
ಗರಿಯಾಬಂದ್: ಛತ್ತೀಸಗಢದ ಗರಿಯಾಬಂದ್ ಜಿಲ್ಲೆಯ ಮಾವೋವಾದಿಗಳ ಅಡಗುತಾಣದಿಂದ ಭದ್ರತಾ ಪಡೆಗಳು 8 ಲಕ್ಷ ರೂ. ನಗದು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಮೈನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪಂಡ್ರಿಪಾನಿ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ಗುರುವಾರ ಈ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗರಿಯಾಬಂದ್ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ರಾಖೇಚಾ ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ನಕ್ಸಲರ ಶಿಬಿರ ಇರುವ ಬಗ್ಗೆ ಲಭ್ಯವಾದ ಮಾಹಿತಿ ಆಧಾರದ ಮೇಲೆ ಪ್ರಾರಂಭಿಸಲಾದ ಕಾರ್ಯಾಚರಣೆಯಲ್ಲಿ ವಿಶೇಷ ಕಾರ್ಯಪಡೆ (STF), ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಹಾಗೂ ಅದರ ಗಣ್ಯ ಘಟಕವಾದ CoBRA (ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್) ಮತ್ತು ಜಿಲ್ಲಾ ಪಡೆಗೆ ಸೇರಿದ ಸಿಬ್ಬಂದಿ ಪಾಲ್ಗೊಂಡಿದ್ದರು ಎಂದು ಹೇಳಿದರು.
'ವಶಪಡಿಸಿಕೊಂಡ ವಸ್ತುಗಳಲ್ಲಿ 8 ಲಕ್ಷ ರೂ. ನಗದು, 13 ಜೆಲೆಟಿನ್ ಸ್ಟಿಕ್‌ಗಳು, ಮಾವೋವಾದಿ ಬ್ಯಾನರ್‌ಗಳು, ಡೈರಿ ಮತ್ತು ಸಾಹಿತ್ಯ ಸೇರಿವೆ. ಇವುಗಳನ್ನು ಬಿಳಿ ಚೀಲದಲ್ಲಿ ಪ್ಯಾಕ್ ಮಾಡಿ ಮರದ ಕೆಳಗೆ ನೆಲದಲ್ಲಿ ಅಡಗಿಸಿ ಇಡಲಾಗಿತ್ತು. ನಕ್ಸಲರು ಸ್ಥಳೀಯ ಗ್ರಾಮಸ್ಥರು ಮತ್ತು ಉದ್ಯಮಿಗಳಿಂದ ಹಣವನ್ನು ಸುಲಿಗೆ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ' ಎಂದು ಎಸ್ಪಿ ಮಾಹಿತಿ ನೀಡಿದರು.
Advertisement