ದೇಶಾದ್ಯಂತ ಹೋಳಿ ಸಂಭ್ರಮಾಚರಣೆ: ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರಿಂದ ಶುಭಾಶಯ

ಹರ್ಷೋಲ್ಲಾಸದ ಈ ಹಬ್ಬವು ಏಕತೆ, ಪ್ರೀತಿ ಮತ್ತು ಸಾಮರಸ್ಯದ ಸಂದೇಶವನ್ನು ನೀಡುತ್ತದೆ. ಈ ಹಬ್ಬವು ಭಾರತದ ಅಮೂಲ್ಯ ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ದೇಶಾದ್ಯಂತ ಹೋಳಿ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಬೆಳಗ್ಗೆಯಿಂದಲೇ ದೇವಾಲಯಗಳಿಗೆ ಭೇಟಿ ನೀಡುತ್ತಿರುವ ಜನರು, ದೇವರ ದರ್ಶನ ಪಡೆದು, ಪರಸ್ಪರ ಬಣ್ಣ ಎರಚುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.

ಹೋಳಿ ಹಬ್ಬ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ರಾಷ್ಟ್ರಪತಿಗಳು, ಬಣ್ಣಗಳ ಹಬ್ಬ ಹೋಳಿ ಹಬ್ಬದ ಈ ಶುಭ ಸಂದರ್ಭದಲ್ಲಿ ನಾಡಿನ ಸಮಸ್ತ ಜನತೆಗೆ ಹಾರ್ದಿಕ ಶುಭಾಶಯಗಳು. ಹರ್ಷೋಲ್ಲಾಸದ ಈ ಹಬ್ಬವು ಏಕತೆ, ಪ್ರೀತಿ ಮತ್ತು ಸಾಮರಸ್ಯದ ಸಂದೇಶವನ್ನು ನೀಡುತ್ತದೆ. ಈ ಹಬ್ಬವು ಭಾರತದ ಅಮೂಲ್ಯ ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದೆ. ಈ ಶುಭ ಸಂದರ್ಭದಲ್ಲಿ ಭಾರತಮಾತೆಯ ಎಲ್ಲ ಮಕ್ಕಳ ಜೀವನದಲ್ಲಿ ಪ್ರಗತಿ, ಸಮೃದ್ಧಿ, ಆನಂದಮಯವಾಗಿರಲಿ ಎಂದು ನಾವೆಲ್ಲರೂ ಸಂಕಲ್ಪ ಮಾಡೋಣ' ಎಂದು ಶುಭಾಶಯ ತಿಳಿಸಿದ್ದಾರೆ.

ಪ್ರಧಾನಿ ಮೋದಿಯವರು ಟ್ವೀಟ್ ಮಾಡಿ, 'ನಿಮಗೆಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು. ಆನಂದದಿಂದ ತುಂಬಿರುವ ಈ ಪವಿತ್ರ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಹೊಸ ಉತ್ಸಾಹ, ಚೈತನ್ಯವನ್ನು ತುಂಬುತ್ತದೆ ಮತ್ತು ಏಕತೆಯ ಬಣ್ಣವನ್ನು ಮತ್ತಷ್ಟು ಗಾಢವಾಗಿಸುತ್ತದೆ' ಎಂದು ಶುಭ ಹಾರೈಸಿದ್ದಾರೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿ, ಹೋಳಿ ಹಬ್ಬದ ಶುಭಾಶಯ ಕೋರಿದ್ದು, 'ಬಣ್ಣದ ಹಬ್ಬವು ನಿಮ್ಮೆಲ್ಲರ ಜೀವನದಲ್ಲಿ ಹೊಸ ಹುರುಪು, ಉತ್ಸಾಹ ಹಾಗೂ ಸಂತೋಷವನ್ನು ತರಲಿ ಎಂದು ಆಶಿಸಿದ್ದಾರೆ.

ಸಂಗ್ರಹ ಚಿತ್ರ
'ನಿಮಗೆ ಹೋಳಿ ಬಣ್ಣ ಸಮಸ್ಯೆ ಆದರೆ, ಹಿಜಾಬ್‌ ತರ ಟಾರ್ಪಲ್ ಸುತ್ತಿಕೊಂಡು ಓಡಾಡಿ': ಮುಸ್ಲಿಂರಿಗೆ ಯುಪಿ ಸಚಿವರ ವಿಚಿತ್ರ ಸಲಹೆ!

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಟ್ವೀಟ್ ಮಾಡಿ, ಹೋಳಿ ವಿವಿಧತೆಯ ಹಬ್ಬವಾಗಿದೆ. ಭಯ, ಅಸೂಯೆ, ದ್ವೇಷ, ತಾರತಮ್ಯಗಳನ್ನು ಹೋಗಲಾಡಿಸುವ ಹಬ್ಬ ಇದಾಗಿದೆ. ಬಣ್ಣಗಳ ವೈವಿಧ್ಯತೆಯನ್ನು ಆನಂದಿಸಲು ಹೋಳಿ ನಮಗೆ ಸ್ಫೂರ್ತಿ ನೀಡುತ್ತದೆ. ಬನ್ನಿ ಬಹು-ಸಾಂಸ್ಕೃತಿಕ ಸಮಾಜವನ್ನು ಏಕತೆ, ಸಹೋದರತ್ವ, ಸಾಮರಸ್ಯಗಳ ಬಣ್ಣಗಳಿಂದ ತುಂಬೋಣ ಎಂದು ಶುಭಾಶಯ ಕೋರಿದ್ದಾರೆ.

ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೋಳಿ ಹಬ್ಬದ ಶುಭಾಶಯ ತಿಳಿಸಿದ್ದು, 'ಪ್ರಕಾಶಮಾನವಾದ ಬಣ್ಣಗಳು ನಿಮ್ಮ ಜೀವನವನ್ನು ಸಂತೋಷ, ಸಮೃದ್ಧಿ ಮತ್ತು ಯಶಸ್ಸಿನಿಂದ ತುಂಬಲಿ' ಎಂದು ಶುಭಾಶಯ ಕೋರಿದ್ದಾರೆ.

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಬಣ್ಣಗಳ ಹಬ್ಬ ಹೋಳಿಯು ಸರ್ವರಿಗೂ ಸಂತೋಷ ನೆಮ್ಮದಿ ತರಲಿ ಹಾಗೂ ಏಕತೆ, ಸಾಮರಸ್ಯದ ಸಂಕೇತವಾಗಿರುವ ಹಬ್ಬವು ಎಲ್ಲರ ಬದುಕಿಗೆ ಶುಭವನ್ನು ಉಂಟು ಮಾಡಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಹಾರೈಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ.ವಿಜಯೇಂದ್ರ ಅವರು ಪೋಸ್ಟ್ ಮಾಡಿ, ನಾಡಿನ ಸಮಸ್ತ ಜನತೆಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಬಣ್ಣ ಬಣ್ಣದ ಓಕುಳಿಯು ಎಲ್ಲರ ಬದುಕಿನಲ್ಲೂ ಸಂತಸದ ಚಿತ್ತಾರವನ್ನು ಮೂಡಿಸಲಿ. ನಾಡಿನೆಲ್ಲೆಡೆ ಸಂತೋಷ, ಸಮೃದ್ಧಿ, ನೆಮ್ಮದಿ ನೆಲೆಸುವ ಹಬ್ಬವಾಗಲಿ ಎಂದು ಹೇಳಿದ್ದಾರೆ.

ಬಣ್ಣಗಳ ಹಬ್ಬ ಎಂದೂ ಕರೆಯಲ್ಪಡುವ ಹೋಳಿಯು ವಸಂತಕಾಲದ ಆಗಮನ ಮತ್ತು ಚಳಿಗಾಲದ ಅಂತ್ಯವನ್ನು ಸೂಚಿಸುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com