
ಚಂಡೀಗಢ: ಕಾಂಗ್ರೆಸ್ ನಾಯಕಿ ಹಿಮಾನಿ ನರ್ವಾಲ್ ಹತ್ಯೆಗೆ ಸಂಬಂಧಿಸಿದಂತೆ ಹರಿಯಾಣ ಪೊಲೀಸರು ಇಂಚಿಂಚೂ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಆರೋಪಿ ಹಿಮಾನಿ ನರ್ವಾಲ್ ಅವರನ್ನು ಮೊಬೈಲ್ ಚಾರ್ಜರ್ ವೈರ್'ನಿಂದ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆಂದು ಹೇಳಿದ್ದಾರೆ.
ಹೆಚ್ಚುವರಿ ಡಿಜಿಪಿ (ರೋಹ್ಟಕ್) ಕೆ.ಕೆ. ರಾವ್ ಅವರು ಪ್ರಕರಣ ಸಂಬಂಧ ಮಾಹಿತಿ ನೀಡಿದ್ದು, ಆರೋಪಿಯನ್ನು ಸಚಿನ್ ಅಲಿಯಾಸ್ ಟಿಲ್ಲು (30) ಎಂದು ಗುರ್ತಿಸಲಾಗಿದ್ದು. ಈತ ವಿವಾಹಿತ ಹಾಗೂ ಇಬ್ಬರು ಮಕ್ಕಳನ್ನು ಹೊಂದಿದ್ದಾನೆ. ಜಜ್ಜರ್ ಜಿಲ್ಲೆಯ ಕನೌಂಡಾದಲ್ಲಿ ಮೊಬೈಲ್ ರಿಪೇರಿ ಅಂಗಡಿಯನ್ನು ಹೊಂದಿದ್ದಾನೆಂದು ಹೇಳಿದರು.
ಆರೋಪಿ ಶರಣಾಗಿಲ್ಲ. ಆತನ ಬಗ್ಗೆ ಕೆಲ ಮಾಹಿತಿಗಳು ಲಭ್ಯವಾಗಿತ್ತು. ಮಾಹಿತಿ ಮೇರೆಗೆ ದೆಹಲಿಯಲ್ಲಿ ಬಂಧನಕ್ಕೊಳಪಡಿಸಲಾಯಿತು. ಆತನ ಬಳಿಯಿದ್ದ ಮೃತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
ಶವ ಪತ್ತೆಯಾಗುತ್ತಿದ್ದಂತೆ ನಾವು ಎಸ್‌ಐಟಿ ಸೇರಿದಂತೆ ಎಂಟು ತಂಡಗಳನ್ನು ರಚಿಸಿದ್ದೇವೆ. ಶವ ಪತ್ತೆಯಾಗುತ್ತಿದ್ದಂತೆ ಅವರನ್ನು ಗುರುತಿಸುವುದು ಮೊದಲ ಆದ್ಯತೆಯಾಗಿತ್ತು, ಕುಟುಂಬ ಆಕೆಯನ್ನು ಗುರುತಿಸಿದ ಬಳಿಕ ಆರೋಪಿಯನ್ನು ಪತ್ತೆಹಚ್ಚಲು ತಕ್ಷಣವೇ ತನಿಖೆಯನ್ನು ಆರಂಭಿಸಿಲಾಗಿತ್ತು.
ಕಳೆದ ಒಂದೂವರೆ ವರ್ಷಗಳಿಂದ, ಆರೋಪಿಯು ಸಾಮಾಜಿಕ ಮಾಧ್ಯಮಗಳ ಮೂಲಕ ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದ. ಆಕೆಯ ಮನೆಗೆ ಆಗಾಗ ಭೇಟಿ ನೀಡುತ್ತಿದ್ದ. ಹಿಮಾನಿ ನರ್ವಾಲ್ ರೋಹ್ಟಕ್ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಹಿಮಾನಿ ಕುಟುಂಬ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ.
ಆರೋಪಿ ಫೆಬ್ರವರಿ 27ರಂದು ಆರೋಪಿ ಹಿಮಾನಿ ಮನೆಗೆ ಬಂದಿದ್ದು, ರಾತ್ರಿ ಅಲ್ಲಿಯೇ ತಂಗಿದ್ದ. ಫೆಬ್ರವರಿ 28ರಂದು ಇಬ್ಬರ ನಡುವೆ ಹಣಕಾಸು ವಿಚಾರಕ್ಕೆ ಜಗಳವಾಗಿದೆ. ಇದಾದ ನಂತರ ಸಚಿನ್ ಹಿಮಾನಿಯನ್ನು ಆಕೆಯ ಸ್ಕಾರ್ಫ್ ಮತ್ತು ಮೊಬೈಲ್ ಚಾರ್ಜರ್ ವೈರ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಹಿಮಾನಿಯ ಮನೆಯಲ್ಲಿದ್ದ ಸೂಟ್‌ಕೇಸ್‌ನಲ್ಲಿ ಇರಿಸಿ ಎಸೆದಿದ್ದಾನೆ.
ಜಗಳದಲ್ಲಿ ಆರೋಪಿಯ ಕೈಗಳಿಗೂ ಗಾಯಗಳಾಗಿವೆ. ಇದರಿಂದಾಗಿ ಹೊದಿಕೆಯ ಮೇಲೆ ರಕ್ತ ಕಲೆಗಳಾಗಿವೆ. ಆರೋಪಿ ಹಿಮಾನಿಯ ಉಂಗುರಗಳು, ಚಿನ್ನದ ಸರ, ಮೊಬೈಲ್, ಲ್ಯಾಪ್‌ಟಾಪ್ ಮತ್ತು ಇತರ ಆಭರಣಗಳನ್ನು ಚೀಲದಲ್ಲಿ ಇರಿಸಿ ಹಿಮಾನಿಯ ಸ್ಕೂಟರ್ ಅನ್ನು ಕನೌಂಡಾ ಅಂಗಡಿಗೆ ತೆಗೆದುಕೊಂಡು ಹೋಗಿದ್ದಾನೆ.
ದೇಹವನ್ನು ವಿಲೇವಾರಿ ಮಾಡುವ ಸಲುವಾಗಿ ಆರೋಪಿ ಮತ್ತೆ ಹಿಮಾನಿ ಮನೆಗೆ ಹಿಂತಿರುಗಿದ್ದಾನೆ. ಇದಾದ ನಂತರ ಅವನು ಒಂದು ಆಟೋವನ್ನು ಬಾಡಿಗೆಗೆ ಪಡೆದು ಶವವನ್ನು ಸಂಪ್ಲಾ ಬಸ್ ನಿಲ್ದಾಣದಲ್ಲಿ ಎಸೆದಿದ್ದಾನೆಂದು ಮಾಹಿತಿ ನೀಡಿದ್ದಾರೆ.
ವಿಚಾರಣೆ ವೇಳೆ ಆರೋಪಿ ಹಿಮಾನಿ ತನಗೆ ಬ್ಲ್ಯಾಕ್ ಮೇಲ್ ಮಾಡುತ್ತಿರುವುದಾಗಿ ತಿಳಿಸಿದ್ದಾನೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಹಿಮಾನಿ ಹಣಕ್ಕಾಗಿ ನಿರಂತರ ಬೇಡಿಕೆ ಇಡುತ್ತಿದ್ದಳು. ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿದ್ದಳು. ಮತ್ತೆ ಹಣಕ್ಕಾಗಿ ಬೇಡಿಕೆ ಇಟ್ಟಾಗ ಕೋಪ ಬಂದಿತ್ತು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೋಪದ ಭದರಲ್ಲಿ ಆಕೆಯ ಕತ್ತು ಹಿಸುಕಿ ಹತ್ಯೆ ಮಾಡಿದೆ ಎಂದು ಆರೋಪಿ ಹೇಳಿದ್ದಾನೆಂದು ತಿಳಿಸಿದ್ದಾರೆ.
ಈ ನಡುವೆ ಆರೋಪಿ ಸೂಟ್‌ಕೇಸ್‌ನಲ್ಲಿ ಹಿಮಾನಿಯವರ ಶವವನ್ನು ತೆಗೆದುಕೊಂಡು ಹೋಗುತ್ತಿರುವ ಭಯಾನಕ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೀಡಿಯೋ ವೈರಲ್ ಆಗಿದೆ.
ಸಿಸಿಟಿವಿ ವಿಡಿಯೋದಲ್ಲಿ ಆರೋಪಿ ಹಿಮಾನಿ ಮನೆಯ ಹತ್ತಿರದ ಬೀದಿಯಲ್ಲಿ ಸೂಟ್‌ಕೇಸ್ ಎಳೆದುಕೊಂಡು ನಡೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಪೊಲೀಸರು ಈ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಹಿಮಾನಿ ನರ್ವಾಲ್, ರೋಹ್ಟಕ್ ಮತ್ತು ಹರಿಯಾಣದಲ್ಲಿ ಕಾಂಗ್ರೆಸ್ ನಾಯಕಿಯಾಗಿದ್ದರು. ಮಾರ್ಚ್ 1ರಂದು ರೋಹ್ಟಕ್ ಬಸ್ ನಿಲ್ದಾಣದಲ್ಲಿ ಹಿಮಾನಿಯ ಶವವು ವಾರಸುದಾರರಿಲ್ಲದ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿತ್ತು. ಕೊಲೆಗೂ ಮುನ್ನ ಹಿಮಾನಿ ಕೈಯಲ್ಲಿ ಮೆಹಂದಿ ಇತ್ತು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿತ್ತು.
ಸಹೋದರಿಯ ಹತ್ಯೆ ಕುರಿತು ಮಾತನಾಡಿರುವ ಹಿಮಾನಿ ಕಿರಿಯ ಸಹೋದರ ಜತಿನ್ ಅವರು, ಆರೋಪಿಯನ್ನು ಬಂಧಿಸಲಾಗಿದೆ, ಈಗ ನಾವು ಹಿಮಾನಿಯ ಅಂತ್ಯಕ್ರಿಯೆ ಮಾಡುತ್ತೇವೆ. ಆದರೆ, ಆರೋಪಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸುತ್ತೇವೆಂದು ಹೇಳಿದ್ದಾರೆ.
ಹಿಮಾನಿಯ ತಾಯಿ ಸವಿತಾ ನರ್ವಾಲ್ ಅವರು ಮಾತನಾಡಿ, ನನ್ನ ಮಗಳಿಗೆ ಯಾವುದೇ ಗೆಳೆಯ ಇರಲಿಲ್ಲ. ಅವಳು ನನಗೆ ಎಲ್ಲವನ್ನೂ ಹೇಳುತ್ತಿದ್ದಳು. ಎಲ್ಲರಿಗೂ ಅವಳು ತಿಳಿದಿರುವ ವ್ಯಕ್ತಿಯಾಗಿದ್ದಳು. ಸ್ನೇಹಿತ ಮತ್ತು ಗೆಳೆಯನ ನಡುವೆ ದೊಡ್ಡ ವ್ಯತ್ಯಾಸವಿದೆ. ಅವಳು ತನ್ನನ್ನು ಮತ್ತು ತನ್ನ ಸ್ನೇಹಿತರನ್ನು ಮಿತಿಯಲ್ಲಿ ಇಟ್ಟುಕೊಂಡಿದ್ದಳು. ಅವಳು ಯಾರಿಗೂ ಕೆಟ್ಟದ್ದನ್ನು ಬಯಸುತ್ತಿರಲಿಲ್ಲ, ಅದು ಕಾಲೇಜು ಸ್ನೇಹಿತನಾಗಿರಲಿ ಅಥವಾ ಪಕ್ಷದ ಯಾರೇ ಆಗಿರಲಿ. ನಾನು ಅವಳೊಂದಿಗೆ ಕೊನೆಯ ಬಾರಿಗೆ ಮಾತನಾಡಿದ್ದು ಫೆಬ್ರವರಿ 27 ರಂದು. ಮರುದಿನ ಪಕ್ಷದ ಕಾರ್ಯಕ್ರಮದಲ್ಲಿ ನಿರತಳಾಗುತ್ತೇನೆಂದು ನನಗೆ ಹೇಳಿದ್ದಳು, ಆದರೆ ನಂತರ ಅವಳ ಫೋನ್ ಸ್ವಿಚ್ ಆಫ್ ಆಗಿತ್ತು. ಆರೋಪಿ ಸಚಿನ್‌ಗೆ ಮರಣದಂಡನೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಪೊಲೀಸರ ಕ್ರಮಗಳ ಬಗ್ಗೆ ನನಗೆ ತೃಪ್ತಿ ಇಲ್ಲ. ಅವನಿಗೆ (ಆರೋಪಿಗೆ) ಮರಣದಂಡನೆ ವಿಧಿಸಬೇಕೆಂದು ನಾನು ಬಯಸುತ್ತೇನೆ. ಅವನಿಗೆ ಮರಣದಂಡನೆ ವಿಧಿಸದಿದ್ದರೆ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ, ಇದಕ್ಕೆ ಹರಿಯಾಣ ಸರ್ಕಾರ ಮತ್ತು ಆಡಳಿತ ಮಂಡಳಿ ಜವಾಬ್ದಾರವಾಗಿರುತ್ತದೆ ಎಂದು ತಿಳಿಸಿದ್ದಾರೆ.
Advertisement