
ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಅಧಿಕಾರ ಕಲ್ಪಿಸುವ Article 370 ರದ್ದಾದರೆ ದೇಶದಲ್ಲಿ ರಕ್ತಪಾತವೇ ಆಗುತ್ತದೆ ಎಂಬ ರಾಜಕೀಯ ನಾಯಕರ ಹೇಳಿಕೆಗಳ ನಡುವೆ ಅಸಾಧ್ಯವೆಂದೇ ಭಾವಿಸಿದ್ದ ನಿರ್ಣಯವನ್ನು ಒಂದೇ ಒಂದು ಹನಿ ರಕ್ತ ಕೂಡ ಹರಿಯದಂತೆ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡಿದ್ದು ಐತಿಹಾಸಿಕ ಎಂದು ನಟಿ ಪ್ರಿಯಾಮಣಿ ಶ್ಲಾಘಿಸಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ್ದ ಸಂದರ್ಶದನದಲ್ಲಿ ಪಾಲ್ಗೊಂಡು ಮಾತನಾಡಿದ್ದ ನಟಿ ಪ್ರಿಯಾಮಣಿ ಮೋದಿ ಸರ್ಕಾರದ ನಡೆಯನ್ನು ಐಸಿಹಾಸಿಕ ಎಂದು ಶ್ಲಾಘಿಸಿದ್ದಾರೆ. ಫೆಬ್ರವರಿಯಲ್ಲಿ ಈ ಸಂದರ್ಶನ ನಡೆದಿದ್ದು, ಇದೀಗ ಈ ಸಂದರ್ಶನದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ನಟಿ ಪ್ರಿಯಾಮಣಿ ಆರ್ಟಿಕಲ್ 370 ಎಂಬ ಚಿತ್ರದಲ್ಲಿ ನಟಿಸಿದ್ದು, ಇದೇ ಚಿತ್ರ ಮತ್ತು ಅದರ ಸುತ್ತಲಿನ ವಿವಾದಗಳ ಕುರಿತು ಸಂದರ್ಶನದಲ್ಲಿ ಮಾತನಾಡಿದ್ದಾರೆ. 'ಚಿತ್ರದ ಕುರಿತು ಬಹಳಷ್ಟು ವಿವಾದಗಳು ಎದ್ದಿದ್ದವು. ಕೆಲವರು ಇದನ್ನು ಪ್ರಚಾರ ಎಂದು ಕರೆದರು. ಈಗಲೂ ನಾವು ಅಂತಹ ಹೇಳಿಕೆಗಳನ್ನು ಎದುರಿಸುತ್ತಿದ್ದೇವೆ. ಮಹಿಳೆಯರ ನೇತೃತ್ವದ ಚಿತ್ರವು 100 ದಿನಗಳು ಪ್ರದರ್ಶನಗೊಂಡಿದ್ದಕ್ಕೆ ನಾವು ಸಂತೋಷ ಪಡುತ್ತೇವೆ ಎಂದರು.
ಅಂತೆಯೇ ಚಿತ್ರದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೇ ನಮ್ಮ ತಂಡವನ್ನು ಶ್ಲಾಘಿಸಿದ್ದಾರೆ. ನಮಗೆ ಪ್ರಧಾನಿಯವರಿಂದಲೇ ಮನ್ನಣೆ ಸಿಕ್ಕಿತು. ಇದು ಉತ್ತಮ ನಿರ್ಮಾಣದ ಚಿತ್ರ ಎಂದು ನಾನು ನಿಜವಾಗಿಯೂ ನಂಬುತ್ತೇನೆ ಎಂದು ಮೋದಿ ಹೇಳಿದ್ದರು. ಬಿಡುಗಡೆಯ ಮೊದಲು ಅನೇಕರಿಗೆ ಚಿತ್ರದ ಕುರಿತು ಸಾಕಷ್ಟು ಅನುಮಾನಗಳಿದ್ದವು, ಆದರೆ ಚಿತ್ರ ನೋಡಿದ ನಂತರ, ಅವರ ಅಭಿಪ್ರಾಯಗಳು ಬದಲಾದವು. ಜನರು ಇದು ಒಂದು ನಿರ್ದಿಷ್ಟ ರೀತಿಯಲ್ಲಿ ಇರುತ್ತದೆ ಎಂದು ಭಾವಿಸಿದ್ದರು.
ಆದರೆ ನಾವು ಸತ್ಯವನ್ನು ಹೇಳಿದ್ದರಿಂದ ಮತ್ತು ಜನ ಅದನ್ನು ನೋಡಿದಾಗ, ಅದು ಅವರು ನಿರೀಕ್ಷಿಸಿದಂತೆ ಅಲ್ಲ ಎಂದು ಅವರು ಅರಿತುಕೊಂಡರು. ಚಿತ್ರ ನಿರ್ಮಾಣದ ವೇಳೆ ಸೃಜನಶೀಲ ಸ್ವಾತಂತ್ರ್ಯಗಳನ್ನು ತೆಗೆದುಕೊಳ್ಳಲಾಗಿದ್ದರೂ, ಕಥೆಯ ತಿರುಳು ನೈಜ ಘಟನೆಗಳನ್ನು ಆಧರಿಸಿದೆ. ಯಾಮಿ ಗೌತಮಿಯ ಪಾತ್ರವು ನಿಜವಾದ ಅಧಿಕಾರಿಯಿಂದ ಪ್ರೇರಿತವಾಗಿತ್ತು, ಆದರೆ ಭದ್ರತಾ ಕಾರಣಗಳಿಗಾಗಿ, ನಾವು ಅವರ ನಿಜವಾದ ಗುರುತನ್ನು ಬಹಿರಂಗ ಮಾಡಲು ಅಥವಾ ಉಲ್ಲೇಖಿಸಲು ಸಾಧ್ಯವಾಗಲಿಲ್ಲ. ಚಿತ್ರದಲ್ಲಿ ನನ್ನ ಪಾತ್ರವು PMO ಅನ್ನು ಪ್ರತಿನಿಧಿಸುತ್ತದೆ ಎಂದರು.
ಪ್ರಧಾನಿ ಮೋದಿ ಅವರ ಐತಿಹಾಸಿಕ ನಿರ್ಣಯ
ಅಂತೆಯೇ ಚಿತ್ರದಲ್ಲಿ ನನ್ನದು ಪ್ರಮುಖ ಪಾತ್ರವಾಗಿತ್ತು. ಎಲ್ಲವನ್ನೂ ನಿರ್ದೇಶಕ, ನಿರ್ಮಾಪಕ ಮತ್ತು ಬರಹಗಾರರು ಎಚ್ಚರಿಕೆಯಿಂದ ಚರ್ಚಿಸಿದರು. ಮುಂದುವರಿಯುವ ಮೊದಲು ಅವರು PMO ಜೊತೆ ಸಂಭಾಷಣೆ ನಡೆಸಿದರು. ಚಿತ್ರದ PMO ಚಿತ್ರಣದ ಪ್ರತಿಯೊಂದು ಹಂತವನ್ನು ಅಧಿಕಾರಿಗಳು ಪರಿಶೀಲಿಸಿದ್ದರು.
ಚಿತ್ರೀಕರಣದ ಸಮಯದಲ್ಲಿ ನಾನು ಬಹಳಷ್ಟು ಇತಿಹಾಸವನ್ನು ಕಲಿತಿದ್ದೇನೆ. ಆರ್ಟಿಕಲ್ 370 ರದ್ದುಪಡಿಸಿದಾಗ, ನಾಗರಿಕರಾಗಿ ನಾವು ಸಾಕಷ್ಟು ಬೇಜವಾಬ್ದಾರಿಯಿಂದ ವರ್ತಿಸಿದ್ದೇವೆ. ಅಂತಹ ದೊಡ್ಡ ಘಟನೆಗಿಂತ ಕಡಿಮೆ ಮಹತ್ವದ್ದಾಗಿರುವ ಇತರ ವಿಷಯಗಳಿಂದ ನಾವು ವಿಚಲಿತರಾಗಿದ್ದೇವೆ. ಅದನ್ನು ಏಕೆ ರದ್ದುಪಡಿಸಲಾಯಿತು, ಅದರ ಹಿಂದಿನ ಪ್ರಮುಖ ಕಾರಣ ಮತ್ತು, ಮುಖ್ಯವಾಗಿ, ಅದನ್ನು ಹೇಗೆ ನಡೆಸಲಾಯಿತು ಎಂಬುದರ ಮೇಲೆ ನಾವು ಗಮನಹರಿಸಲು ವಿಫಲರಾಗಿದ್ದೇವೆ ಎಂದರು.
ಒಂದು ಹನಿ ರಕ್ತ ಕೂಡ ಹರಿಯಲಿಲ್ಲ
ಅಂತೆಯೇ ಆರ್ಟಿಕಲ್ 370 ರದ್ಧತೆ ವೇಳೆ ಒಂದೇ ಒಂದು ಜೀವವೂ ಬಲಿಯಾಗಲಿಲ್ಲ. ಒಂದು ಹನಿ ರಕ್ತವೂ ಚೆಲ್ಲಲಿಲ್ಲ. ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಗಳು ರದ್ದತಿಯನ್ನು ಸಂಘಟಿಸಿದ ರೀತಿ ನಂಬಲಾಗದಷ್ಟು ಬುದ್ಧಿವಂತ ಮತ್ತು ಕಾರ್ಯತಂತ್ರದ್ದಾಗಿತ್ತು. ಅದು ಹೇಗೆ ಸಂಭವಿಸಿತು ಎಂಬುದರ ಬಗ್ಗೆ ಮಾತ್ರವಲ್ಲದೆ PMO ಪ್ರಕ್ರಿಯೆಯ ಉದ್ದಕ್ಕೂ ಹೇಗೆ ಕಾರ್ಯನಿರ್ವಹಿಸಿತು ಎಂಬುದರ ಬಗ್ಗೆಯೂ ನನಗೆ ಇತಿಹಾಸದ ಪಾಠ ಸಿಕ್ಕಿತು. ಆರ್ಟಿಕಲ್ 370 ರದ್ಧತಿಯ ಮೂಲ ಅಧಿಕೃತ ಆದೇಶಗಳ ಪ್ರತಿಗಳನ್ನು ನಮಗೆ ಹಸ್ತಾಂತರಿಸಿದಾಗ, ನನ್ನ ಕೈಗಳು ನಡುಗಿದವು. ಅದು ನಿಜಕ್ಕೂ ರೋಮಾಂಚಕಾರಿ ಕ್ಷಣವಾಗಿತ್ತು. ಈ ದೀರ್ಘಕಾಲದ ಸಮಸ್ಯೆಯನ್ನು ಅವರು ಸರಿಪಡಿಸಿದ ರೀತಿ ಅಸಾಧಾರಣವಾಗಿತ್ತು ಎಂದು ಪ್ರಿಯಾಮಣಿ ಹೇಳಿದ್ದಾರೆ.
ಆದೇಶದ ಪ್ರತಿ
ಇದೇ ವೇಳೆ ನೀವು ಆ ಆದೇಶದ ಪ್ರತಿಯನ್ನು ಮನೆಯಲ್ಲಿಯೇ ಇಟ್ಟುಕೊಂಡಿದ್ದೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ನಟಿ ಪ್ರಿಯಾಮಣಿ, 'ಇದು ಖಂಡಿತಾ ಒಳ್ಳೆಯ ಉಪಾಯ. ಕಳೆದ ವರ್ಷ, ವರ್ಷದ ಮಧ್ಯದಲ್ಲಿ, ನನಗೆ ಗೃಹ ಸಚಿವರ ಕಚೇರಿಯಿಂದ ಒಂದು ಪತ್ರ ಬಂದಿದ್ದು ನನಗೆ ಇನ್ನೂ ನೆನಪಿದೆ. ಭಾರತೀಯ ಲಾಂಛನವಿರುವ ಅಧಿಕೃತ ಲೆಟರ್‌ಹೆಡ್ ಅನ್ನು ನೀವು ನೋಡಿದಾಗ, ಅಪಾರ ಹೆಮ್ಮೆಯ ಭಾವನೆ ಮೂಡುತ್ತದೆ. ಅವರು ನನ್ನ ಕೆಲಸವನ್ನು ಒಪ್ಪಿಕೊಂಡು ನನಗೆ ಒಂದು ಪತ್ರವನ್ನು ಕಳುಹಿಸಿದರು, ಅದು ಸ್ವತಃ ಒಂದು ಗೌರವವಾಗಿತ್ತು. ಅದರೊಂದಿಗೆ, ಅವರು ಅಂಚೆಚೀಟಿಗಳ ರೂಪದಲ್ಲಿ ಚಿತ್ರಿಸಲಾದ ರಾಮಾಯಣದ ಪ್ರತಿಯನ್ನು ನನಗೆ ಉಡುಗೊರೆಯಾಗಿ ನೀಡಿದ್ದರು. ಅದು ಅದ್ಭುತ ಎಂದು ನಾನು ಭಾವಿಸಿದೆ. ಇದು ಒಂದು ದೊಡ್ಡ ಗೌರವ. ನರೇಂದ್ರ ಮೋದಿ ಅವರಿಂದ ಉಲ್ಲೇಖವನ್ನು ಪಡೆಯುವುದು ನಮಗೆಲ್ಲರಿಗೂ ಅಸಾಧಾರಣ ಕ್ಷಣವಾಗಿತ್ತು.
Advertisement