
ಗೋರಖ್‌ಪುರ: ಮಹಾಕುಂಭ ವ್ಯವಸ್ಥೆಗಳನ್ನು ಟೀಕಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹೇಳಿಕೆಗೆ ತಿರುಗೇಟು ನೀಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪ್ರಯಾಗರಾಜ್‌ನ ಮಹಾಕುಂಭ ಮೇಳವನ್ನು 'ಮೃತ್ಯುಕುಂಭ' ಎಂದು ಹೇಳಿದ್ದವರು ಹೋಳಿ ಸಮಯದಲ್ಲಿ ಹಿಂದೂಗಳ ಮೇಲಿನ ದಾಳಿಯನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಗೋರಖ್‌ಪುರ ಪತ್ರಕರ್ತರ ಪ್ರೆಸ್ ಕ್ಲಬ್ ಗೆ ಹೊಸದಾಗಿ ಆಯ್ಕೆಯಾದ ಪದಾಧಿಕಾರಿಗಳ ಪ್ರಮಾಣವಚನ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ, ಮೊದಲ ಬಾರಿಗೆ ಜನರು ತಮಿಳುನಾಡಿನಿಂದ ಮಹಾ ಕುಂಭಕ್ಕೆ ಬಂದರು. ಕೇರಳದಿಂದಲೂ ಭಕ್ತರು ಬಂದರು. ಉತ್ತರ ಪ್ರದೇಶದ ಜನಸಂಖ್ಯೆ 25 ಕೋಟಿ ಮತ್ತು ಇಲ್ಲಿ ಹೋಳಿ ಶಾಂತಿಯುತವಾಗಿ ಮುಗಿಯಿತು. ಆದರೆ, ಪಶ್ಚಿಮ ಬಂಗಾಳದಲ್ಲಿ, ಹೋಳಿ ಸಮಯದಲ್ಲಿ ಹಲವಾರು ದಾಳಿಗಳು ನಡೆದವ ಎಂದು ಅವರು ಹೇಳಿದರು.
ಹೋಳಿ ದಿನದಂದು, ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಆಚರಣೆಯ ಸಮಯದಲ್ಲಿ ನಡೆದ ಘರ್ಷಣೆಯಲ್ಲಿ 20 ವರ್ಷದ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ತಿಟಗಢದಲ್ಲಿರುವ ತನ್ನ ನಿವಾಸದ ಬಳಿ ತನ್ನ ಸ್ನೇಹಿತರೊಂದಿಗೆ ಹೋಳಿ ಆಚರಿಸುತ್ತಿದ್ದಾಗ ಆಕಾಶ್ ಚೌಧರಿ ಅಲಿಯಾಸ್ ಅಮರ್ ಅವರನ್ನು ಮೂರ್ನಾಲ್ಕು ಯುವಕರು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಜಗಳ ಆರಂಭವಾದಾಗ, ಹಲ್ಲೆಕೋರರು ಅವರ ಕುತ್ತಿಗೆ ಮತ್ತು ದೇಹದ ಇತರ ಭಾಗಗಳಿಗೆ ಪದೇ ಪದೇ ಇರಿದಿದ್ದಾರೆ ಎಂದು ಅಧಿಕಾರಿ ಹೇಳಿದರು.
ಹೋಳಿ ಸಮಯದಲ್ಲಿ ನಡೆಯುತ್ತಿದ್ದ ಘರ್ಷಣೆಗಳನ್ನು ನಿಯಂತ್ರಿಸಲು ಸಾಧ್ಯವಾಗದ ಜನರು, ಪ್ರಯಾಗ್‌ರಾಜ್‌ನ ಮಹಾ ಕುಂಭವನ್ನು 'ಮೃತ್ಯು ಕುಂಭ' ಎಂದು ಗೇಲಿ ಮಾಡಿದ್ದರು. ಆದರೆ, ಇದು 'ಮೃತ್ಯು' (ಸಾವು) ಅಲ್ಲ, ಇದು 'ಮೃತ್ಯುಂಜಯ' (ಸಾವಿನ ಮೇಲಿನ ಗೆಲುವು) ಎಂದು ನಾವು ನಂಬಿದ್ದೇವೆ. 45 ದಿನಗಳ ಈ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳದಿಂದ ಪ್ರತಿದಿನ 50,000 ರಿಂದ 1 ಲಕ್ಷ ಜನರು ಭಾಗವಹಿಸಿದ್ದರು ಎಂದು ಯೋಗಿ ಹೇಳಿದರು.
ಜನವರಿ 29ರಂದು 30 ಭಕ್ತರು ಸಂಗಮದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದರು. ಇದಾದ ಕೆಲವು ದಿನಗಳ ನಂತರ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂತಹ ಕಾಲ್ತುಳಿತದ ಘಟನೆಗಳಿಂದಾಗಿ ಮಹಾ ಕುಂಭವು ಮೃತ್ಯುಕುಂಭವಾಗಿ ಮಾರ್ಪಟ್ಟಿದೆ ಎಂದು ಹೇಳಿದ್ದರು. ನಿಖರ ಸಾವಿನ ಸಂಖ್ಯೆಯನ್ನು ಅಧಿಕಾರಿಗಳು ನಿಯಂತ್ರಿಸಿದ್ದಾರೆ ಎಂದು ಆರೋಪಿಸಿದ್ದರು.
Advertisement