
ಮುಂಬೈ: ಮರಾಠಾ ದೊರೆ ಛತ್ರಪತಿ ಸಂಭಾಜಿ ಮಹಾರಾಜರ ಜೀವನಾಧರಿತ ಚಿತ್ರ ಛಾವಾ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿರುವ ಮೋಘಲ್ ದೊರೆ ಔರಂಗಜೇಬ್ ಸಮಾಧಿ ತೆರವಿಗೆ ಹಿಂದೂಪರ ಸಂಘಟನೆಗಳ ಒತ್ತಡ ಹೆಚ್ಚಾದ ಬೆನ್ನಲ್ಲೇ ಸಮಾಧಿ ಕಟ್ಟಡಕ್ಕೆ ಸೂಕ್ತ ಭದ್ರತೆ ಒದಗಿಸಲಾಗಿದ್ದು, ಇದೀಗ ಸಮಾಧಿ ಸುತ್ತ ಅಧಿಕಾರಿಗಳು ತಗಡಿನ ಶೀಟ್ ಗಳನ್ನು ಅಳವಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಹೌದು..ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿಯನ್ನು ಕೆಡವಬೇಕೆಂದು ಒತ್ತಾಯಿಸಿ ಹಿಂದೂಪರ ಸಂಘಟನೆಗಳು ಆರಂಭಿಸಿರುವ ಅಭಿಯಾನಕ್ಕೆ ಬೆಂಬಲ ಹೆಚ್ಚುತ್ತಿದೆ.
ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ನೇತೃತ್ವದ ಬಲಪಂಥೀಯ ಸಂಘಟನೆಗಳು ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿಯನ್ನು ಕೆಡವಬೇಕೆಂದು ಒತ್ತಾಯಿಸಿ 'ಬಾಬರಿ ಮಸೀದಿ ಮಾದರಿಯ' ಆಂದೋಲನವನ್ನು ಪ್ರಾರಂಭಿಸಿವೆ.
ಇದಕ್ಕೆ ಇಂಬು ನೀಡುವಂತೆ ಆಡಳಿತರೂಢ ಬಿಜೆಪಿ ನಾಯಕರು ಮತ್ತು ಶಿವಸೇನೆ ನಾಯಕ ಹಾಗೂ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸೇರಿದಂತೆ ಹಲವಾರು ನಾಯಕರು ಈ ಬೇಡಿಕೆಯನ್ನು ಬೆಂಬಲಿಸಿದ್ದಾರೆ.
ಹಿಂದೂಪರ ಸಂಘಟನೆಗಳ ಎಚ್ಚರಿಕೆ
ಈಗಾಗಲೇ ಹಿಂದೂಪರ ಸಂಘಟನೆಗಳು ಔರಂಗಜೇಬ್ ಸಮಾಧಿಯನ್ನು ಸರ್ಕಾರ ಕೆಡವಬೇಕು.. ಇಲ್ಲವಾದಲ್ಲಿ ಆ ಕೆಲಸವನ್ನು ಕರಸೇವಕರು ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದೆ. ಅಲ್ಲದೆ ಈ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಗಡುವು ಕೂಡ ನೀಡಿದ್ದಾರೆ. ಹಿಂದೂ ಜನಜಾಗೃತಿ ಸಮಿತಿ (HJS) ಸಮಾಧಿಯ ನಿರ್ವಹಣೆಗೆ ಹಣಕಾಸಿನ ನೆರವು ನಿಲ್ಲಿಸುವಂತೆ ಸರ್ಕಾರವನ್ನು ಆಗ್ರಹಿಸಿದೆ.
ಸಮಾಧಿಗೆ ಬಿಗಿ ಭದ್ರತೆ, ತಗಡಿನ ಶೀಟ್ ಅಳವಡಿಕೆ
ಏತನ್ಮಧ್ಯೆ, ಸಮಾಧಿ ಸಂಕೀರ್ಣದಲ್ಲಿ ರಾಜ್ಯ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ ಮತ್ತು ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಮಹಾರಾಷ್ಟ್ರದ ಸಂಭಾಜಿನಗರ ಜಿಲ್ಲೆಯಲ್ಲಿರುವ ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿಯನ್ನು ತೆಗೆದುಹಾಕಬೇಕೆಂಬ ಬೇಡಿಕೆಗಳ ನಡುವೆ, ಭಾರತೀಯ ಪುರಾತತ್ವ ಸಮೀಕ್ಷೆ (ASI) 18 ನೇ ಶತಮಾನದ ರಚನೆಯ ಎರಡು ಬದಿಗಳಲ್ಲಿ ಟಿನ್ ಶೀಟ್‌ಗಳನ್ನು ಅಳವಡಿಸಿದೆ.
ಎರಡು ದಿನಗಳ ಹಿಂದೆ ಜಿಲ್ಲಾಧಿಕಾರಿ ದಿಲೀಪ್ ಸ್ವಾಮಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ವಿನಯ್‌ಕುಮಾರ್ ರಾಥೋಡ್ ಅವರು ASI ಅಧಿಕಾರಿಗಳೊಂದಿಗೆ ಖುಲ್ತಾಬಾದ್‌ನಲ್ಲಿರುವ ಸಮಾಧಿಗೆ ಭೇಟಿ ನೀಡಿದಾಗ ಜಿಲ್ಲಾಡಳಿತವು ಈ ನಿರ್ಧಾರವನ್ನು ತೆಗೆದುಕೊಂಡಿತು ಎಂದು ಹೇಳಲಾಗಿದೆ.
ಬುಧವಾರ ರಾತ್ರಿ ವಿವಾದಿತ ಕಟ್ಟಡದ ಎರಡು ಬದಿಗಳಲ್ಲಿ ಟಿನ್ ಶೀಟ್‌ಗಳು ಮತ್ತು ತಂತಿ ಬೇಲಿಯನ್ನು ಹಾಕಲಾಗಿದೆ. ಸಮಾಧಿಯ ಸುತ್ತಲೂ ವೃತ್ತಾಕಾರದ ಬೇಲಿಯನ್ನು ಸಹ ಅಳವಡಿಸಲಾಗುವುದು ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಿಲ್ಲಾಡಳಿತದ ಸಮರ್ಥನೆ
ಇನ್ನು ತಗಡಿನ ಶೀಟ್ ಗಳನ್ನು ಅಳವಡಿಸುವ ಕಾರ್ಯವನ್ನು ಜಿಲ್ಲಾಡಳಿತ ಸಮರ್ಥನೆ ಮಾಡಿಕೊಂಡಿದೆ. "ಸಮಾಧಿಯ ಎರಡು ಬದಿಗಳನ್ನು ಆವರಿಸಿರುವ ಹಸಿರು ಬಲೆ ಕೆಟ್ಟ ಸ್ಥಿತಿಯಲ್ಲಿತ್ತು ಮತ್ತು ಹತ್ತಿರದ ಖ್ವಾಜಾ ಸೈಯದ್ ಜೈನುದ್ದೀನ್ ಚಿಶ್ತಿ ಸಮಾಧಿಗೆ ಭೇಟಿ ನೀಡುವವರಿಗೆ ರಚನೆಯು ಗೋಚರಿಸುತ್ತಿತ್ತು. ಆದ್ದರಿಂದ ನಾವು ಟಿನ್ ಶೀಟ್‌ಗಳನ್ನು ಅಳವಡಿಸಿದ್ದೇವೆ" ಎಂದು ಹೇಳಿದೆ.
ನಾಗ್ಪುರದಲ್ಲಿ ಹಿಂಸಾಚಾರ
ಔರಂಗಜೇಬನ ಸಮಾಧಿಯನ್ನು ತೆಗೆದುಹಾಕುವಂತೆ ಕೋರಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ನಡೆಸಿದ ಪ್ರತಿಭಟನೆಯು ಸೋಮವಾರ ನಾಗ್ಪುರದಲ್ಲಿ ಹಿಂಸಾಚಾರಕ್ಕೆ ಕಾರಣವಾಗಿತ್ತು. ಔರಂಗಜೇಬನ ಆದೇಶದ ಮೇರೆಗೆ ಕ್ರೂರವಾಗಿ ಗಲ್ಲಿಗೇರಿಸಲ್ಪಟ್ಟ ಮರಾಠಾ ರಾಜ್ಯದ ಎರಡನೇ ದೊರೆ ಛತ್ರಪತಿ ಸಂಭಾಜಿ ಮಹಾರಾಜರ ಜೀವನದ ಕುರಿತಾದ ಹಿಂದಿ ಭಾಷೆಯ ಚಲನಚಿತ್ರ ಛಾವಾ ಯಶಸ್ಸಿನ ನಂತರ 17 ನೇ ಶತಮಾನದ ಮೊಘಲ್ ಚಕ್ರವರ್ತಿ ಔರಂಗಜೇಬ್ ಸಮಾಧಿ ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ.
ಅಂದಹಾಗೆ ಔರಂಗಜೇಬನ ಸಮಾಧಿ ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದ ಖುಲ್ದಾಬಾದ್‌ನಲ್ಲಿದೆ. ಇದನ್ನು ಹಿಂದೆ ಔರಂಗಾಬಾದ್ ಎಂದು ಕರೆಯಲಾಗುತ್ತಿತ್ತು. ಆರನೇ ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿ (ನವೆಂಬರ್ 3, 1618 - ಮಾರ್ಚ್ 3, 1707), ದರ್ಗಾ-ಸಂಕೀರ್ಣದಲ್ಲಿ ಗುರುತಿಸಲಾಗದ ಸಮಾಧಿಯಾಗಿದ್ದು - ಮತ್ತು ಇದು ಭಾರತೀಯ ಪುರಾತತ್ವ ಸಮೀಕ್ಷೆ (ASI) ನಿಯಂತ್ರಣದಲ್ಲಿದೆ.
Advertisement