ಎಗ್ಗಿಲ್ಲದೇ ಸಾಗಿದ್ದು, ಇದು ಯಾವ ಮಟ್ಟಿಗೆ ಇದೆ ಎಂದರೆ ಸ್ವತಃ ಸಿಎಂ ಬೆಂಗಾವಲು ಪಡೆ ವಾಹನಗಳಿಗೇ ಕಲಬೆರಕೆ ಡೀಸೆಲ್ ಪೂರೈಕೆ ಮಾಡಿ ಸಿಕ್ಕಿಬಿದ್ದಿದ್ದಾರೆ. ಮಧ್ಯಪ್ರದೇಶದಲ್ಲಿ ಈ ಆಘಾತಕಾರಿ ಸುದ್ದಿ ಬಂದಿದ್ದು, ಇದೀಗ ಪೆಟ್ರೋಲ್ ಬಂಕ್ ಅನ್ನು ಸೀಜ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಮಧ್ಯ ಪ್ರದೇಶ ಸಿಎಂ ಮೋಹನ್ ಯಾದವ್ ಅವರ ಬೆಂಗಾವಲು ಪಡೆಯ ಸುಮಾರು 19 ವಾಹನಗಳಿಗೆ ದೋಸಿಗಾಂವ್‌ನ ಪೆಟ್ರೋಲ್ ಪಂಪ್‌ನಿಂದ ಡೀಸೆಲ್ ತುಂಬಿಸಲಾಗಿತ್ತು. ಆದರೆ ವಾಹನಗಳು ಇದ್ದಕ್ಕಿದ್ದಂತೆಯೇ ಮಾರ್ಗಮಧ್ಯೆ ಸ್ಥಗಿತಗೊಂಡಿದೆ. ಇದರಿಂದ ಅನುಮಾನಗೊಂಡ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ವಾಹನಗಳ ಡಿಸೇಲ್ ಕಲಬೆರಕೆ ಎಂದು ತಿಳಿದುಬಂದಿದೆ. ಕೂಡಲೇ ಅಧಿಕಾರಿಗಳು ಡೀಸೆಲ್ ಪೂರೆಕೆ ಮಾಡಿದ್ದ ದೋಸಿಗಾಂವ್‌ನ ಪೆಟ್ರೋಲ್ ಪಂಪ್ ಸೀಲ್ ಮಾಡಿದ್ದಾರೆ.
ಮೂಲಗಳ ಪ್ರಕಾರ ಈ ಎಲ್ಲಾ ವಾಹನಗಳು ಮಧ್ಯಪ್ರದೇಶದ ಪ್ರಾದೇಶಿಕ ಕೈಗಾರಿಕಾ ಶೃಂಗಸಭೆಗಾಗಿ ಇಂದೋರ್‌ಗೆ ಬಂದಿದ್ದವು. ಮಾರ್ಗ ಮಧ್ಯೆ ಬೆಂಗಾವಲು ಪಡೆ ಅಧಿಕಾರಿಗಳು ದೋಸಿಗಾಂವ್‌ನಲ್ಲಿರುವ ಭಾರತ್ ಪೆಟ್ರೋಲಿಯಂನ ಶಕ್ತಿ ಇಂಧನ ಪೆಟ್ರೋಲ್ ಪಂಪ್‌ನಲ್ಲಿ ನಿಲ್ಲಿಸಿ ಡೀಸೆಲ್ ತುಂಬಿಸಿಕೊಂಡಿದ್ದರು. ಆದರೆ ಮಾರ್ಗಮಧ್ಯೆಯೇ ಬೆಂಗಾವಲು ಪಡೆ ವಾಹನಗಳು ನಿಂತು ಹೋಗಿವೆ.
ಡೀಸೆಲ್ ಜೊತೆ ನೀರು ಮಿಕ್ಸ್
ಇನ್ನು ಪೆಟ್ರೋಲ್ ಬಂಕ್ ನಿಂದ ವಾಹನಗಳಿಗೆ ನೀರು ಮಿಶ್ರಿತ ಡೀಸೆಲ್ ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಲಾಗಿದ್ದು, ಇದೇ ಕಾರಣಕ್ಕೆ ಸಿಎಂ ಬೆಂಗಾವಲು ವಾಹನಗಳ ಎಂಜಿನ್‌ಗಳು ವಿಫಲವಾಗಿ ಮಾರ್ಗಮಧ್ಯೆಯೇ ನಿಂತು ಹೋಗಿವೆ. ಬಳಿಕ ಇಂದೋರ್ ನಿಂದ ಬೇರೆ ವಾಹನಗಳನ್ನು ತರಿಸಿಕೊಂಡು ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ.
ರತ್ಲಮ್‌ನ ದೋಸಿಗಾಂವ್‌ನಲ್ಲಿರುವ ಪೆಟ್ರೋಲ್ ಪಂಪ್‌ನಿಂದ ಈ ವಾಹನಗಳಿಗೆ ಸುಮಾರು 250 ಲೀಟರ್ ಡೀಸೆಲ್ ತುಂಬಿಸಿದಾಗ, ಸ್ವಲ್ಪ ದೂರ ತಲುಪಿದ ನಂತರ, ಎಲ್ಲಾ ವಾಹನಗಳು ಒಂದೊಂದಾಗಿ ನಿಂತವು. ಇದರಿಂದಾಗಿ ಅಧಿಕಾರಿಗಳು ಆಘಾತಕ್ಕೊಳಗಾದರು. ಅಧಿಕಾರಿಗಳು ರಾತ್ರಿ ಪೆಟ್ರೋಲ್ ಪಂಪ್ ತಲುಪಿ ತನಿಖೆ ನಡೆಸಿ ಪೆಟ್ರೋಲ್ ಪಂಪ್ ಅನ್ನು ಸೀಲ್ ಮಾಡಿದರು.
ವಾಹನಗಳ ಟ್ಯಾಂಕ್‌ಗಳನ್ನು ತೆರೆದು ಪರಿಶೀಲಿಸಿದಾಗ, ಡೀಸೆಲ್ ಜೊತೆಗೆ ನೀರು ಹೊರಬಂದಿತು. ವಾಹನದಲ್ಲಿ 20 ಲೀಟರ್ ಡೀಸೆಲ್ ತುಂಬಿದಾಗ, ಅದರಲ್ಲಿ 10 ಲೀಟರ್ ನೀರು ಹೊರಬಂದಿರುವುದು ಕಂಡುಬಂದಿದೆ. ಎಲ್ಲಾ ವಾಹನಗಳಲ್ಲಿ ಈ ಪರಿಸ್ಥಿತಿ ಕಂಡುಬಂದಿದೆ. ಅಧಿಕಾರಿಗಳು ರಾತ್ರಿಯೇ ಸ್ಥಳಕ್ಕೆ ತಲುಪಿ ಪೆಟ್ರೋಲ್ ಪಂಪ್ ಅನ್ನು ಸೀಲ್ ಮಾಡಿದರು.
ಮಳೆ ನೀರು ಮಿಶ್ರಣ: ಬಂಕ್ ಅಧಿಕಾರಿಗಳ ಸ್ಪಷ್ಟನೆ
ಇನ್ನು ಪೆಟ್ರೋಲ್ ಬಂಕ್ ಸೀಲ್ ವಿಚಾರವಾಗಿ ಮಾತನಾಡಿದ ಪೆಟ್ರೋಲ್ ಬಂಕ್ ಮಾಲೀಕರು ನಾವು ಡೀಸೆಲ್ ನಲ್ಲಿ ನೀರು ಮಿಶ್ರಣ ಮಾಡಿಲ್ಲ.. ಬದಲಿಗೆ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ನೀರು ಡೀಸೆಲ್ ಟ್ಯಾಂಕ್ ಗೆ ಸೋರಿಕೆಯಾಗಿರಬಹುದು ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ನಯಬ್ ತಹಶೀಲ್ದಾರ್ ಆಶಿಶ್ ಉಪಾಧ್ಯಾಯ ಅವರು, 'ಪೆಟ್ರೋಲ್ ಪಂಪ್ ವ್ಯವಸ್ಥಾಪಕರು ಮಳೆಯಲ್ಲಿ ನೀರು ಸೋರಿಕೆಯಾಗಿದೆ ಎಂದು ಹೇಳಿದ್ದಾರೆ. ಆದಾಗ್ಯೂ, ವಿವರವಾದ ತನಿಖೆಯ ನಂತರ ಈ ವಿಷಯವನ್ನು ತೆರವುಗೊಳಿಸಲಾಗುವುದು. ಮಳೆಯಿಂದಾಗಿ ಪೆಟ್ರೋಲ್ ಪಂಪ್ ಟ್ಯಾಂಕ್‌ನಲ್ಲಿ ನೀರು ಸೋರಿಕೆಯಾಗುವ ಸಾಧ್ಯತೆಯಿದೆ. ಆಹಾರ ಮತ್ತು ಸರಬರಾಜು ಇಲಾಖೆ ಪೆಟ್ರೋಲ್ ಪಂಪ್ ಅನ್ನು ಸೀಲ್ ಮಾಡಿದೆ. ವರದಿಯನ್ನು ಹಿರಿಯ ಅಧಿಕಾರಿಗೆ ಸಲ್ಲಿಸಲಾಗುವುದು ಎಂದರು.
"ಇಡೀ ವಿಷಯವನ್ನು ಪರಿಶೀಲಿಸಲಾಗುತ್ತಿದೆ, ಆದರೂ ನೀರಿನ ನಿಖರವಾದ ಪ್ರಮಾಣವನ್ನು ತಕ್ಷಣವೇ ನಿರ್ದಿಷ್ಟಪಡಿಸಲಾಗುವುದಿಲ್ಲ. ಪಂಪ್‌ನಲ್ಲಿರುವ ಸ್ಟಾಕ್ ಅನ್ನು ಪರಿಶೀಲಿಸಲಾಗುತ್ತಿದೆ ಮತ್ತು ರತ್ಲಂ ಜಿಲ್ಲಾ ಕಲೆಕ್ಟರ್‌ಗೆ ವಿವರವಾದ ವರದಿಯಲ್ಲಿನ ಅಂಶಗಳನ್ನು ಹಂಚಿಕೊಳ್ಳಲಾಗುವುದು" ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹಿರಿಯ ಅಧಿಕಾರಿ ಆನಂದ್ ಗೋಲ್ ಹೇಳಿದ್ದಾರೆ.
ಇಂದು ನಡೆಯಲಿರುವ ಪ್ರಾದೇಶಿಕ ಸಮಾವೇಶ
ಪ್ರಾದೇಶಿಕ ಕೈಗಾರಿಕೆ, ಕೌಶಲ್ಯ ಮತ್ತು ಉದ್ಯೋಗ ಸಮಾವೇಶ 2025 ಅನ್ನು ಇಂದು ರತ್ಲಮ್‌ನಲ್ಲಿ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರ ಸಮ್ಮುಖದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದೇ ಗುರುವಾರ ರಾತ್ರಿ ಇಂದೋರ್‌ನಿಂದ ಮುಖ್ಯಮಂತ್ರಿಗಳ ಬೆಂಗಾವಲು ಪಡೆಗಾಗಿ 19 ವಾಹನಗಳನ್ನು ಆದೇಶಿಸಲಾಗಿತ್ತು.
Advertisement