
ನೋಯ್ಡಾ: ಪ್ರಿಯಕರನಿಗಾಗಿ ತನ್ನ ನಾಲ್ಕು ಮಕ್ಕಳೊಂದಿಗೆ ಎರಡು ವರ್ಷಗಳ ಹಿಂದೆ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಮತ್ತು ಆಕೆಯ ಎರಡನೇ ಪತಿ ಸಚಿನ್ ಮೀನಾ ಮಂಗಳವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೀಮಾ ಹೈದರ್ ಬೆಳಗ್ಗೆ 4 ಗಂಟೆಗೆ ಗ್ರೇಟರ್ ನೋಯ್ಡಾದ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ದಂಪತಿ ಪರ ವಕೀಲ ಎಪಿ ಸಿಂಗ್ ತಿಳಿಸಿದ್ದಾರೆ.
'ಸೀಮಾ ಹೈದರ್ ಮತ್ತು ಮೀನಾ ದಂಪತಿ ಹೆಣ್ಣು ಮಗುವಿಗೆ ಹೆಮ್ಮೆಯ ಪೋಷಕರಾಗಿದ್ದಾರೆ. ಮಂಗಳವಾರ ಬೆಳಗಿನ ಜಾವ 4 ಗಂಟೆಗೆ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ. ಸಾಮಾಜಿಕ ಮಾಧ್ಯಮದ ಮೂಲಕ ಆ ಹೆಣ್ಣು ಮಗುವಿಗೆ ಹೆಸರನ್ನು ಸೂಚಿಸಲು ನಾನು ಜನರನ್ನು ಆಹ್ವಾನಿಸುತ್ತೇನೆ' ಎಂದು ಸಿಂಗ್ ಹೇಳಿದರು.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಜಾಕೋಬಾಬಾದ್‌ನ 32 ವರ್ಷದ ಸೀಮಾ, ತನ್ನ ಮಕ್ಕಳನ್ನು ಕರೆದುಕೊಂಡು 2023ರ ಮೇನಲ್ಲಿ ನೇಪಾಳ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದರು.
ಬಳಿಕ ಭಾರತೀಯ ಅಧಿಕಾರಿಗಳು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ಪ್ರದೇಶದಲ್ಲಿ ಸಚಿನ್ ಮೀನಾ (27) ಜೊತೆಗೆ ವಾಸಿಸುತ್ತಿರುವುದನ್ನು ಪತ್ತೆಹಚ್ಚಿದ್ದರು. ಬಳಿಕ ಸೀಮಾ ತನ್ನ ಪ್ರಿಯಕರನಿಗಾಗಿ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದು ತಿಳಿದುಬಂದಿತ್ತು. ಸಚಿನ್ ಮೀನಾ ಇದೀಗ ಸೀಮಾ ಅವರನ್ನು ಮದುವೆಯಾಗಿರುವುದಾಗಿ ಹೇಳಿಕೊಳ್ಳುತ್ತಾರೆ.
ಈ ಜೋಡಿ 2019 ರಲ್ಲಿ ಆನ್‌ಲೈನ್ ಆಟ ಆಡುವಾಗ ಸಂಪರ್ಕಕ್ಕೆ ಬಂದಿತ್ತು ಎಂದು ವರದಿಯಾಗಿದೆ. ಹೈದರ್ ಅವರು ಮೊದಲಿಗೆ ಪಾಕಿಸ್ತಾನದ ಗುಲಾಮ್ ಹೈದರ್ ಎಂಬುವವರನ್ನು ಮದುವೆಯಾಗಿದ್ದರು. ದಂಪತಿಗೆ ನಾಲ್ಕು ಮಕ್ಕಳಿದ್ದಾರೆ.
ಹೈದರ್ ಮತ್ತು ಮೀನಾ ಅವರನ್ನು ಜುಲೈ 2023 ರಲ್ಲಿ ಬಂಧಿಸಲಾಯಿತು, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಹೈದರ್ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇಲೆ ಮತ್ತು ಮೀನಾ ವಿರುದ್ಧ ಅಕ್ರಮ ವಲಸಿಗರಿಗೆ ಆಶ್ರಯ ನೀಡಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. ಸಚಿನ್ ಮೀನಾರನ್ನು ಮದುವೆಯಾದ ನಂತರ ತಾನು ಹಿಂದೂ ಧರ್ಮವನ್ನು ಅಳವಡಿಸಿಕೊಂಡಿರುವುದಾಗಿ ಸೀಮಾ ತಿಳಿಸಿದ್ದಾರೆ.
Advertisement