Nagpur violence: ಮಹಿಳಾ ಪೊಲೀಸ್ ಮೈ ಮುಟ್ಟಿ ವಿವಸ್ತ್ರಗೊಳಿಸಲು ಗಲಭೆಕೋರರ ಯತ್ನ; ಸ್ಥಳೀಯ ನಾಯಕನ ಬಂಧನ!
ನಾಗ್ಪುರ: ನಾಗ್ಪುರದಲ್ಲಿ ಮೊಘಲ್ ರಾಜ ಔರಂಗಜೇಬನ ಸಮಾಧಿ ವಿಷಯವಾಗಿ ಭುಗಿಲೆದ್ದ ಹಿಂಸಾಚಾರದ ಸಂದರ್ಭದಲ್ಲಿ ಗಲಭೆಕೋರರ ಗುಂಪೊಂದು ಮಹಿಳಾ ಕಾನ್‌ಸ್ಟೆಬಲ್ ಒಬ್ಬರನ್ನು ಅನುಚಿತವಾಗಿ ಮುಟ್ಟಿ, ಅವರನ್ನು ವಿವಸ್ತ್ರಗೊಳಿಸಲು ಪ್ರಯತ್ನಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಹಿಂಸಾಚಾರದ ಸಮಯದಲ್ಲಿ ಜನಸಮೂಹ ಪೊಲೀಸರ ಮೇಲೆ ಪೆಟ್ರೋಲ್ ಬಾಂಬ್‌ಗಳನ್ನು ಎಸೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪೊಲೀಸರು ಇದುವರೆಗೆ 51 ಗಲಭೆಕೋರರನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನ ಒಟ್ಟು 57 ವಿಭಾಗಗಳಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಅವರು ಹೇಳಿದರು.
ಸೋಮವಾರ (ಮಾ.17) ಸಂಜೆ 7.30 ರ ಸುಮಾರಿಗೆ ಮಧ್ಯ ನಾಗ್ಪುರದ ಮಹಲ್ ಪ್ರದೇಶದ ಚಿಟ್ನಿಸ್ ಪಾರ್ಕ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ಔರಂಗಜೇಬನ ಸಮಾಧಿಯನ್ನು ತೆಗೆದುಹಾಕಲು ಬಲಪಂಥೀಯ ಸಂಘಟನೆಯೊಂದು ನಡೆಸಿದ ಆಂದೋಲನದ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಪವಿತ್ರ ಗ್ರಂಥವನ್ನು ಸುಟ್ಟುಹಾಕಲಾಗಿದೆ ಎಂಬ ವದಂತಿಗಳಿಂದಾಗಿ ಈ ಹಿಂಸಾಚಾರ ಭುಗಿಲೆದ್ದಿತ್ತು. ಈ ವದಂತಿಗಳ ಹಿನ್ನೆಲೆಯಲ್ಲಿ ಹಿಂಸಾಚಾರ ನಡೆಸಿದ ಗುಂಪೊಂದು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿತ್ತು.
"ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನಾಗ್ಪುರದಲ್ಲಿ ಒಟ್ಟು 5 ಎಫ್‌ಐಆರ್‌ಗಳು ದಾಖಲಾಗಿವೆ. ಗಣೇಶಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳಲ್ಲಿ ಒಂದರಲ್ಲಿ, ನಗರದ ಭಾಲ್ದಾರ್ಪುರ ಚೌಕ್‌ನಲ್ಲಿ ಜನರ ಗುಂಪೊಂದು ಜಮಾಯಿಸಿ ಪೊಲೀಸ್ ಸಿಬ್ಬಂದಿಯ ಮೇಲೆ ದಾಳಿ ಮಾಡಲು ಪ್ರಾರಂಭಿಸಿತು ಎಂದು ಹೇಳಲಾಗಿದೆ. ಗುಂಪು ಪೊಲೀಸ್ ಸಿಬ್ಬಂದಿಯ ಮೇಲೆ ಪೆಟ್ರೋಲ್ ಬಾಂಬ್‌ಗಳು ಮತ್ತು ಕಲ್ಲುಗಳನ್ನು ಸಹ ಎಸೆದಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಕತ್ತಲಿನ ಲಾಭ ಪಡೆದು, ಗುಂಪು ಗಲಭೆ ನಿಯಂತ್ರಣ ಪೊಲೀಸ್ (ಆರ್‌ಸಿಪಿ) ಮಹಿಳಾ ಕಾನ್‌ಸ್ಟೆಬಲ್ ನ್ನು ಅನುಚಿತವಾಗಿ ಸ್ಪರ್ಶಿಸಿ ಅವರ ಸಮವಸ್ತ್ರ, ಬಟ್ಟೆ ಬಿಚ್ಚಲು ಪ್ರಯತ್ನಿಸಿತು. ಅವರು ನಿಂದನೀಯ ಭಾಷೆಯನ್ನು ಬಳಸಿದರು ಮತ್ತು ಇತರ ಮಹಿಳಾ ಪೊಲೀಸ್ ಸಿಬ್ಬಂದಿಯ ವಿರುದ್ಧ ಅಸಭ್ಯ ಶಬ್ದಗಳನ್ನು ಬಳಸಿ ನಿಂದಿಸಿದ್ದಾರೆ. ಗಲಭೆಕೋರರು ಅವರ ಕಡೆಗೆ ಆಕ್ಷೇಪಾರ್ಹ ಸನ್ನೆಗಳನ್ನು ಮಾಡಿದರು ಮತ್ತು ಅವರ ಮೇಲೆ ದಾಳಿ ಮಾಡಿದರು" ಎಂದು ಅಧಿಕಾರಿಗಳು ಹೇಳಿದ್ದಾರೆ. ಹಿಂಸಾಚಾರದ ನಂತರ ನಗರದ ಅನೇಕ ಸೂಕ್ಷ್ಮ ಪ್ರದೇಶಗಳಲ್ಲಿ ಕರ್ಫ್ಯೂ ಜಾರಿಯಲ್ಲಿದೆ.
ಸ್ಥಳೀಯ ನಾಯಕನ ಬಂಧನ
ನಾಗ್ಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರನ್ನು ಮಾರ್ಚ್ 21 ರವರೆಗೆ ಕಸ್ಟಡಿಗೆ ನೀಡಲಾಗಿದೆ.
ಬಂಧಿತ ವ್ಯಕ್ತಿಯನ್ನು ಅಲ್ಪಸಂಖ್ಯಾತ ಡೆಮಾಕ್ರಟಿಕ್ ಪಕ್ಷದ (ಎಂಡಿಪಿ) ಸ್ಥಳೀಯ ನಾಯಕ ಫಾಹಿಮ್ ಶಮೀಮ್ ಖಾನ್ ಎಂದು ಗುರುತಿಸಲಾಗಿದೆ ಎಂದು ಇಂಡಿಯಾಟುಡೇ ವರದಿ ಮಾಡಿದೆ.
ಬಂಧನಕ್ಕೂ ಮುನ್ನ, ಪೊಲೀಸರು ಖಾನ್ ಅವರ ಛಾಯಾಚಿತ್ರವನ್ನು ಬಿಡುಗಡೆ ಮಾಡಿದ್ದರು ಮತ್ತು ಹಿಂಸಾಚಾರ ಭುಗಿಲೆದ್ದ ಸ್ವಲ್ಪ ಸಮಯದ ಮೊದಲು ಅವರು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಹೇಳಲಾಗುವ ವೀಡಿಯೊವೊಂದು ಹೊರಬಂದಿದೆ.
ಸೋಮವಾರ ರಾತ್ರಿ ಹಿಂಸಾಚಾರದಿಂದ ನಲುಗಿದ ನಾಗ್ಪುರದಲ್ಲಿ ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ ಆದರೆ ನಗರದ ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ಕರ್ಫ್ಯೂ ಮುಂದುವರೆದಿದೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ. ಮಧ್ಯಾಹ್ನದ ನಂತರ ಪರಿಸ್ಥಿತಿಯನ್ನು ಪರಿಶೀಲಿಸಲಾಗುವುದು ಎಂದು ಪೊಲೀಸ್ ಆಯುಕ್ತ ರವೀಂದರ್ ಕುಮಾರ್ ಸಿಂಘಾಲ್ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ