
ಗುವಾಹಟಿ: ಅಸ್ಸಾಂನ ಮಾಜಿ ಮುಖ್ಯಮಂತ್ರಿಯೊಬ್ಬರ ಪುತ್ರಿ ಚಾಲಕನ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮದ್ಯದ ಅಮಲಿನಲ್ಲಿ ಚಾಲಕ ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.
ಮಾಜಿ ಸಿಎಂ ಪ್ರಫುಲ್ಲ ಕುಮಾರ್ ಮಹಂತ ಅವರ ಪುತ್ರಿ ಪ್ರಜೋಯೀತಾ ಕಶ್ಯಪ್ ಮುಂದೆ ವ್ಯಕ್ತಿಯೊಬ್ಬರು ಮಂಡಿಯೂರಿ ಕುಳಿತಿದ್ದು, ಆತನನ್ನು ನಿಂದಿಸುತ್ತಿರುವುದು ಮತ್ತು ಚಪ್ಪಲಿಯಿಂದ ಹೊಡೆಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಗುವಾಹಟಿಯ ದಿಸ್‌ಪುರ ಪ್ರದೇಶದ ಹೈ-ಸೆಕ್ಯುರಿಟಿ ಎಂಎಲ್‌ಎ ಹಾಸ್ಟೆಲ್‌ನ ಕ್ಯಾಂಪಸ್‌ನಲ್ಲಿ ಘಟನೆ ನಡೆದಿದ್ದು, ಈ ವೇಳೆ ಇತರ ಸಿಬ್ಬಂದಿ ಘಟನೆಯನ್ನು ವೀಕ್ಷಿಸುತ್ತಿದ್ದಾರೆ.
ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಪ್ರಜೋಯೀತಾ ಕಶ್ಯಪ್, ಆ ವ್ಯಕ್ತಿ ತಮ್ಮ ಕುಟುಂಬಕ್ಕಾಗಿ ದೀರ್ಘಕಾಲದಿಂದಲೂ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆದರೆ, ಆತ ಯಾವಾಗಲೂ ಕುಡಿದು ನನ್ನ ಮೇಲೆ ಅವಾಚ್ಯವಾಗಿ ನಿಂದಿಸುತ್ತಿದ್ದ. ಈ ಬಗ್ಗೆ ಎಲ್ಲರಿಗೂ ತಿಳಿದಿದೆ. ನಾವು ಇದನ್ನು ಆತನಿಗೆ ಅರ್ಥಮಾಡಿಸಲು ಯತ್ನಿಸಿದೆವು ಮತ್ತು ಹಾಗೆ ಮಾಡಬೇಡಿ ಎಂದು ಹೇಳಿದೆವು. ಆದರೆ, ಆತ ಎಲ್ಲ ಮಿತಿಗಳನ್ನು ಮೀರಿದ್ದಾನೆ. ನಮ್ಮ ಮನೆ ಬಾಗಿಲಿಗೆ ಬಡಿಯಲು ಪ್ರಾರಂಭಿಸಿದ ಎಂದು ಎಂದು ಹೇಳಿದರು.
ಈ ಸಂಬಂಧ ಪೊಲೀಸರಿಗೆ ಏಕೆ ದೂರು ನೀಡಿಲ್ಲ ಎಂದು ಕೇಳಿದ್ದಕ್ಕೆ ಉತ್ತರಸಿದ ಕಶ್ಯಪ್, ಇಂತಹ ಸಮಸ್ಯೆಗಳು ಉದ್ಭವಿಸಿದಾಗ ಹೆಚ್ಚಿನ ಸಂದರ್ಭಗಳಲ್ಲಿ ಮಹಿಳೆಯನ್ನೇ ಪ್ರಶ್ನಿಸಲಾಗುತ್ತದೆ ಎಂದರು.
ಚಾಲಕ ಸರ್ಕಾರಿ ನೌಕರನೇ ಅಥವಾ ಕುಟುಂಬದವರು ವೈಯಕ್ತಿಕವಾಗಿ ಆತನನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದಾರೋ ಎಂಬುದು ಸ್ಪಷ್ಟವಾಗಿಲ್ಲ.
ಅಸೋಮ್ ಗಣ ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರಫುಲ್ಲಕುಮಾರ್ ಮಹಾಂತ ಅವರು ಶಾಸಕರಾಗಿಲ್ಲದಿದ್ದರೂ ಅವರ ಕುಟುಂಬದೊಂದಿಗೆ ಶಾಸಕರ ಹಾಸ್ಟೆಲ್‌ನಲ್ಲಿ ಉಳಿಯಲು ಅವಕಾಶ ನೀಡಲಾಗಿದೆ.
ಮಹಾಂತ ಅವರು ಅಸ್ಸಾಂನ ಮುಖ್ಯಮಂತ್ರಿಯಾಗಿ ಎರಡು ಬಾರಿ ಸೇವೆ ಸಲ್ಲಿಸಿದ್ದಾರೆ. 1985 ರಿಂದ 1990 ರವರೆಗೆ ಮೊದಲ ಬಾರಿ ಮತ್ತು 1996 ರಿಂದ 2001 ರವರೆಗೆ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದರು.
Advertisement