
ಮುಂಬೈ: ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಅವರು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರನ್ನು 'ದೇಶದ್ರೋಹಿ' ಎಂದು ಕರೆದಿರುವುದು ವಿವಾದಕ್ಕೆ ಕಾರಣವಾಗಿದ್ದು, ಇದು ವಾಕ್ ಸ್ವಾತಂತ್ರ್ಯದ 'ಅಜಾಗರೂಕ' ದುರುಪಯೋಗ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೋಮವಾರ ಹೇಳಿದ್ದಾರೆ.
'ನೀವು ಇತರರ ಸ್ವಾತಂತ್ರ್ಯದ ಮೇಲೆ ದಾಳಿ ಮಾಡಿದಾಗ, ನಿಮ್ಮ ಸ್ವಾತಂತ್ರ್ಯವನ್ನು ನಿರ್ಬಂಧಿಸಲಾಗುತ್ತದೆ. ಪ್ರಚಾರ ಪಡೆಯಲು ಸುಪಾರಿ (ಒಪ್ಪಂದ) ತೆಗೆದುಕೊಂಡು ಗೊಂದಲ ಸೃಷ್ಟಿಸಲು, ಸಾಂವಿಧಾನಿಕ ಹುದ್ದೆಗಳಲ್ಲಿರುವವರನ್ನು ಅವಮಾನಿಸಿದರೆ, ಅದನ್ನು ಸಹಿಸಲಾಗುವುದಿಲ್ಲ. ಸ್ಟ್ಯಾಂಡ್‌ಅಪ್ ಹಾಸ್ಯ ಮತ್ತು ವಿಡಂಬನೆಯನ್ನು ಯಾರೂ ವಿರೋಧಿಸುವುದಿಲ್ಲ. ಆದರೆ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಅಜಾಗರೂಕತೆಯಿಂದ ವರ್ತಿಸಿದರೆ, ಅದನ್ನು ಸಹಿಸಲಾಗುವುದಿಲ್ಲ. ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದರು.
ಸದನದಲ್ಲಿ ಈ ವಿಷಯ ಪ್ರಸ್ತಾಪವಾದ ನಂತರ ಮಾತನಾಡಿದ ಫಡ್ನವೀಸ್, ಕಾಮ್ರಾ ಅವರು ಈ ಹಿಂದೆಯೂ ಪ್ರಧಾನ ಮಂತ್ರಿ, ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ನ್ಯಾಯಾಂಗದ ಬಗ್ಗೆ ಕೀಳು ಮಟ್ಟದ ಟೀಕೆಗಳನ್ನು ಮಾಡಿರುವ ಇತಿಹಾಸವನ್ನು ಹೊಂದಿದ್ದಾರೆ. ಪ್ರಚಾರದ ಗೀಳಿಗಾಗಿ ವಿವಾದ ಸೃಷ್ಟಿಸುವುದು ಅವರ ಕಾರ್ಯವೈಖರಿಯಾಗಿದೆ' ಎಂದು ದೂರಿದರು.
ಕಾಮ್ರಾ ಈಗ ಉಪಮುಖ್ಯಮಂತ್ರಿ ಮತ್ತು ಶಿವಸೇನಾ ನಾಯಕ ಶಿಂಧೆ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. 2024ರ ವಿಧಾನಸಭಾ ಚುನಾವಣೆ ಮೂಲಕ ಮಹಾರಾಷ್ಟ್ರದ ಜನರು 'ಖುದ್ದರ್' (ಸ್ವಾಭಿಮಾನಿ) ಯಾರು ಮತ್ತು 'ಗದ್ದರ್' (ದೇಶದ್ರೋಹಿ) ಯಾರು ಎಂಬುದನ್ನು ತೋರಿಸಿದ್ದಾರೆ. ಕಾಮ್ರಾ ಮಹಾರಾಷ್ಟ್ರದ ಜನರಿಗಿಂತ ದೊಡ್ಡವರೇ? ಎಂದು ಪ್ರಶ್ನಿಸಿದ್ದಾರೆ.
ಶಿವಸೇನಾ ಸಂಸ್ಥಾಪಕ ಬಾಳಾ ಠಾಕ್ರೆ ಅವರ ಸಿದ್ಧಾಂತದ ನಿಜವಾದ ಉತ್ತರಾಧಿಕಾರಿ ಶಿಂಧೆ ಎಂದು ಮಹಾರಾಷ್ಟ್ರದ ಜನರು ತೋರಿಸಿದ್ದಾರೆ. ಜನರ ದೃಷ್ಟಿಯಲ್ಲಿ ಶಿಂಧೆಯನ್ನು ಕೀಳಾಗಿ ಕಾಣುವುದು ಕಾಮ್ರಾ ಉದ್ದೇಶವಾಗಿತ್ತು. ವಿರೋಧ ಪಕ್ಷ ಇಂತಹ ಹೇಳಿಕೆಗಳನ್ನು ಬೆಂಬಲಿಸುತ್ತಿದೆ ಮತ್ತು ಕಾಮ್ರಾ ವಿರೋಧ ಪಕ್ಷದೊಂದಿಗೆ ಕೈಜೋಡಿಸುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ. ರಾಹುಲ್ ಗಾಂಧಿ ಅವರ ಬಳಿ ಇರುವ ಕೆಂಪು ಬಣ್ಣದ ಸಂವಿಧಾನ ಪುಸ್ತಕದ ಪ್ರತಿಯನ್ನು ಹಿಡಿದು ಕಾಮ್ರಾ ಕೂಡ ತಮ್ಮ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ' ಎಂದು ಫಡ್ನವೀಸ್ ಹೇಳಿದರು.
ಏಕನಾಥ್ ಶಿಂಧೆ ವಿರುದ್ಧದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಕಾರ್ಯಕರ್ತರು ಖಾರ್ ಪ್ರದೇಶದ ಕಾಂಟಿನೆಂಟಲ್ ಹೋಟೆಲ್‌ನಲ್ಲಿರುವ ಹ್ಯಾಬಿಟಾಟ್ ಕಾಮಿಡಿ ಕ್ಲಬ್ ಅನ್ನು ಧ್ವಂಸಗೊಳಿಸಿದ್ದಾರೆ. ಸ್ಟ್ಯಾಂಡ್‌ಅಪ್ ಕಾಮಿಡಿಯನ್ ವಿರುದ್ಧ ಪ್ರಕರಣವನ್ನೂ ದಾಖಲಿಸಿದೆ.
ಇತ್ತ ಹೋಟೆಲ್ ಮತ್ತು ಸ್ಟುಡಿಯೋ ಅನ್ನು ಧ್ವಂಸಗೊಳಿಸಿದ ಆರೋಪದ ಯುವ ಸೇನಾ ಕಾರ್ಯಕರ್ತ ರಾಹುಲ್ ಕನಾಲ್ ಮತ್ತು ಇತರ 11 ಜನರನ್ನು ಸೋಮವಾರ ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಶಿಂಧೆ ಅವರನ್ನು 'ಅವಮಾನಿಸಿದ್ದಕ್ಕಾಗಿ' ಹಾಸ್ಯನಟ ಕ್ಷಮೆಯಾಚಿಸಬೇಕೆಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇಂದು ಮುಂಜಾನೆ ಒತ್ತಾಯಿಸಿದ್ದರು.
'ನೀವು ಇತರರ ಸ್ವಾತಂತ್ರ್ಯದ ಮೇಲೆ ದಾಳಿ ಮಾಡಿದಾಗ, ನಿಮ್ಮ ಸ್ವಾತಂತ್ರ್ಯವನ್ನು ನಿರ್ಬಂಧಿಸಲಾಗುತ್ತದೆ ಎಂದು ಸಂವಿಧಾನ ಹೇಳುತ್ತದೆ. ಅವರು (ಕಾಮ್ರಾ) ಯಾರ ಸ್ವಾತಂತ್ರ್ಯವನ್ನೂ ಅತಿಕ್ರಮಿಸಲು ಸಾಧ್ಯವಿಲ್ಲ. ಆದ್ದರಿಂದ, ನಾವು ಅವರಿಂದ ಕ್ಷಮೆಯಾಚಿಸಬೇಕೆಂದು ಒತ್ತಾಯಿಸುತ್ತೇವೆ. ಕುನಾಲ್ ಕಾಮ್ರಾ ಅವರಿಗೆ ಹಾಸ್ಯ ಮಾಡುವ ಸಂಪೂರ್ಣ ಹಕ್ಕು ಮತ್ತು ಸ್ವಾತಂತ್ರ್ಯವಿದೆ. ಆದರೆ, ಅವರು ಅದನ್ನು ಮಿತಿ ಮತ್ತು ಸಾಂವಿಧಾನಿಕ ಚೌಕಟ್ಟಿನೊಳಗೆ ಮಾಡಬೇಕು. ಮತ್ತೆ ಅಧಿಕಾರಕ್ಕೆ ಬರಲು ಜನರೇ ಆರಿಸಿರುವ ಮಾಜಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಅವರು ಅವಮಾನಿಸಲು ಸಾಧ್ಯವಿಲ್ಲ' ಎಂದರು.
ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ, ಹಾಸ್ಯನಟನ ಹೇಳಿಕೆಗಳಿಗೆ ಶಿಂಧೆ ನೇತೃತ್ವದ ಶಿವಸೇನೆಯ ಪ್ರತಿಕ್ರಿಯೆಯು ಅವರ ಅಭದ್ರತೆಯನ್ನು ಸೂಚಿಸುತ್ತದೆ ಎಂದು ಹೇಳಿದರು.
'ಮಿಂಧೆಯ ಹೇಡಿಗಳ ಗ್ಯಾಂಗ್' ಹೋಟೆಲ್ ಮತ್ತು ಸ್ಟುಡಿಯೋವನ್ನು ಧ್ವಂಸಗೊಳಿಸಿದೆ. ಹಾಸ್ಯನಟ ಕುನಾಲ್ ಕಾಮ್ರಾ ಅವರು ಏಕನಾಥ್ ಮಿಂಧೆ ಕುರಿತು ಹಾಡಿದ ಹಾಡು ನೂರಕ್ಕೆ ನೂರರಷ್ಟು ನಿಜವಾಗಿದೆ. ಹೇಡಿಯಾದವನು ಮಾತ್ರ ಇನ್ನೊಬ್ಬರ ಹಾಡಿಗೆ ಪ್ರತಿಕ್ರಿಯಿಸುತ್ತಾನೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳಬೇಕು. ಏಕನಾಥ್ ಮಿಂಧೆ ಮೂಲಕ ಮುಖ್ಯಮಂತ್ರಿ ಮತ್ತು ಗೃಹ ಸಚಿವರನ್ನು ದುರ್ಬಲಗೊಳಿಸುವ ಮತ್ತೊಂದು ಪ್ರಯತ್ನ ನಡೆದಿದೆ' ಎಂದು ಅವರು 'ಎಕ್ಸ್'ನಲ್ಲಿ ಬರೆದಿದ್ದಾರೆ.
'ಕುನಾಲ್ ಕಾಮ್ರಾ ತಪ್ಪಾಗಿ ಹೇಳಿದ್ದಾರೆಂದು ನಾನು ನಂಬುವುದಿಲ್ಲ. ಅವರನ್ನು 'ಗದ್ದರ್' (ದೇಶದ್ರೋಹಿ) ಎಂದು ಕರೆಯುವುದು ಯಾರ ಮೇಲೂ ದಾಳಿಯಾಗುವುದಿಲ್ಲ. ಕಾಮ್ರಾ ಅವರ ಕಾರ್ಯಕ್ರಮದ ಪೂರ್ಣ ಹಾಡನ್ನು ಕೇಳಿ ಮತ್ತು ಅದನ್ನು ಇತರರೊಂದಿಗೆ ಹಂಚಿಕೊಳ್ಳಿ. ಈ ದಾಳಿಗೂ ಶಿವಸೇನೆಗೂ ಯಾವುದೇ ಸಂಬಂಧವಿಲ್ಲ. ಇದನ್ನು 'ಗದ್ದರ್ ಸೇನೆ' ಮಾಡಿದೆ. ದ್ರೋಹ ಬಗೆಯುವವರು ಎಂದಿಗೂ ನಿಜವಾದ ಶಿವಸೈನಿಕರಾಗಲು ಸಾಧ್ಯವಿಲ್ಲ' ಎಂದು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.
Advertisement