
ಚಂಡೀಗಢ: ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿರುವುದಾಗಿ ಹರಿಯಾಣ ಪೊಲೀಸರು ಸೋಮವಾರ ತಿಳಿಸಿದ್ದಾರೆ. ಶನಿವಾರ ರೋಹ್ಟಕ್‌ನಲ್ಲಿ ಸೂಟ್‌ಕೇಸ್‌ನಲ್ಲಿ ನರ್ವಾಲ್ ಶವ ಪತ್ತೆಯಾಗಿತ್ತು.
ಹತ್ಯೆಯ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದು, ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹರಿಯಾಣ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಂತಕರನ್ನು ಬಂಧಿಸುವವರೆಗೂ ಶವವನ್ನು ಅಂತ್ಯಸಂಸ್ಕಾರ ಮಾಡುವುದಿಲ್ಲ ಎಂದು ನರ್ವಾಲ್ ಕುಟುಂಬ ಪಟ್ಟು ಹಿಡಿದಿದೆ. ಆಕೆ ರೋಹ್ಟಕ್‌ನ ವಿಜಯ್ ನಗರದಲ್ಲಿ ವಾಸಿಸುತ್ತಿದ್ದರು. ಕಾನೂನು ಪದವಿ ಪಡೆದಿದ್ದ ನರ್ವಾಲ್, ಕಾಂಗ್ರೆಸ್ ಪಕ್ಷದ ಸಕ್ರಿಯವಾಗಿದ್ದರು. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿಯೂ ಪಾಲ್ಗೊಂಡಿದ್ದರು ಎಂದು ಹರಿಯಾಣ ಕಾಂಗ್ರೆಸ್ ನಾಯಕರು ಹೇಳಿದ್ದಾರೆ
ರೋಹ್ಟಕ್‌ನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ನರ್ವಾಲ್ ಅವರ ತಾಯಿ ಸವಿತಾ, ಅಲ್ವಾವಧಿಯಲ್ಲಿಯೇ ರಾಜಕೀಯವಾಗಿ ಬೆಳವಣಿಗೆ ಹೊಂದಿದ್ದ ನರ್ವಾಲ್ ಬಗ್ಗೆ ಕಾಂಗ್ರೆಸ್ ಪಕ್ಷದ ಕೆಲ ನಾಯಕರು ಅಸೂಯೆಪಟ್ಟಿದ್ದರು. ಆಕೆಯ ಏಳಿಗೆ ಸಹಿಸದ ಸ್ವಪಕ್ಷದವರೇ ಅಥವಾ ಬೇರೆ ಯಾರೋ ಕೊಲೆ ಮಾಡಿಬರಹುದು ಎಂದು ಆರೋಪಿಸಿದರು.
ಫೆಬ್ರವರಿ 27 ರಂದು ಕೊನೆಯದಾಗಿ ಆಕೆಯ ಜೊತೆಗೆ ಮಾತನಾಡಿದ್ದೆ. ಮರುದಿನ ಪಕ್ಷದ ಕಾರ್ಯಕ್ರಮದಲ್ಲಿ ಬ್ಯುಸಿ ಇರುವುದಾಗಿ ಹೇಳಿದ್ದಳು. ಆದರೆ ತದನಂತರ ಫೋನ್ ಸ್ವಿಚ್ ಆಫ್ ಆಗಿತ್ತು. ನನ್ನ ಮಗಳಿಗೆ ನ್ಯಾಯ ಸಿಗುವವರೆಗೂ ಶವಸಂಸ್ಕಾರ ಮಾಡುವುದಿಲ್ಲ ಎಂದು ಅವರು ಹೇಳಿದರು.
ಕೊಲೆ ಪ್ರಕರಣದ ಕುರಿತು ರೋಹ್ಟಕ್‌ನ ಪೊಲೀಸ್ ಅಧೀಕ್ಷಕರೊಂದಿಗೆ ಮಾತನಾಡಿದ್ದು, ಪೊಲೀಸರು ಮತ್ತು ಸರ್ಕಾರ ಸಂತ್ರಸ್ತ ಕುಟುಂಬಕ್ಕೆ ತ್ವರಿತಗತಿಯಲ್ಲಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿರುವುದಾಗಿ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ತಿಳಿಸಿದರು.
ನರ್ವಾಲ್ ಪಕ್ಷದ ಒಳ್ಳೆಯ ಮತ್ತು ಸಕ್ರಿಯ" ಕಾರ್ಯಕರ್ತರಾಗಿದ್ದರು ಮತ್ತು ಪಕ್ಷದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಅಪರಾಧ ಎಸಗಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಕಾಂಗ್ರೆಸ್ ನಾಯಕ ಮತ್ತು ರೋಹ್ಟಕ್ ಪಕ್ಷದ ಶಾಸಕ ಬಿ ಬಿ ಬಾತ್ರಾ ಹೇಳಿದ್ದಾರೆ ಹೇಳಿದ್ದಾರೆ.
Advertisement