
ಹೈದರಾಬಾದ್: ಇಲ್ಲಿನ ದೇವಸ್ಥಾನವೊಂದರ ಲೆಕ್ಕಾಧಿಕಾರಿ ಮೇಲೆ ರಾಸಾಯನಿಕ ಪದಾರ್ಥ ಎಸೆದು ಗಾಯಗೊಳಿಸಿದ ಆರೋಪದಲ್ಲಿ ಇಬ್ಬರು ಅರ್ಚಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಮಾರ್ಚ್ 14 ರಂದು ಸೈದಾಬಾದ್‌ನಲ್ಲಿರುವ ಶ್ರೀ ಭೂಲಕ್ಷ್ಮಿ ಮಾತಾ ದೇವಸ್ಥಾನದಲ್ಲಿ ಈ ಘಟನೆ ಸಂಭವಿಸಿದೆ.
ದೇವಸ್ಥಾನದಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ 60 ವರ್ಷದ ಲೆಕ್ಕಾಧಿಕಾರಿ ರಿಸೆಪ್ಷನ್ ಟೇಬಲ್ ನಲ್ಲಿ ಕುಳಿತಿದ್ದಾಗ ಅಲ್ಲಿಗೆ ಬಂದ ಮಾಸ್ಕ್ ಧರಿಸಿದ ಅಪರಿಚಿತ ವ್ಯಕ್ತಿಯೋರ್ವ ಅನ್ನದಾಸೋಹ ಕಾರ್ಯಕ್ರಮದ ಬಗ್ಗೆ ವಿಚಾರಿಸಿದ್ದಾರೆ.
ಸ್ವಲ್ಪ ಸಮಯದ ನಂತರ ಅನ್ನದಾನದ ರಸೀದಿ ನೀಡುವಂತೆ ಲೆಕ್ಕಾಧಿಕಾರಿಯನ್ನು ಕೇಳಿದ್ದಾನೆ. ಅಕೌಂಟೆಂಟ್ ಬರೆಯುತ್ತಿದ್ದಾಗ ಆತನ ನೆತ್ತಿಯ ಮೇಲೆ ಹೆಚ್ಚಾಗಿ ಗೊತ್ತಿಲ್ಲದ ದ್ರವವೊಂದನ್ನು ಸುರಿದು “ಹೋಳಿ ಶುಭಾಶಯಗಳು” ಎಂದು ಹೇಳಿ ಅಪರಿಚಿತ ವ್ಯಕ್ತಿ ಪರಾರಿಯಾಗಿದ್ದ ಎಂದು ಪೊಲೀಸ್ ಉಪ ಆಯುಕ್ತ (ಆಗ್ನೇಯ ವಲಯ) ಪಾಟೀಲ್ ಕಾಂತಿಲಾಲ್ ಸುಭಾಷ್ ತಿಳಿಸಿದ್ದಾರೆ.
ಹಲ್ಲೆಯಿಂದ ಅಕೌಂಟೆಂಟ್‌ನ ನೆತ್ತಿ, ಮುಖ, ಕಣ್ಣು ಮತ್ತು ಕುತ್ತಿಗೆಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಸಾಯನಿಕ ದ್ರವದ ಬಗ್ಗೆ ವಿಶ್ಲೇಷಿಸಲಾಗುತ್ತಿದೆ.
ಅಪರಿಚಿತ ದುಷ್ಕರ್ಮಿಗಳು ತನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಸಂತ್ರಸ್ತ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ದೂರಿನ ಆಧಾರದ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ತಲೆಮರೆಸಿಕೊಂಡಿರುವ ಆರೋಪಿಗಳನ್ನು ಗುರುತಿಸಲು ಪೊಲೀಸರು ಆರು ತಂಡಗಳನ್ನು ರಚಿಸಿದ್ದು, ಸುಮಾರು 400 ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಪ್ರಕರಣ ಸಂಬಂಧ ದೇವಾಲಯದ ಇಬ್ಬರು ಅರ್ಚಕರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
Advertisement