
ಹೈದರಾಬಾದ್: 25 ವರ್ಷದ ಯುವಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ ನಂತರ ಚಲಿಸುತ್ತಿದ್ದ ರೈಲಿನಿಂದ ಜಿಗಿದ 23 ವರ್ಷದ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಾರ್ಚ್ 22 ರಂದು ಶನಿವಾರ ರಾತ್ರಿ 8-15ರ ಸುಮಾರಿನಲ್ಲಿ ಕೊಂಪಲ್ಲಿ ಬಳಿ ಈ ಘಟನೆ ನಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಮರುದಿನ ಸರ್ಕಾರಿ ರೈಲ್ವೆ ಪೊಲೀಸರಿಗೆ (ಜಿಆರ್‌ಪಿ) ದೂರು ಸಲ್ಲಿಸಿದ್ದಾರೆ.
ಅನಂತಪುರ ಜಿಲ್ಲೆಯ ಸಂತ್ರಸ್ತೆ ಹೈದರಾಬಾದಿನ ಖಾಸಗಿ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದಾರೆ. ತನ್ನ ಮೊಬೈಲ್ ಡಿಸ್ ಪ್ಲೇ ದುರಸ್ಥಿ ಮಾಡಿಸಲು ಮಾರ್ಚ್ 22 ರಂದು ಮಧ್ಯಾಹ್ನ 3 ಗಂಟೆಯಲ್ಲಿ ಮೆಡ್ಜಲ್ ನಿಂದ ಸಿಕಂದರಾಬಾದ್ ಗೆ ತೆರಳುತ್ತಿದ್ದಾಗ ತನ್ನ ಮೇಲೆ ಅತ್ಯಾಚಾರದ ಯತ್ನ ನಡೆದಿರುವುದಾಗಿ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ರಿಪೇರಿ ಮುಗಿಸಿ ಸಿಕಂದರಾಬಾದ್ ರೈಲು ನಿಲ್ದಾಣಕ್ಕೆ ಹೋಗಿ, ಮೇಡ್ಚಲ್‌ಗೆ ಸಾಮಾನ್ಯ ಟಿಕೆಟ್ ಖರೀದಿಸಿದ್ದು, ಸಂಜೆ 7:15 ಕ್ಕೆ ಮಹಿಳೆಯರ ಎಂಎಂಟಿಎಸ್ ರೈಲಿನ ಮಹಿಳೆಯರ ಬೋಗಿಯಲ್ಲಿ ಚಲಿಸುತ್ತಿದ್ದಾಗ ರಾತ್ರಿ 8-15ರ ಸಮಾರಿನಲ್ಲಿ ಸುಮಾರು 25 ವರ್ಷದ ಅಪರಿಚಿತ ಯುವಕ ಆಕೆಯೊಂದಿಗೆ ಲೈಂಗಿಕವಾಗಿ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ.
ಆಕೆ ನಿರಾಕರಿಸಿದ್ದು, ಅತ್ಯಾಚಾರದಿಂದ ಪಾರಾಗಲು ಚಲಿಸುತ್ತಿದ್ದ ರೈಲಿನಿಂದ ಜಿಗಿದಿದ್ದು, ತನ್ನ ತಲೆ, ಕೈ,ಮೊಣಕಾಲಿಗೆ ತೀವ್ರವಾಗಿ ಗಾಯಗೊಂಡಿರುವುದಾಗಿ ಪೊಲೀಸರಿಗೆ ಸಂತ್ರಸ್ತೆ ಮಾಹಿತಿ ನೀಡಿದ್ದಾರೆ.
ಸ್ಥಳದಲ್ಲಿದ್ದವರು ಆಂಬ್ಯುಲೆನ್ಸ್‌ಗೆ ಕರೆ ಮಾಡಿ, ಚಿಕಿತ್ಸೆಗಾಗಿ ಆಕೆಯನ್ನು ಸಿಕಂದರಾಬಾದ್‌ನ ಗಾಂಧಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆರೋಪಿಯ್ನು ಇನ್ನೊಮ್ಮೆ ನೋಡಿದರೆ ಆತನನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದು ಸಂತ್ರಸ್ತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Advertisement