
ಚೆನ್ನೈ: ಸದ್ಯ ನಡೆಯುತ್ತಿರುವ ಭಾಷಾ ಚರ್ಚೆಗೆ ಸಂಬಂಧಿಸಿದಂತೆ ನಟ ಕಮ್ ರಾಜಕಾರಣಿ ಪವನ್ ಕಲ್ಯಾಣ್ ಅವರ ಟೀಕೆಗಳಿಗೆ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಶನಿವಾರ ಪ್ರತಿಕ್ರಿಯಿಸಿದೆ.
ತಮಿಳು ಸಿನಿಮಾಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಹಿಂದಿಗೆ ಡಬ್ ಮಾಡಲು ಅವಕಾಶ ನೀಡುವಾಗ ಅದಕ್ಕೆ ಯಾಕೆ ವಿರೋಧಿಸುತ್ತೀರಾ ಎಂದು ಪವನ್ ಕಲ್ಯಾಣ್ ತಮಿಳುನಾಡು ರಾಜಕಾರಣಿಗಳ ಹಿಂದಿ ನಿಲುವನ್ನು ಪ್ರಶ್ನಿಸಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಡಿಎಂಕೆ ವಕ್ತಾರ ಡಾ. ಸೈಯದ್ ಹಫೀಜುಲ್ಲಾ, ಭಾಷಾ ನೀತಿಗಳ ಬಗ್ಗೆ "ಟೊಳ್ಳಾದ ತಿಳುವಳಿಕೆ" ಎಂದು ವಿವರಿಸಿದ್ದಾರೆ.
ಹಿಂದಿ ಅಥವಾ ಇನ್ನಾವುದೇ ಭಾಷೆಯನ್ನು ಕಲಿಯುವ ವ್ಯಕ್ತಿಗಳನ್ನು ತಮಿಳುನಾಡು ಎಂದಿಗೂ ವಿರೋಧಿಸಿಲ್ಲ ಆದರೆ ತನ್ನ ಜನರ ಮೇಲೆ ಹಿಂದಿ ಅಥವಾ ಯಾವುದೇ ಭಾಷೆಯನ್ನು ಹೇರುವುದನ್ನು ವಿರೋಧಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಜನಸೇನಾ ರಚನೆಯ ದಿನದಂದು ಮಾತನಾಡಿದ ಪವನ್ ಕಲ್ಯಾಣ್, ತಮಿಳುನಾಡು ನಿರಂತರವಾಗಿ ಹಿಂದಿಯನ್ನು ತಿರಸ್ಕರಿಸುತ್ತದೆ, ತಮಗೆ ಬೇಡವೆಂದು ಹೇಳುತ್ತದೆ. ಹಾಗಿದ್ದರೆ, ಅವರು ತಮಿಳು ಸಿನಿಮಾಗಳನ್ನು ಹಿಂದಿಗೆ ಏಕೆ ಡಬ್ ಮಾಡುತ್ತಾರೆ? ಉತ್ತರ ಪ್ರದೇಶ, ಬಿಹಾರ ಮತ್ತು ಛತ್ತೀಸ್‌ಗಢದಂತಹ ಹಿಂದಿ ಮಾತನಾಡುವ ರಾಜ್ಯಗಳಿಂದ ಹಣವನ್ನು ಹುಡುಕುತ್ತಾರೆ ಮತ್ತು ಅವರು ಬಿಹಾರದ ಕಾರ್ಮಿಕರನ್ನು ಅವಲಂಬಿಸಿದ್ದಾರೆ. ಆದರೂ ಅವರು ಹಿಂದಿಯನ್ನು ಧಿಕ್ಕರಿಸುತ್ತಾರೆ ಎಂದು ಹೇಳುವುದು ಹೇಗೆ?" ಅವರು ಹೇಳಿದ್ದರು.
ಪವನ್ ಕಲ್ಯಾಣ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಹಿರಿಯ ಡಿಎಂಕೆ ನಾಯಕ ಟಿಕೆಎಸ್ ಇಳಂಗೋವನ್, ಹಿಂದಿ ಹೇರಿಕೆಗೆ ತಮಿಳುನಾಡಿನ ದೀರ್ಘಕಾಲದ ವಿರೋಧವನ್ನು ಪುನರುಚ್ಚರಿಸಿದ್ದರು. ನಾವು 1938 ರಿಂದ ಹಿಂದಿಯನ್ನು ವಿರೋಧಿಸುತ್ತಿದ್ದೇವೆ. ತಮಿಳುನಾಡು ಯಾವಾಗಲೂ ಶಿಕ್ಷಣ ತಜ್ಞರ ಸಲಹೆ ಮತ್ತು ಸಲಹೆಗಳ ಆಧಾರದ ಮೇಲೆ ದ್ವಿಭಾಷಾ ಸೂತ್ರವನ್ನು ಅನುಸರಿಸುತ್ತದೆ ಎಂದು ವಿಧಾನಸಭೆಯಲ್ಲಿ ಶಾಸನ ಅಂಗೀಕರಿಸಿದ್ದೇವೆ.1968ರ ಹಿಂದೆಯೇ ಅಂತಹ ಬಿಲ್ ಅನುಮೋದನೆಯಾಗಿದೆ. ಆಗ ಪವನ್ ಕಲ್ಯಾಣ್ ಇನ್ನೂ ಹುಟ್ಟೇ ಇರಲಿಲ್ಲ. ಅವರಿಗೆ ತಮಿಳುನಾಡಿನ ರಾಜಕೀಯದ ಏನು ತಿಳಿದಿಲ್ಲ. ಜನರಿಗೆ ಮಾತೃಭಾಷೆಯಲ್ಲಿ ಶಿಕ್ಷಣವು ಉತ್ತಮ ಮಾರ್ಗವಾಗಿದೆ ಎಂದು ಅವರು ಹೇಳಿದರು.
ಪವನ್ ಕಲ್ಯಾಣ್ ಅವರ ಹೇಳಿಕೆಗಳು ರಾಜಕೀಯ ಪ್ರೇರಿತವಾಗಿದೆ ಎಂದು ಅವರು ಆರೋಪಿಸಿದರು.
Advertisement