
ಮುಂಬೈ: ಕ್ಯಾನ್ಸರ್ ಪೀಡಿತ ಅಜ್ಜಿಯನ್ನು ಕಸದ ರಾಶಿಗೆ ಎಸೆದಿದ್ದ ಆರೋಪದ ಮೇಲೆ ಆಕೆಯ 33 ವರ್ಷದ ಮೊಮ್ಮಗ ಹಾಗೂ ಇತರ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಮಾರು 70 ವರ್ಷದ ವೃದ್ಧ ಮಹಿಳೆ ಜೂನ್ 22 ರಂದು ಬೆಳಿಗ್ಗೆ ಅರೆ ಕಾಲೋನಿಯಲ್ಲಿನ ಕಸದ ರಾಶಿ ಬಳಿ ಸಂಕಷ್ಟದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮೊಮ್ಮಗ ಸಾಗರ್ ಶೆವಾಲೆ (33), ಸೋದರ ಮಾವ ಬಾಬಾಸಾಹೇಬ್ ಗಾಯಕ್ವಾಡ್ (70) ಮತ್ತು ಆಟೋರಿಕ್ಷಾ ಚಾಲಕ ಸಂಜಯ್ ಕದ್ರೇಶಮ್ (27) ಅವರು ವೃದ್ಧ ಮಹಿಳೆಯನ್ನು ಅಲ್ಲಿ ಬಿಟ್ಟು ಹೋಗಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಜ್ಜಿಯೇ ಮನೆ ಬಿಟ್ಟು ಹೋಗಿದ್ದು, ಅವರನ್ನು ನಾನು ಕಸದ ರಾಶಿಗೆ ಎಸೆದು ಬಂದಿಲ್ಲ ಎಂದು ಮೊದಲಿಗೆ ತಪ್ಪಿಸಿಕೊಳ್ಳಲು ಯತ್ನಿಸಿದ ಮೊಮ್ಮಗ, ತೀವ್ರ ವಿಚಾರಣೆ ಬಳಿಕ ತಪ್ಪೊಪ್ಪಿಕೊಂಡಿದ್ದಾನೆ.
ಈ ಮೂವರನ್ನು ಬುಧವಾರ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 125 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಕಾಯ್ದೆ) ಮತ್ತು ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ ಆರೋಪಿಗಳು ಜೂನ್ 21 ರಂದು ರಾತ್ರಿ ಮೊದಲಿಗೆ ಶತಾಬ್ದಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆಯ ಅಧಿಕಾರಿಗಳು ಆಕೆಯನ್ನು ದಾಖಲಿಸಲು ನಿರಾಕರಿಸಿದಾಗ ಆರೇ ಕಾಲೋನಿಯ ಅರಣ್ಯಕ್ಕೆ ಕರೆದೊಯ್ದು ಅಲ್ಲಿಯೇ ಎಸೆದು ಬಂದಿದ್ದಾರೆ. ವೃದ್ಧ ಮಹಿಳೆ ಈಗ ನಗರದ ಜುಹು ಪ್ರದೇಶದಲ್ಲಿನ ಕೂಪರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
Advertisement