
ಅಶೋಕನಗರ: ಬಲವಂತವಾಗಿ ಮಾನವ ಮಲ ತಿನ್ನಿಸಿದರು ಎಂದು ಸುಳ್ಳು ಆರೋಪ ಮಾಡಲು ಗ್ರಾಮಸ್ಥನಿಗೆ ಲಂಚ ನೀಡಿದ ಆರೋಪದ ಮೇಲೆ ಮಧ್ಯ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತೇಂದ್ರ ಪಟ್ವಾರಿ ವಿರುದ್ಧ ಪೊಲೀಸರು ಶನಿವಾರ ಎಫ್ಐಆರ್ ದಾಖಲಿಸಿದ್ದಾರೆ.
ಜಿತೇಂದ್ರ(ಜಿತು) ಪಟ್ವಾರಿ ಅವರು ಗ್ರಾಮಸ್ಥ ಗಜರಾಜ್ ಲೋಧಿ ಅವರಿಗೆ, ಮುಂಗೋಲಿ ಗ್ರಾಮದ ಸರ್ಪಂಚ್ ವಿರುದ್ಧ ಸುಳ್ಳು ಆರೋಪ ಮಾಡುವಂತೆ ಕೇಳಿಕೊಂಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಪಿ) ವಿನೀತ್ ಕುಮಾರ್ ಜೈನ್ ತಿಳಿಸಿದ್ದಾರೆ.
"ನಿನ್ನೆ, ಗಜರಾಜ್ ಲೋಧಿ ಅವರು ಅಶೋಕನಗರದ ಕಲೆಕ್ಟರ್ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿ ಕೆಲವು ಕಾಂಗ್ರೆಸ್ ನಾಯಕರು ತಮ್ಮನ್ನು ಓರ್ಚಾಗೆ ಕರೆದೊಯ್ದ, ಅಲ್ಲಿ ಜಿತು ಪಟ್ವಾರಿ ಅವರನ್ನು ಭೇಟಿ ಮಾಡಿಸಿದರು. ಜಿತು ಪಟ್ವಾರಿ ಅವರು ಮುಂಗೋಲಿ ಗ್ರಾಮದ ಸರ್ಪಂಚ್ ತಮಗೆ ಬಲವಂತವಾಗಿ ಮಲ ತಿನ್ನಿಸಿದರು ಎಂದು ಆರೋಪಿಸಲು ಲಂಚ ನೀಡಿದರು" ಎಂದು ಹೇಳಿರುವುದಾಗಿ ಎಸ್‌ಪಿ ವಿನೀತ್ ಕುಮಾರ್ ಜೈನ್ ಎಎನ್‌ಐಗೆ ತಿಳಿಸಿದ್ದಾರೆ.
ಗಜರಾಜ್ ಲೋಧಿ ಮಾಡಿದ ಆರೋಪಗಳು ಸುಳ್ಳು ಎಂದು ಕಂಡುಬಂದನ ನಂತರ ಕಾಂಗ್ರೆಸ್ ನಾಯಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
"ಗಜರಾಜ್ ಲೋಧಿ, ಜಿತು ಪಟ್ವಾರಿ ಅವರ ಬೇಡಿಕೆಯ ಮೇರೆಗೆ ಈ ಆರೋಪವನ್ನು ಮಾಡಿದ್ದಾರೆ... ಇದರ ಆಧಾರದ ಮೇಲೆ, ಜಿತು ಪಟ್ವಾರಿ ಮತ್ತು ಅವರ ಸಹಾಯಕರ ವಿರುದ್ಧ ಬಿಎನ್‌ಎಸ್‌ನ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ" ಎಂದು ಎಸ್‌ಪಿ ಕುಮಾರ್ ತಿಳಿಸಿದ್ದಾರೆ.
ಕಳೆದ ಬುಧವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಉದ್ದೇಶಿಸಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಪಟ್ವಾರಿ, "ಪ್ರಧಾನಿ ಜಿ, ರಾಜ್ಯದಲ್ಲಿ ಗುಂಡಾ ರಾಜ್ ಆಡಳಿತದಲ್ಲಿ ಅರಾಜಕತೆ ಮಿತಿ ಮೀರುತ್ತಿದೆ! ಲೋಧಿ ಸಮುದಾಯದ ಯುವಕನೊಬ್ಬ "ಪಡಿತರ ಚೀಟಿ" ಕೇಳಿದ್ದಕ್ಕೆ ಆತನಿಗೆ "ಮಾನವ ಮಲ" ತಿನ್ನಿಸಲಾಗಿದೆ! ಆರೋಪಿಗಳು ಬಿಜೆಪಿ ಶಾಸಕ ಬ್ರಿಜೇಂದ್ರ ಯಾದವ್ ಅವರ ಬೆಂಬಲಿಗರಾಗಿರುವುದರಿಂದ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲು ಬಿಡುತ್ತಿಲ್ಲ" ಎಂದು ಹೇಳಿದ್ದರು.
ಬುಡಕಟ್ಟು ಯುವಕನ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ ಹಿಂದಿನ ಘಟನೆಯನ್ನು ಉಲ್ಲೇಖಿಸಿದ ಅವರು, ಮಧ್ಯಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿದ್ದರು.
Advertisement