
ನವದೆಹಲಿ: ದೆಹಲಿ ಮಾದರಿಯಲ್ಲೇ ನೆರೆಯ ತಮಿಳುನಾಡಿನಲ್ಲೂ ಬಹುದೊಡ್ಡ ಲಿಕ್ಕರ್ ಹಗರಣ ನಡೆದಿದ್ದು, ಸಿಎಂ ಎಂಕೆ ಸ್ಟಾಲಿನ್ ಕೂಡ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾದಿಯಲ್ಲಿ ಸಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಗಂಭೀರ ಆರೋಪ ಮಾಡಿದ್ದಾರೆ.
ತಮಿಳುನಾಡು ರಾಜ್ಯ ಮಾರ್ಕೆಟಿಂಗ್ ಕಾರ್ಪೊರೇಷನ್ ಲಿಮಿಟೆಡ್ (TASMAC) ಗೆ ಸಂಬಂಧಿಸಿದ ವಿವಿಧ ಕಚೇರಿಗಳು ಮತ್ತು ಉದ್ಯೋಗಿಗಳ ನಿವಾಸದ ಮೇಲೆ ಇತ್ತೀಚೆಗೆ ನಡೆದ ಜಾರಿ ನಿರ್ದೇಶನಾಲಯದ ದಾಳಿ ವೇಳೆ ಲಿಕ್ಕರ್ ಹಗರಣಕ್ಕೆ ಸಂಬಂಧಿಸಿದ ಪುರಾವೆಗಳು ದೊರೆತಿವೆ ಎಂಬ ಅಧಿಕಾರಿಗಳ ಹೇಳಿಕೆ ಬೆನ್ನಲ್ಲೇ ಇದೀಗ ತಮಿಳುನಾಡು ರಾಜ್ಯ ರಾಜಕೀಯದಲ್ಲಿ ಈ ಲಿಕ್ಕರ್ ಹಗರಣ ಬಹುದೊಡ್ಡ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಟಿವಿಕೆ ಪಕ್ಷದ ಮುಖ್ಯಸ್ಥ ನಟ ವಿಜಯ್ ಕೂಡ ತಮಿಳುನಾಡಿನಲ್ಲಿ ಸಾವಿರ ಕೋಟಿ ರೂಗೂ ಅಧಿಕ ಪ್ರಮಾಣದ ಲಿಕ್ಕರ್ ಹಗರಣ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಲಿಕ್ಕರ್ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವ್ಯಾಪಕ ಪ್ರತಿಭಟನೆ ನಡೆಸಿದೆ.
ಸೋಮವಾರ ಚೆನ್ನೈನ TASMAC ಪ್ರಧಾನ ಕಚೇರಿಯಲ್ಲಿ ಭಾರೀ ಭದ್ರತಾ ನಿಯೋಜನೆಯ ನಡುವೆಯೇ ಬಿಜೆಪಿ ನಾಯಕರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಮತ್ತು ಮಾಜಿ ರಾಜ್ಯಪಾಲೆ ತಮಿಳಿಸೈ ಸೌಂದರ್ ರಾಜನ್ ಸೇರಿದಂತೆ ಹಲವಾರು ವಿರೋಧ ಪಕ್ಷದ ನಾಯಕರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
ಅಣ್ಣಾಮಲೈ ಅವರನ್ನು ತಡೆದು ಮಾತುಕತೆಯ ನಂತರ, ಅವರನ್ನು ಬಂಧಿಸಿ ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ. ಅಂತೆಯೇ ಎಗ್ಮೋರ್‌ನಲ್ಲಿರುವ TASMAC ಕಚೇರಿಯಲ್ಲಿ ನಡೆದ ಘೇರಾವ್‌ನಲ್ಲಿ ಭಾಗವಹಿಸಲು ಮನೆಯಿಂದ ಹೊರಬಂದ ಸೌಂದರರಾಜನ್ ಅವರನ್ನು ಕೂಡ ಉಪ ಪೊಲೀಸ್ ಆಯುಕ್ತ ಸ್ನೇಹಪ್ರಿಯಾ ನೇತೃತ್ವದ ಪೊಲೀಸ್ ತಂಡವು ಹೊರಹೋಗದಂತೆ ತಡೆದಿದೆ ಎನ್ನಲಾಗಿದೆ.
ಅಣ್ಣಾಮಲೈ ಹೇಳಿದ್ದೇನು?
ಇನ್ನು ಈ ಲಿಕ್ಕರ್ ಹಗರಣದ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಟ್ವೀಟ್ ಮಾಡಿದ್ದು, 'ತಮಿಳುನಾಡು ಬಿಜೆಪಿ ಪರವಾಗಿ ನಾವು ಇಂದು ಚೆನ್ನೈನ TASMAC ಪ್ರಧಾನ ಕಚೇರಿಯಲ್ಲಿ DMK ಸರ್ಕಾರದ 1,000 ಕೋಟಿ ರೂಪಾಯಿಗಳ TASMAC ಹಗರಣದ ವಿರುದ್ಧ ಪ್ರತಿಭಟಿಸಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದೆವು. ಆದರೆ ಭಯದಿಂದ ನಡುಗುತ್ತಿರುವ DMK ಸರ್ಕಾರವು ನಮ್ಮ ಹಿರಿಯ ಬಿಜೆಪಿ ನಾಯಕಿ ಮತ್ತು ತೆಲಂಗಾಣದ ಮಾಜಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಅವರನ್ನು ಗೃಹಬಂಧನದಲ್ಲಿ ಇರಿಸಿದೆ" ಎಂದು ಪೋಸ್ಟ್ ಮಾಡಿದ್ದಾರೆ.
ಆರೋಪ ನಿರಾಕರಿಸಿದ DMK
ಇನ್ನು ಬಿಜೆಪಿ ಮತ್ತು ಟಿವಿಕೆ ಪಕ್ಷಗಳ ಲಿಕ್ಕರ್ ಹಗರಣ ಆರೋಪವನ್ನು ಡಿಎಂಕೆ ಸರ್ಕಾರ ನಿರಾಕರಿಸಿದೆ. ಈ ಕುರಿತು ಮಾತನಾಡಿರುವ ತಮಿಳುನಾಡು ಅಬಕಾರಿ ಸಚಿವ ಸೆಂಥಿಲ್ ಬಾಲಾಜಿ, 'TASMAC ಟೆಂಡರ್ ನಲ್ಲಿ ನಡೆದಿದೆ ಎನ್ನಲಾದ ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಆಧಾರವಿಲ್ಲ ಮತ್ತು ರಾಜ್ಯದಲ್ಲಿ ಇಂತಹ ದುಷ್ಕೃತ್ಯಗಳಿಗೆ ಅವಕಾಶವಿಲ್ಲ. ಶೋಧಗಳ ಹೆಸರಿನಲ್ಲಿ, ಇಡಿ ದಾಳಿಗಳನ್ನು ನಡೆಸಿದೆ. ಆದರೆ ಎಫ್‌ಐಆರ್ ದಾಖಲಾಗಿರುವ ವರ್ಷವನ್ನು ಉಲ್ಲೇಖಿಸಿಲ್ಲ. ಅವರು TASMAC ನೇಮಕಾತಿಯಲ್ಲಿ ತಪ್ಪುಗಳು ಸಂಭವಿಸಿವೆ ಎಂಬಂತೆ ದೃಶ್ಯವನ್ನು ಸೃಷ್ಟಿಸಿದ್ದಾರೆ" ಎಂದು ಹೇಳಿದರು.
ಅಂತೆಯೇ "ಕಳೆದ ನಾಲ್ಕು ವರ್ಷಗಳಿಂದ, ಬಾರ್ಟೆಂಡರ್ ನೇಮಕಾತಿ ಪ್ರಕ್ರಿಯೆಯು ಆನ್‌ಲೈನ್‌ನಲ್ಲಿದೆ. ಯಾವುದೇ ಆಧಾರವಿಲ್ಲದೆ, ಅವರು ನಮ್ಮ ಮೇಲೆ 1,000 ಕೋಟಿ ರೂಪಾಯಿಗಳ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. TASMAC ಟೆಂಡರ್‌ನಲ್ಲಿ ಅವ್ಯವಹಾರಗಳಿಗೆ ಯಾವುದೇ ಅವಕಾಶವಿಲ್ಲ" ಎಂದು ಅವರು ಹೇಳಿದರು.
ಏನಿದು TASMAC ಹಗರಣ?
ಮಾರ್ಚ್ 13 ರಂದು, ಕೇಂದ್ರ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯವು ತಮಿಳುನಾಡು ರಾಜ್ಯ ಮಾರ್ಕೆಟಿಂಗ್ ಕಾರ್ಪೊರೇಷನ್ ಲಿಮಿಟೆಡ್ (TASMAC) ಗೆ ಸಂಬಂಧಿಸಿದ ವಿವಿಧ ಅಪರಾಧಗಳಿಗಾಗಿ 2002 ರ PMLA ನಿಬಂಧನೆಗಳ ಅಡಿಯಲ್ಲಿ ತಮಿಳುನಾಡಿನ ಹಲವು ಜಿಲ್ಲೆಗಳಾದ್ಯಂತ ವಿವಿಧ ಆವರಣದಲ್ಲಿ ಹಲವಾರು ದಾಳಿ ಮಾಡಿ ಶೋಧ ಕಾರ್ಯಾಚರಣೆಗಳನ್ನು ನಡೆಸಿತು.
ಈ ದಾಳಿ ವೇಳೆ ಶೋಧ ಕಾರ್ಯಾಚರಣೆಯ ಸಮಯದಲ್ಲಿ, ವಿವಿಧ ಅಪರಾಧ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ದಾಖಲೆಗಳ ಅನ್ವಯ TASMAC ಟೆಂಡರ್ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ಕಂಡುಬಂದಿದೆ. ಟೆಂಡರ್ ಮ್ಯಾನಿಪ್ಯುಲೇಷನ್ ಮತ್ತು ಡಿಸ್ಟಿಲರಿ ಕಂಪನಿಗಳ ಮೂಲಕ 1,000 ಕೋಟಿ ರೂ. ಮೌಲ್ಯದ ಲೆಕ್ಕವಿಲ್ಲದ ನಗದು ವಹಿವಾಟು ಸೇರಿದಂತೆ TASMAC ಕಾರ್ಯಾಚರಣೆಗಳಲ್ಲಿ ಬಹು ಅಕ್ರಮಗಳು ಪತ್ತೆಯಾಗಿವೆ ಎಂದು ಗಂಭೀರ ಆರೋಪ ಮಾಡಿತ್ತು.
ಅಲ್ಲದೆ TASMAC ನಲ್ಲಿ ದೊಡ್ಡ ಪ್ರಮಾಣದ ಅಕ್ರಮಗಳು ನಡೆದಿರುವುದಕ್ಕೆ ದೃಢವಾದ ಪುರಾವೆಗಳು ತಮ್ಮ ಬಳಿ ಇವೆ. PMLA ಅಡಿಯಲ್ಲಿ ಅದರ ಉದ್ಯೋಗಿಗಳು, ಕಾರ್ಪೊರೇಟ್ ಸಂಸ್ಥೆಗಳು ಮತ್ತು ಡಿಸ್ಟಿಲರಿಗಳ ಮೇಲೆ ದಾಳಿ ನಡೆಸಲಾಗಿದ್ದು, ಟೆಂಡರ್ ಅಕ್ರಮಗಳು ಮತ್ತು 1,000 ಕೋಟಿ ರೂ.ಗಳ ಲೆಕ್ಕವಿಲ್ಲದ ನಗದು ವಹಿವಾಟುಗಳನ್ನು ಬಹಿರಂಗಪಡಿಸಲಾಗಿದೆ ಎಂದು ಆರೋಪಿಸಿತ್ತು.
Advertisement