
ಹೈದರಾಬಾದ್: ಕ್ಷುಲ್ಲಕ ವಿಚಾರಕ್ಕೆ ಹಿಂದೂ ಧರ್ಮದ ಅವಹೇಳನ ಮಾಡಿದ ಆರೋಪದ ಮೇರೆಗೆ ಹೈದರಾಬಾದ್ ಪೊಲೀಸರು ಮುಸ್ಲಿಂ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಹೊಟೆಲ್ ವೊಂದರಲ್ಲಿ ತಿನಿಸುಗಳ ಬೆಲೆ ಕುರಿತಾಗಿ ತಗಾದೆ ತೆಗೆದಿದ್ದ ಮುಸ್ಲಿಂ ವ್ಯಕ್ತಿ ನೋಡ ನೋಡುತ್ತಲೇ ಹಿಂದೂ ಧರ್ಮ, ಹಿಂದೂ ದೇವತೆಗಳು ಮತ್ತು ವಿಗ್ರಹಾರಾಧನೆಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಲೇ ಈ ಪ್ರಕರಣದ ಕುರಿತು ಹೈದರಾಬಾದ್ ನಲ್ಲಿ ವ್ಯಾಪಕ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಪೊಲೀಸರು ಕೂಡ ಶಾಂತಿ ಕದಡದಂತೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದರು. ಇದೀಗ ಈ ಪ್ರಕರಣದ ಆರೋಪಿ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಾರಾಯಣಗುಡ ಸ್ಟೇಷನ್ ಹೌಸ್ ಆಫೀಸರ್ (SHO) ಯು ಚಂದ್ರ ಶೇಖರ್ ಅವರು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, 'ಆ ವ್ಯಕ್ತಿಯನ್ನು ಬಂಧಿಸಿ ಭಾರತೀಯ ನ್ಯಾಯ ಸಂಹಿತಾ (BNS) ಸೆಕ್ಷನ್ 302 (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು), 196 (ಕೋಮು ಸಾಮರಸ್ಯಕ್ಕೆ ಭಂಗ ತರುವುದು) ಮತ್ತು 351 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಹೇಳಿದ್ದಾರೆ.
ಅಲ್ಲದೆ ಸಂಭಾವ್ಯ ಕೋಮು ಅಶಾಂತಿಯನ್ನು ತಡೆಗಟ್ಟಲು ಪೊಲೀಸರು ಆ ವ್ಯಕ್ತಿಯ ಗುರುತನ್ನು ಬಹಿರಂಗಪಡಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಂಗಡಿ ಮಾಲೀಕರು ಮತ್ತು ಇತರರು ಸಲ್ಲಿಸಿದ ದೂರುಗಳ ಆಧಾರದ ಮೇಲೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಏನಿದು ಪ್ರಕರಣ?
ಜೂನ್ 27 ರ ಶುಕ್ರವಾರ ರಾತ್ರಿ ಹೈದರಾಬಾದ್ ನ ನಾರಾಯಣಗುಡದಲ್ಲಿರುವ ಸ್ಥಳೀಯ ಹೊಟೆಲ್ ಗೆ ತೆರೆಳಿದ್ದ ಮುಸ್ಲಿಂ ವ್ಯಕ್ತಿ ಅಲ್ಲಿ ಒಂದು ತಿನಿಸುಗಳನ್ನು ತೆಗೆದುಕೊಂಡಿದ್ದಾರೆ. ಈ ವೇಳೆ 450 ರೂ ಹಣ ಪಾವತಿಸಿ, 150 ರೂ ಚಿಲ್ಲರೆ ಕೇಳಿದ್ದಾರೆ. ಈ ವೇಳೆ ಹೊಟೆಲ್ ಕ್ಯಾಶಿಯರ್ ಚಿಲ್ಲರೆ ನೀಡಲು ತಡ ಮಾಡಿದಾಗ ಮುಸ್ಲಿಂ ವ್ಯಕ್ತಿ ಅಸಮಾಧಾನಗೊಂಡು ಗಟ್ಟಿ ಧನಿಯಲ್ಲಿ ಕೇಳಿದಾಗ ಕ್ಯಾಶಿಯರ್ ಮತ್ತು ಮುಸ್ಲಿಂ ವ್ಯಕ್ತಿ ನಡುವೆ ಮಾತಿನ ಚಕಮಕಿ ನಡೆದಿದೆ.
'ನಾನು ಮುಸ್ಲಿಂ ಪ್ರಾಮಾಣಿಕ.. ಹಿಂದೂಗಳು ವಿಗ್ರಹಾರಾದಕರು ವಂಚಕರು'
ಈ ವೇಳೆ ಕ್ಯಾಶಿಯರ್ ವಿರುದ್ಧ ಆಕ್ರೋಶಗೊಂಡ ಮುಸ್ಲಿಂ ವ್ಯಕ್ತಿ, 'ನಾನು 450 ರೂ. ಪಾವತಿಸಿದ್ದೇನೆ. ನನಗೆ 140 ರೂ. ಹಿಂತಿರುಗಿಸಬೇಕು... ಆದರೆ ಅವರು ನನ್ನ ಮೇಲೆ ಕೋಪಗೊಂಡರು. ನಾನು ಮುಸ್ಲಿಂ ಮತ್ತು ನಾನು ನನ್ನ ನಂಬಿಕೆಯಲ್ಲಿ ದೃಢವಾಗಿದ್ದೇನೆ. ಈ ಜನರು ಕಲ್ಲುಗಳನ್ನು ಪೂಜಿಸುತ್ತಾರೆ. ವಿಗ್ರಹರಾಧನೆ ಮಾಡುತ್ತಾರೆ.. ನೀವು ಹಿಂದೂಗಳು ಕಲ್ಲುಗಳನ್ನು ಪೂಜಿಸುತ್ತೀರಿ, ಆದರೆ ನಾವು ಮುಸ್ಲಿಮರು ಪ್ರಾಮಾಣಿಕರು. ನೀವು ಎಲ್ಲಿಂದಲೋ ಬಂದು ಇಲ್ಲಿ ವಾಸಿಸುತ್ತಿದ್ದೀರಿ.. ವಂಚಕರು' ಎಂದು ಹೇಳಿದ್ದಾನೆ.
ಈ ವೇಳೆ ಆತನ ಪಕ್ಕದಲ್ಲೇ ಇದ್ದ ಮತ್ತೋರ್ವ ಹಿಂದೂ ಗ್ರಾಹಕ ಆತನ ಮೇಲೆ ಕೋಪಗೊಂಡು ತಳ್ಳಿದ್ದು, ಈ ವಿಡಿಯೋ ಹೊಟೆಲ್ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಹೈದರಾಬಾದ್ ನಲ್ಲಿ ಹಿಂದೂಪರ ಸಂಘಟನೆಗಳು ಕ್ರಮಕೈಗೊಳ್ಳುವಂತೆ ಪೊಲೀಸರನ್ನು ಆಗ್ರಹಿಸಿವೆ.
ಹೈದರಾಬಾದ್ ಗೋಶಾ ಮಹಲ್ ಶಾಸಕ ಟಿ ರಾಜಾ ಸಿಂಗ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿ, 'ಮುಸ್ಲಿಂ ವ್ಯಕ್ತಿ ಹಿಂದೂ ಅಂಗಡಿಯವನೊಂದಿಗೆ ವಾಗ್ವಾದ ನಡೆಸುವಾಗ ಹಿಂದೂ ದೇವರುಗಳು ಮತ್ತು ವಿಗ್ರಹಾರಾಧನೆಯ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ. ಈ ವಿಷಯವನ್ನು ಹೈದರಾಬಾದ್ ಪೊಲೀಸರು ಗಂಭೀರವಾಗಿ ಪರಿಗಣಿಸಿ ಆ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.
ವಿಡಿಯೋ ವೈರಲ್: ಆರೋಪಿ ಬಂಧನ
ಇನ್ನು ಈ ವಿಡಿಯೋ ವೈರಲ್ ಆಗುತ್ತಲೇ ಎಚ್ಚೆತ್ತ ಹೈದರಾಬಾದ್ ಪೊಲೀಸರು ಜೂನ್ 28 ರ ಶನಿವಾರ ಆರೋಪಿ ಮುಸ್ಲಿಂ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಹ್ಯಾಟ್ಸ್ ಆಫ್ ಎಂದ ರಾಜಾ ಸಿಂಗ್
ಇನ್ನು ಆರೋಪಿ ಮುಸ್ಲಿಂ ವ್ಯಕ್ತಿಯ ಬಂಧನವಾಗುತ್ತಲೇ ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ಟಿ ರಾಜಾ ಸಿಂಗ್ ಪೊಲೀಸರ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಗಿಸಿದ್ದಾರೆ. 'ನಾನು ಹೈದರಾಬಾದ್ ನಗರ ಪೊಲೀಸ್ ಆಯುಕ್ತ ಸಿ.ವಿ. ಆನಂದ್ ಅವರೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದೆ., ಅವರು ಶೀಘ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಹಿಂದೂಗಳ ಧಾರ್ಮಿಕ ಭಾವನೆಗಳನ್ನು ರಕ್ಷಿಸುವಲ್ಲಿ ಪೊಲೀಸರ ತ್ವರಿತ ಪ್ರತಿಕ್ರಿಯೆಗಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ.. ಅವರ ಕಾರ್ಯಕ್ಕೆ 'ಹ್ಯಾಟ್ಸ್ ಆಫ್' ಎಂದು ಹೇಳುತ್ತೇನೆ ಎಂದು ರಾಜಾ ಸಿಂಗ್ ಹೇಳಿದ್ದಾರೆ.
Advertisement