
ನಾಗ್ಪುರ: ಮೊಘಲ್ ದೊರೆ ಔರಂಗಜೇಬ್ ಸಮಾಧಿ ತೆರವಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾಗ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆಗೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ಕೆಲ ಪದಾಧಿಕಾರಿಗಳ ವಿರುದ್ಧ ಮಹಾರಾಷ್ಟ್ರದ ನಾಗ್ಪುರ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ವಿಎಚ್‌ಪಿಯ ಮಹಾರಾಷ್ಟ್ರ ಮತ್ತು ಗೋವಾ ಉಸ್ತುವಾರಿ ಕಾರ್ಯದರ್ಶಿ ಗೋವಿಂದ ಶೆಂಡೆ ಮತ್ತು ಇತರರ ವಿರುದ್ಧ ಗಣೇಶ್‌ಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿರುವ ಔರಂಗಜೇಬ್ ಸಮಾಧಿ ತೆರವಿಗೆ ಒತ್ತಾಯಿಸಿ ವಿಎಚ್‌ಪಿ ನಡೆಸಿದ ಪ್ರತಿಭಟನೆ ವೇಳೆ ಸಮುದಾಯವೊಂದರ ಪವಿತ್ರ ಗ್ರಂಥವನ್ನು ಸುಟ್ಟು ಹಾಕಲಾಗಿದೆ ಎಂಬ ವದಂತಿಗಳ ಮಧ್ಯೆ ಸೋಮವಾರ ಸಂಜೆ 7.30 ರ ಸುಮಾರಿಗೆ ಮಹಲ್ ಪ್ರದೇಶದ ಸೆಂಟ್ರಲ್ ನಾಗ್ಪುರದ ಚಿಟ್ನಿಸ್ ಪಾರ್ಕ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿತು.
ಪ್ರತಿಭಟನೆ ನಂತರ ಪ್ರತಿಭಟನಾಕಾರರ ವಿರುದ್ಧ ದೂರು ದಾಖಲಿಸಲಾಗಿದ್ದು, ಸಮುದಾಯವೊಂದರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಗಣೇಶಪೇಟ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಮೋಲ್ ಠಾಕ್ರೆ, ಡಾ ಮಹಾಜನ್, ತಯಾನಿ, ರಜತ್ ಪುರಿ, ಸುಶೀಲ್ ಸೇರಿದಂತೆ ಇತರ ಕೆಲ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಪದಾಧಿಕಾರಿಗಳ ಹೆಸರನ್ನು ಎಫ್ ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ಆದರೆ ಇದುವರೆಗೆ ಯಾರ ಬಂಧನವೂ ಆಗಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
Advertisement