'ಆಗ ಫ್ರಿಡ್ಜ್... ಈಗ ಡ್ರಮ್..': ಲವರ್ ಜೊತೆ ಸೇರಿ ಗಂಡನ ಕೊಲೆಗೈದ ಪತ್ನಿ.. ದೇಹ 15 ತುಂಡು, ಡ್ರಮ್ ನಲ್ಲಿ ಹಾಕಿ ಸಿಮೆಂಟ್ ಸೀಲ್; ಪ್ರಕರಣ ಬಯಲಾಗಿದ್ದೇ ರೋಚಕ!

ಐದು ವರ್ಷದ ಮಗಳ ಹುಟ್ಟುಹಬ್ಬ ಆಚರಿಸಲು ಮೀರತ್‌ಗೆ ಬಂದಿದ್ದ ನೌಕಾಧಿಕಾರಿ ಸೌರಭ್ ಕುಮಾರ್ ಎಂಬಾತನನ್ನು ಆತನ ಪತ್ನಿಯೇ ಪ್ರಿಯಕರನ ನೆರವಿನಿಂದ ಕೊಂದು ದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಡ್ರಮ್ ನಲ್ಲಿ ಹಾಕಿ ಸಿಮೆಂಟ್ ಸುರಿದು ಸೀಲ್ ಮಾಡಿದ್ದಾಳೆ.
Merchant Navy Officer Killed By Wife
ಮೃತ ಸೌರಬ್ ಮತ್ತು ಆರೋಪಿಗಳಾದ ಮುಸ್ಕಾನ್, ಸಾಹಿಲ್
Updated on

ಮೀರತ್: ದೆಹಲಿಯ ಶ್ರದ್ಧಾ ವಾಕರ್ ಕೊಲೆ ಪ್ರಕರಣವನ್ನು ನೆನಪಿಸುವ ಮತ್ತೊಂದು ಪ್ರಕರಣ ವರದಿಯಾಗಿದ್ದು, ಈ ಬಾರಿ ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ನೌಕಾಧಿಕಾರಿ ಗಂಡನ ಕೊಂದು ದೇಹವನ್ನು ತುಂಡರಿಸಿ ಡ್ರಮ್ ನಲ್ಲಿ ಹಾಕಿ ಸಿಮೆಂಟ್ ಸೀಲ್ ಮಾಡಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ.

ಹೌದು.. ಉತ್ತರ ಪ್ರದೇಶದ ಮೀರತ್ ನಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಐದು ವರ್ಷದ ಮಗಳ ಹುಟ್ಟುಹಬ್ಬ ಆಚರಿಸಲು ಮೀರತ್‌ಗೆ ಬಂದಿದ್ದ ನೌಕಾಧಿಕಾರಿ ಸೌರಭ್ ಕುಮಾರ್ ಎಂಬಾತನನ್ನು ಆತನ ಪತ್ನಿಯೇ ಪ್ರಿಯಕರನ ನೆರವಿನಿಂದ ಕೊಂದು ದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಡ್ರಮ್ ನಲ್ಲಿ ಹಾಕಿ ಸಿಮೆಂಟ್ ಸುರಿದು ಸೀಲ್ ಮಾಡಿದ್ದಾಳೆ. ಅಚ್ಚರಿ ಎಂದರೆ ಈ ವಿಚಾರವನ್ನು ಆಕೆಯ ತಾಯಿಯೇ ಬಹಿರಂಗ ಮಾಡಿದ್ದು, ಆ ಮೂಲಕ ಮಗಳ ಕುಕೃತ್ಯವನ್ನು ತಾಯಿಯೇ ಜಗಜ್ಜಾಹಿರು ಮಾಡಿದ್ದಾರೆ.

ಏನಿದು ಘಟನೆ?

ಲಂಡನ್‌ನಿಂದ ತನ್ನ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಐದು ವರ್ಷದ ಮಗಳು ಪಿಹುಳ ಹುಟ್ಟುಹಬ್ಬ ಆಚರಿಸಲು ಭಾರತೀಯ ನೌಕಾಧಿಕಾರಿ ಸೌರಭ್ ಕುಮಾರ್ ಮೀರತ್‌ಗೆ ಬಂದಿದ್ದ. ಆದರೆ ಅವನ ಪತ್ನಿ ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಆತನನ್ನು ಕೊಂದು ನಂತರ ಸೌರಭ್‌ನ ದೇಹವನ್ನು 15 ತುಂಡುಗಳಾಗಿ ಕತ್ತರಿಸಿ, ಪ್ಲಾಸ್ಟಿಕ್ ಡ್ರಮ್‌ನಲ್ಲಿ ಹಾಕಿ ಸಿಮೆಂಟ್ ತುಂಬಿ ಸೀಲ್ ಮಾಡಿದ್ದಾರೆ. ಕೊಲೆಗಾತಿ ಮುಸ್ಕಾನ್ ಳ ತಾಯಿ ಮೂಲಕ ಈ ಭೀಕರ ಕೊಲೆ ಪ್ರಕರಣ ಬಯಲಾಗಿದೆ.

Merchant Navy Officer Killed By Wife
ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಪಾಕ್ ಮಹಿಳೆ ಸೀಮಾ ಹೈದರ್- ಸಚಿನ್ ಮೀನಾ ದಂಪತಿಗೆ ಹೆಣ್ಣು ಮಗು ಜನನ

ಪ್ರೇಮವಿವಾಹ

ಅಂದಹಾಗೆ ಸೌರಭ್ ಕುಮಾರ್ ಮತ್ತು ಮುಸ್ಕಾನ್ ಒಂಬತ್ತು ವರ್ಷಗಳ ಹಿಂದೆ 2016 ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಸೌರಭ್ ತನ್ನ ಮೀರತ್‌ನ ಪಕ್ಕದ ಮನೆಯ ನಿವಾಲಿಯಾಗಿದ್ದ ಮುಸ್ಕಾನ್‌ಳನ್ನು ಪ್ರೀತಿಸಿ ಮದುವೆಯಾಗಿದ್ದ. ಮದುವೆಯ ನಂತರ ಮರ್ಚೆಂಟ್ ನೇವಿಯಲ್ಲಿ ಕೆಲಸ ಪಡೆದಿದ್ದ. ಆದರೆ ಒಂದು ವರ್ಷದ ಬಳಿಕ ಆ ಕೆಲಸವನ್ನು ತೊರೆದ ಸೌರಭ್, ಮೀರತ್‌ನ ದೆಹಲಿ ರಸ್ತೆಯ ಒಂದು ಪ್ಲೈವುಡ್ ಅಂಗಡಿಯಲ್ಲಿ ಮೂರು ವರ್ಷ ಕೆಲಸ ಮಾಡಿದ್ದ. ಆ ನಂತರ ಲಂಡನ್‌ಗೆ ತೆರಳಿ ಅಲ್ಲಿನ ಒಂದು ಮಾಲ್‌ನಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಸೌರಭ್ ಮತ್ತು ಮುಸ್ಕಾನ್ ಜೋಡಿಗೆ ಐದು ವರ್ಷದ ಪಿಹು ಎಂಬ ಮಗಳಿದ್ದಳು. ಮೀರತ್‌ನ ಇಂದಿರಾನಗರದಲ್ಲಿ ಓಂಪಾಲ್ ಎಂಬವರ ಮನೆಯಲ್ಲಿ ಕಳೆದ ಮೂರು ವರ್ಷಗಳಿಂದ ಈ ಜೋಡಿ ಬಾಡಿಗೆಗೆ ವಾಸಿಸುತ್ತಿದ್ದರು.

ಕೊಲೆಗೆ ಭೀಕರ ಪ್ಲಾನ್

ಪೊಲೀಸ್ ಮೂಲಗಳ ಪ್ರಕಾರ ಸೌರಭ್ ಕೊಲೆಗೆ ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಭರ್ಜರಿ ತಯಾರಿಯನ್ನೇ ನಡೆಸಿದ್ದರಂತೆ. ಮಾರ್ಚ್ 4 ರ ರಾತ್ರಿ, ಸೌರಭ್‌ಗೆ ಮಾದಕ ದ್ರವ್ಯ ಕುಡಿಸಿದ ಬಳಿಕ ಮುಸ್ಕಾನ್ ಮತ್ತು ಪ್ರಿಯಕರ ಸಾಹಿಲ್ ಶುಕ್ಲಾ ಆತನ ಎದೆಗೆ ಚಾಕುವಿನಿಂದ ಇರಿದು, ಗಂಟಲು ಸೀಳಿ ಕೊಲೆ ಮಾಡಿದ್ದಾರೆ. ಕೊಲೆಗೆ ಮುನ್ನ ಚಾಕುಗಳು, ಬ್ಲೇಡ್‌ಗಳು ಮತ್ತು ದೊಡ್ಡ ಪಾಲಿಥಿನ್ ಚೀಲಗಳನ್ನು ಖರೀದಿಸಿ ಯೋಜನೆ ಸಿದ್ಧಪಡಿಸಲಾಗಿತ್ತು. ಕೊಲೆಯಾದ ಬಳಿಕ ಶವವನ್ನು ಬಾತ್ ರೂಂ ಎಳೆದುಕೊಂಡು ಹೋಗಿ, ಇಬ್ಬರೂ ಸೇರಿ ದೇಹವನ್ನು 15 ತುಂಡುಗಳಾಗಿ ಕತ್ತರಿಸಿದ್ದಾರೆ. ಈ ಸಮಯದಲ್ಲಿ ಸ್ನಾನಗೃಹದಿಂದ ರಕ್ತ ಚರಂಡಿಗೆ ಹರಿಯುತ್ತಿತ್ತು. ಕೈಕಾಲುಗಳನ್ನು ಕತ್ತರಿಸಿ, ದೇಹದ ಭಾಗಗಳನ್ನು ಪಾಲಿಥಿನ್ ಚೀಲಗಳಲ್ಲಿ ಪ್ಯಾಕ್ ಮಾಡಲಾಗಿತ್ತು.

ದೇಹದ ತುಂಡುಗಳ ಡ್ರಮ್ ನಲ್ಲಿ ಹಾಕಿ ಸೀಲ್

ಕೊಲೆ ಬಳಿಕ ಸಾಹಿಲ್ ದೇಹವನ್ನು ಮುಚಿಡಲು ದೊಡ್ಡ ಡ್ರಮ್ ತಂದಿದ್ದ. ಅಲ್ಲದೆ ಒಂದು ಚೀಲ ಸಿಮೆಂಟ್, ಮಣ್ಣು ಮತ್ತು ಕಟ್ಟಡ ನಿರ್ಮಾಣಕ್ಕೆ ಬಳಸುವ ಡಸ್ಟ್ ಅನ್ನು ಶೇಖರಿಸಿಟ್ಟಿದ್ದ. ದೇಹದ ತುಂಡುಗಳನ್ನು ಡ್ರಮ್‌ನಲ್ಲಿ ತುಂಬಿಸಿ, ನೀರು ಸುರಿದು ಸಿಮೆಂಟ್ ಮತ್ತು ಡಸ್ಚ್ ಹಾಕಿ ಅದನ್ನು ಮುಚ್ಚಿದ್ದ. ಇದೇ ಡ್ರಮ್ ನಲ್ಲಿ ಸೌರಭ್ ದೇಹ ಕತ್ತರಿಸಲು ಬಳಸಲಾಗಿದ್ದ ಚಾಕು, ಕತ್ತಿಗಳನ್ನು ಕೂಡ ಹಾಕಿ ಸಿಮೆಂಟ್ ನಿಂದ ಸೀಲ್ ಮಾಡಲಾಗಿತ್ತು.

ಮಗಳ ಬಿಟ್ಟು ಪರಾರಿಯಾಗಿದ್ದ ಮುಸ್ಕಾನ್

ಮುಸ್ಕಾನ್ ನೆರೆಹೊರೆಯ ಜನರಿಗೆ ಸೌರಭ್ ಜೊತೆ ವಾಕ್ ಮಾಡಲು ಹೋಗುತ್ತಿರುವುದಾಗಿ ಹೇಳಿಕೊಂಡಿದ್ದಳು. ಸೌರಭ್ ಕೊಲೆಯ ನಂತರ ಮುಸ್ಕಾನ್ ತನ್ನ ಮನೆಗೆ ಬೀಗ ಹಾಕಿ ಐದು ವರ್ಷದ ಮಗಳು ಪಿಹುವನ್ನು ತನ್ನ ಹೆತ್ತವರ ಮನೆಯಲ್ಲಿ ಬಿಟ್ಟು, ಪ್ರಿಯಕರ ಸಾಹಿಲ್ ಜೊತೆ ಶಿಮ್ಲಾಕ್ಕೆ ಪರಾರಿಯಾಗಿದ್ದಳು. ಅಲ್ಲಿ ಒಂದಷ್ಟು ದಿನ ಪ್ರಿಯಕರನ ಜೊತೆ ಸಮಯ ಕಳೆದಿದ್ದಾಳೆ. ಇಬ್ಬರೂ ಅಲ್ಲಿನ ಹೋಟೆಲ್‌ನಲ್ಲಿ ಕೆಲವು ದಿನಗಳ ಕಾಲ ಮಜಾ ಮಾಡಿದ್ದಾರೆ. ಇದೇ ಹೊತ್ತಲ್ಲೇ ಮುಸ್ಕಾನ್ ಗೆ ಹಣದ ಅವಶ್ಯಕತೆ ಎದುರಾಗಿದೆ.

ಪ್ರಕರಣ ಬಯಲಾಗಿದ್ದೇ ರೋಚಕ

ಮುಸ್ಕಾನ್ ತನ್ನ ಪ್ರಿಯಕರ ಸಾಹಿಲ್ ಜೊತೆ ಸೌರಭ್ ಖಾತೆಯಿಂದ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದ್ದಾರೆ. ಸೌರಭ್ ಅವರ ಖಾತೆಯಲ್ಲಿ ಸುಮಾರು ಆರು ಲಕ್ಷ ರೂಪಾಯಿಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರೂ ಅದನ್ನು ತೆಗೆದುಹಾಕಲು ಪ್ರಯತ್ನಿಸಿದರು. ಆದರೆ ಅವರು ಯಶಸ್ವಿಯಾಗಲಿಲ್ಲ. ಇದಾದ ನಂತರ ಮುಸ್ಕಾನ್ ತನ್ನ ತಾಯಿಯನ್ನು ಸಂಪರ್ಕಿಸಿ ಹಣ ಕೇಳಿದ್ದಾಳೆ. ತಾಯಿ ಸೌರಭ್ ಬಗ್ಗೆ ಕೇಳಿದಾಗ, ಮುಸ್ಕಾನ್ ಅನುಮಾನಾಸ್ಪದ ಉತ್ತರ ನೀಡಿದ್ದಾಳೆ. ಈ ವೇಳೆ ಅವರ ತಾಯಿ ಗದರಿ ಕೇಳಿದಾಗ ಮುಸ್ಕಾನ್ ಕೊಲೆ ವಿಚಾರ ಬಾಯಿ ಬಿಟ್ಟಿದ್ದಾಳೆ. ಇದನ್ನು ಕೇಳಿದ ತಕ್ಷಣ ಮುಸ್ಕಾನ್ ತಾಯಿ ಗಾಬರಿಯಾಗಿದ್ದು ಅವರು ದಿಗ್ಭ್ರಮೆಗೊಂಡಿದ್ದಾರೆ. ಅಲ್ಲದೆ ಯಾವುದೇ ವಿಳಂಬವಿಲ್ಲದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮುಸ್ಕಾನ್ ಳನ್ನು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ನಡೆಸಿದಾಗ, ಆಕೆ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ.

ಪೊಲೀಸರು ಹೇಳಿದ್ದೇನು?

ಸೌರಭ್ ರಜಪೂತ್ ಹಲವು ದಿನಗಳಿಂದ ಕಾಣದಿದ್ದಾಗ ಅವರ ಕುಟುಂಬ ದೂರು ದಾಖಲಿಸಿದೆ ಎಂದು ಮೀರತ್ ನಗರ ಪೊಲೀಸ್ ಮುಖ್ಯಸ್ಥ ಆಯುಷ್ ವಿಕ್ರಮ್ ಸಿಂಗ್ ಹೇಳಿದ್ದಾರೆ. "ಅನುಮಾನದ ಮೇಲೆ, ನಾವು ಅವರ ಪತ್ನಿ ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಸಾಹಿಲ್ ಅವರನ್ನು ವಶಕ್ಕೆ ಪಡೆದಿದ್ದೇವೆ. ವಿಚಾರಣೆಯ ಸಮಯದಲ್ಲಿ, ಮಾರ್ಚ್ 4 ರಂದು ಅವರು ಸೌರಭ್ ಅವರನ್ನು ಚಾಕುವಿನಿಂದ ಕೊಂದಿದ್ದಾರೆ ಎಂದು ಅವರು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಆರೋಪಿಗಳು ಸೌರಭ್ ಶವವನ್ನು ಕತ್ತರಿಸಿ, ಡ್ರಮ್‌ನಲ್ಲಿ ಹಾಕಿ ಸಿಮೆಂಟ್‌ನಿಂದ ಮುಚ್ಚಿದ್ದಾರೆ. ಪೊಲೀಸರು ಶವವನ್ನು ವಶಪಡಿಸಿಕೊಂಡು ಶವಪರೀಕ್ಷೆಗೆ ಕಳುಹಿಸಿದ್ದಾರೆ. ನಾವು ಇಬ್ಬರನ್ನು ವಶಕ್ಕೆ ಪಡೆದಿದ್ದೇವೆ ಮತ್ತು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು" ಎಂದು ಹಿರಿಯ ಅಧಿಕಾರಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com