
ಮುಂಬೈ: ಕಾಮಿಡಿ ಶೋ ವೇಳೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಸ್ಟ್ಯಾಂಡ್ ಅಪ್ ಕಾಮಿಡಿಯಿನ್ ಕುನಾಲ್ ಕಾಮ್ರಾ ವಿರುದ್ಧ ಮುಂಬೈ ಪೊಲೀಸರು ಸೋಮವಾರ ಎಫ್ ಐಆರ್ ದಾಖಲಿಸಿದ್ದಾರೆ.
ಕುನಾಲ್ ಕಾಮ್ರಾ 'ಗದ್ದರ್' ಪ್ರದರ್ಶನ ಚಿತ್ರೀಕರಿಸಿದ ಸ್ಟುಡಿಯೋ ಇರುವ ಮುಂಬೈನ ಖಾರ್ ಪ್ರದೇಶದ ಹೋಟೆಲ್ ನ್ನು ಧ್ವಂಸ ಗೊಳಿಸಿದ ಹಿನ್ನೆಲೆಯಲ್ಲಿ ಸುಮಾರು 40 ಶಿವಸೇನೆ ಕಾರ್ಯಕರ್ತರ ವಿರುದ್ಧವೂ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಹ್ಯಾಬಿಟಾಟ್ ಸ್ಟುಡಿಯೋ ಇರುವ ಯೂನಿಕಾಂಟಿನೆಂಟಲ್ ಹೋಟೆಲ್ ಹೊರಗೆ ಭಾನುವಾರ ರಾತ್ರಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದ ಶಿವಸೇನೆ ಕಾರ್ಯಕರ್ತರು , ಸ್ಟುಡಿಯೋ ಮತ್ತು ಹೋಟೆಲ್ ಆವರಣವನ್ನು ಧ್ವಂಸ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶೇಷವೆಂದರೆ ಕಾಮ್ರಾ ಅವರ ಕಾರ್ಯಕ್ರಮ ನಡೆದ ಹ್ಯಾಬಿಟಾಟ್ ಸ್ಟುಡಿಯೋದಲ್ಲಿ ವಿವಾದಾತ್ಮಕ 'ಇಂಡಿಯಾಸ್ ಗಾಟ್ ಲ್ಯಾಟೆಂಟ್' ಶೋ ಕೂಡಾ ಚಿತ್ರೀಕರಿಸಲಾಗಿತ್ತು.
ಶಿಂಧೆ ವಿರುದ್ಧ ಕಾಮ್ರಾ ಆಕ್ಷೇಪಾರ್ಹಕಾರಿ ಪದಗಳನ್ನು ಬಳಸಿದ್ದಾರೆಂದು ತೋರಿಸುವ ವೀಡಿಯೊ ವೈರಲ್ ಆದ ನಂತರ, ಶಿವಸೇನಾ ಶಾಸಕ ಮುರ್ಜಿ ಪಟೇಲ್ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.
ದೂರಿನ ಆಧಾರದ ಮೇಲೆ ಮುಂಬೈನ ಎಂಐಡಿಸಿ ಪೊಲೀಸರು ಸೋಮವಾರ ಮುಂಜಾನೆ ಕಮ್ರಾ ವಿರುದ್ಧ 353(1)(ಬಿ) (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಮತ್ತು 356(2) (ಮಾನನಷ್ಟ) ಸೇರಿದಂತೆ ವಿವಿಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನಿಬಂಧನೆಗಳ ಅಡಿಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುಮಾರು 2 ನಿಮಿಷಗಳ ವೀಡಿಯೊದಲ್ಲಿ, ಕಾಮ್ರಾ ಆಡಳಿತಾರೂಢ ಎನ್‌ಸಿಪಿ ಮತ್ತು ಶಿವಸೇನೆಯನ್ನು ಅಪಹಾಸ್ಯ ಮಾಡಿದ್ದು, ತನಿಖೆ ನಡೆಯುತ್ತಿದೆ ಎಂದು ಎಂಐಡಿಸಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ,
Advertisement