
ಮುಂಬೈ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಕುರಿತು ಕ್ಷಮೆಯಾಚಿಸಲು ಸ್ಟ್ಯಾಂಡ್ ಅಪ್ ಕಾಮಿಡಿಯಿನ್ ಕುನಾಲ್ ಕಾಮ್ರಾಗೆ ನಿರಾಕರಿಸಿದ್ದು, ಆತನನ್ನು ಶಿವಸೇನೆ ಸುಮ್ಮನೆ ಬಿಡುವುದಿಲ್ಲ ಎಂದು ಮಹಾರಾಷ್ಟ್ರ ಗೃಹ ಖಾತೆ ರಾಜ್ಯ ಸಚಿವ ಯೋಗೇಶ್ ಕದಂ, ಗುಲಾಬ್ ಪಾಟೀಲ್ ಸೇರಿದಂತೆ ಹಲವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಾಮ್ರಾ ಅವರ ವರ್ತನೆಗೆ ಶಿಕ್ಷಿಸಲಾಗುವುದು ಎಂದು ಸಚಿವ ಯೋಗೇಶ್ ರಾಮದಾಸ್ ಕದಂ ಮಂಗಳವಾರ ಹೇಳಿದ್ದಾರೆ. ಕಾಮ್ರಾ ಹೇಳಿಕೆ ಸ್ವೀಕಾರಾರ್ಹವಲ್ಲದ್ದು, ಅವರಿಗೆ ಸರಿಯಾದ ಶಿಕ್ಷೆಯಾಗುತ್ತದೆ. ಸುಪ್ರೀಂ ಕೋರ್ಟ್, ಭಾರತದ ಪ್ರಧಾನಿ, ಹಿಂದೂ ದೇವರು ಮತ್ತು ದೇವತೆಗಳನ್ನು ಅವಮಾನಿಸಲು ಹೋದರೆ ಅದನ್ನು ಸಹಿಸಲಾಗುವುದಿಲ್ಲ. ಮಹಾರಾಷ್ಟ್ರ ಅಥವಾ ಭಾರತದಲ್ಲಿ ಈ ರೀತಿ ವರ್ತಿಸಲು ಸಾಧ್ಯವಿಲ್ಲ. ನಾವು ಹಾಸ್ಯವನ್ನು ಆನಂದಿಸುತ್ತೇವೆ, ಆದರೆ ಇಂತಹ ಹಾಸ್ಯವನ್ನು ಮಹಾರಾಷ್ಟ್ರದಲ್ಲಿ ಸಹಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
ಸೋಮವಾರ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಕಾಮ್ರಾ, ತನ್ನ ಹೇಳಿಕೆಗಾಗಿ "ಕ್ಷಮೆಯಾಚಿಸುವುದಿಲ್ಲ" ಎಂದು ಹೇಳಿದ್ದಾರೆ.
ಕಾಮ್ರಾ ಕ್ಷಮೆ ಕೇಳದಿದ್ದರೆ ನಮ್ಮದೇ ಶೈಲಿಯಲ್ಲಿ ಮಾತನಾಡುತ್ತೇವೆ. ಶಿವಸೇನೆ ಆತನನ್ನು ಸುಮ್ಮನೆ ಬಿಡುವುದಿಲ್ಲ. ಈ ಅವಮಾನ ಸಹಿಸುವುದಿಲ್ಲ. ಕ್ಷಮೆ ಕೇಳದಿದ್ದರೆ ಆತ ಹೊರಗೆ ಬಂದು ಎಲ್ಲಿ ಅಡಗಿಕೊಳ್ಳುತ್ತಾರೆ?... ಶಿವಸೇನೆ ತನ್ನ ನೈಜ ರೂಪ ತೋರಿಸಲಿದೆ’ ಎಂದು ಮಹಾರಾಷ್ಟ್ರ ಸಚಿವ ಗುಲಾಬ್ ರಘುನಾಥ್ ಪಾಟೀಲ್ ಕೂಡ ಎಚ್ಚರಿಕೆ ನೀಡಿದ್ದಾರೆ.
ಇದಕ್ಕೂ ಮೊದಲು, ಮಹಾರಾಷ್ಟ್ರದ ಖಾರ್ ಪೊಲೀಸರು ಕುನಾಲ್ ಕಾಮ್ರಾ ಅವರಿಗೆ ಸಮನ್ಸ್ ಕಳುಹಿಸಿದ್ದು, ಇಂದು ಬೆಳಿಗ್ಗೆ 11 ಗಂಟೆಗೆ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ಕೇಳಿದ್ದಾರೆ. ಮುಂಬೈ ಪೊಲೀಸರ ಪ್ರಕಾರ ಕುನಾಲ್ ಸದ್ಯ ಮುಂಬೈನಲ್ಲಿಲ್ಲ ಎನ್ನಲಾಗಿದೆ.
ಸ್ಟ್ಯಾಂಡ್-ಅಪ್ ಕಾಮಿಡಿ ಶೋವೊಂದರಲ್ಲಿ ಕುನಾಲ್ ಕಾಮ್ರಾ ಅವರ ಆಕ್ಷೇಪಾರ್ಹ ಹೇಳಿಕೆಗಾಗಿ MIDC ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಅದನ್ನು ಹೆಚ್ಚಿನ ತನಿಖೆಗಾಗಿ ಖಾರ್ ಪೊಲೀಸರಿಗೆ ವರ್ಗಾಯಿಸಲಾಗಿದೆ.
Advertisement