
ಚೆನ್ನೈ: ತಮಿಳುನಾಡಿನಲ್ಲಿ ಶತಾಯಗತಾಯ ಅಧಿಕಾರದ ಚುಕ್ಕಾಣಿ ಹಿಡಿಯಲು ಹವಣಿಸುತ್ತಿರುವ ಬಿಜೆಪಿ ಇದೀಗ ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ಆರಂಭಿಸಿದ್ದು, ಇದರ ಮೊದಲ ಭಾಗವಾಗಿ ತಮಿಳುನಾಡಿನಲ್ಲಿ ಮತ್ತೆ AIADMK ಜೊತೆ ಮೈತ್ರಿಗೆ ಮುಂದಾಗಿದೆ ಎಂಬ ಚರ್ಚೆಗಳು ನಡೆಯುತ್ತಿವೆ.
ಇದಕ್ಕೆ ಇಂಬು ನೀಡುವಂತೆ ಅತ್ತ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ತಮಿಳುನಾಡಿಗೆ ದೌಡಾಯಿಸಿದ್ದು, ಈ ಬೆಳವಣಿಗೆಗಳು ತಮಿಳುನಾಡಿನಲ್ಲಿ ಮತ್ತೆ ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿ ಸಾಧ್ಯತೆಗಳ ಕುರಿತು ಚರ್ಚೆಗೆ ಕಾರಣವಾಗಿದೆ.
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರ ದೆಹಲಿಗೆ ಹಠಾತ್ ಭೇಟಿ ನೀಡಿರುವುದು 2026 ರ ವಿಧಾನಸಭಾ ಚುನಾವಣೆಗೆ ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ಮೈತ್ರಿ ಚರ್ಚೆಗೆ ಕಾರಣವಾಗಿದೆ.
ಪಳನಿಸ್ವಾಮಿ ಮಂಗಳವಾರ ರಾತ್ರಿ ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿಯ ಹಿರಿಯ ನಾಯಕ ಮತ್ತು ಪ್ರಮುಖ ಚುನಾವಣಾ ತಂತ್ರಜ್ಞ ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುವ ಸಾಧ್ಯತೆಯಿದೆ ಎಂದು ಎಐಎಡಿಎಂಕೆ ಮೂಲಗಳು ತಿಳಿಸಿವೆ. ಸಭೆಯಲ್ಲಿ, ಲೋಕಸಭಾ ಕ್ಷೇತ್ರಗಳ ಗಡಿ ನಿರ್ಣಯ ಮತ್ತು ತಮಿಳುನಾಡಿನಲ್ಲಿ ದ್ವಿಭಾಷಾ ನೀತಿಯನ್ನು ಮುಂದುವರಿಸುವ ಅಗತ್ಯತೆಯ ಕುರಿತು ಎಐಎಡಿಎಂಕೆ ಪರವಾಗಿ ಪಳನಿಸ್ವಾಮಿ ಒಂದು ಜ್ಞಾಪಕ ಪತ್ರವನ್ನು ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಎಐಎಡಿಎಂಕೆ ಸ್ಪಷ್ಟನೆ
ಇನ್ನು ಈ ಕುರಿತು ಮಾಹಿತಿ ನೀಡಿರುವ ಎಐಎಡಿಎಂಕೆಯ ಹಿರಿಯ ನಾಯಕರೊಬ್ಬರು "ಕಳೆದ ನಾಲ್ಕು ವರ್ಷಗಳ ಆಡಳಿತದಲ್ಲಿ ಡಿಎಂಕೆ ಈ ವಿಷಯದಿಂದ ರಾಜಕೀಯ ಲಾಭ ಪಡೆಯಲು ಮತ್ತು ತನ್ನದೇ ಆದ ನ್ಯೂನತೆಗಳನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ. ಎಐಎಡಿಎಂಕೆ ಎರಡು ಭಾಷಾ ನೀತಿಗೆ ಹಾಗೂ ಲೋಕಸಭಾ ಕ್ಷೇತ್ರಗಳ ಗಡಿ ನಿರ್ಣಯದಿಂದ ತಮಿಳುನಾಡು ಪರಿಣಾಮ ಬೀರಬಾರದು ಎಂಬ ಅಭಿಪ್ರಾಯಕ್ಕೆ ಬದ್ಧವಾಗಿರುವುದರಿಂದ, ಪಕ್ಷವು ಕೂಡ ಧ್ವನಿ ಎತ್ತುವ ಅಗತ್ಯವಿದೆ" ಎಂದು ತಿಳಿಸಿದ್ದಾರೆ.
ಪಳನಿಸ್ವಾಮಿ ಇಂದು ಬೆಳಿಗ್ಗೆ ದೆಹಲಿಗೆ ತೆರಳಿದ್ದು, ನಂತರ, ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಕೆ.ಪಿ. ಮುನುಸ್ವಾಮಿ ಮತ್ತು ಮತ್ತೊಬ್ಬ ಹಿರಿಯ ನಾಯಕ ಎಸ್.ಪಿ. ವೇಲುಮಣಿ ಮಂಗಳವಾರ ಸಂಜೆ ರಾಷ್ಟ್ರ ರಾಜಧಾನಿ ತಲುಪಿದ್ದಾರೆ. ಈಗಾಗಲೇ ಎಂ. ತಂಬಿದುರೈ ಮತ್ತು ಸಿ.ವಿ. ಷಣ್ಮುಗಂ ಸೇರಿದಂತೆ ಹಿರಿಯ ಕಾರ್ಯಕರ್ತರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಪಳನಿಸ್ವಾಮಿ ಬುಧವಾರ ಬೆಳಿಗ್ಗೆ 11.30 ಗಂಟೆಗೆ ವಿಮಾನದಲ್ಲಿ ಚೆನ್ನೈಗೆ ಮರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಾಜಿ ಸಚಿವ ಎಸ್ ಪಿ ವೇಲುಮಣಿ ಅವರ ಮಗನ ವಿವಾಹದಲ್ಲಿ ಬಿಜೆಪಿಯ ರಾಜ್ಯ ಘಟಕದ ಉನ್ನತ ನಾಯಕರು ಮತ್ತು ಎಐಎಡಿಎಂಕೆಯ ಹಿರಿಯ ನಾಯಕರು ಒಟ್ಟಿಗೆ ಸೇರಿದ್ದು ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟದ ಬಗ್ಗೆ ಊಹಾಪೋಹಗಳಿಗೆ ನಾಂದಿ ಹಾಡಿದೆ. ಈಗ, ಪಳನಿಸ್ವಾಮಿ ಪಕ್ಷದ ಹಿರಿಯ ನಾಯಕರೊಂದಿಗೆ ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದಾರೆ.
Advertisement