
ಮುಂಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ರಂಜಾನ್ ತಿಂಗಳ ರೋಜಾ (ಉಪವಾಸ) ಆಚರಿಸದಿದ್ದಕ್ಕಾಗಿ ತೀವ್ರ ಟೀಕೆಗೆ ಗುರಿಯಾಗಿರುವ ಕ್ರಿಕೆಟಿಗ ಮೊಹಮ್ಮದ್ ಶಮಿಗೆ ಬಾಲಿವುಡ್ ಗೀತೆ ರಚನೆಕಾರ ಜಾವೇದ್ ಅಖ್ತರ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ದುಬೈನಲ್ಲಿ ನಡೆದ ಪಂದ್ಯದ ವೇಳೆ ಮೊಹಮ್ಮದ್ ಶಮಿ ಎನರ್ಜಿ ಡ್ರಿಂಕ್ ಸೇವಿಸುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಅಖಿಲ ಭಾರತ ಮುಸ್ಲಿಂ ಜಮಾತ್‌ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ, ಇಸ್ಲಾಮಿಕ್ ಪವಿತ್ರ ತಿಂಗಳ ರಂಜಾನ್‌ನಲ್ಲಿ ಉಪವಾಸ ಮಾಡದ ಶಮಿ ಕ್ರಿಮಿನಲ್ಎಂದಿದ್ದರು.
ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ಹೇಳುವುದಕ್ಕೆ ಹೆಸರುವಾಸಿಯಾಗಿರುವ ಅಖ್ತರ್, ಎಲ್ಲಾ ಟೀಕೆಗಳನ್ನು ನಿರ್ಲಕ್ಷಿಸಿ, ಉತ್ತಮ ಪ್ರದರ್ಶನ ನೀಡುವಂತೆ ಮೊಹಮ್ಮದ್ ಶಮಿಗೆ ಸಲಹೆ ನೀಡಿದ್ದಾರೆ. “ಶಮಿ ಸಾಹೇಬ್, ದುಬೈನ ಕ್ರಿಕೆಟ್ ಮೈದಾನದಲ್ಲಿ ಬಿರು ಬಿಸಿಲಿನಲ್ಲಿ ನೀವು ನೀರು ಕುಡಿಯುವುದಕ್ಕೆ ಯಾವುದೇ ತೊಂದರೆ ಮಾಡುವ ಧರ್ಮಾಂದ ಮುರ್ಖರ ಬಗ್ಗೆ ತಲೆಕೆಡಿಸಿಕೊಡಬೇಡಿ ಎಂದಿದ್ದಾರೆ.
ಹೀಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಜಾವೇದ್, ಇದು ಅವರಿಗೆ ಸಂಬಂಧಿಸಿದ ವಿಷಯವಲ್ಲಾ. ನಮ್ಮೆಲ್ಲರನ್ನೂ ಹೆಮ್ಮೆ ಪಡುವಂತೆ ಮಾಡುತ್ತಿರುವ ಮಹಾನ್ ಭಾರತೀಯ ತಂಡದಲ್ಲಿ ನೀವು ಒಬ್ಬರು, ನಿಮಗೆ ಮತ್ತು ನಮ್ಮ ಇಡೀ ತಂಡಕ್ಕೆ ನನ್ನ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.
ಮಂಗಳವಾರ ನಡೆದ ಪಂದ್ಯದಲ್ಲಿ ಆಸೀಸ್ ವಿರುದ್ಧ ಗೆಲ್ಲುವ ಮೂಲಕ ಭಾರತ ತಂಡ ಫೈನಲ್ ಗೆ ಲಗ್ಗೆ ಇಟ್ಟಿದೆ. ನಾಳೆ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದೆ.
Advertisement