
ಮುಂಬೈ: ಏಕನಾಥ್ ಶಿಂಧೆ ಬಣದ ಶಿವಸೇನೆ vs ಸ್ಟ್ಯಾಂಡ್-ಅಪ್ ಕಮಿಡಿಯನ್ ಕುನಾಲ್ ಕಮ್ರಾ ನಡುವಿನ ಸಮರ ಮತ್ತೊಂದು ಮಗ್ಗುಲಿಗೆ ವಾಲಿದ್ದು, ಪೊಲೀಸ್ ಸಮನ್ಸ್ ನಡುವೆಯೂ ಕುನಾಲ್ ಕಮ್ರಾ ಮತ್ತೆ ಶಿವಸೇನೆಯನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಹೊಸ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ.
ಇತ್ತೀಚಿನ ಸ್ಟ್ಯಾಂಡ್-ಅಪ್ ಕಾಮಿಡಿ ಕಾರ್ಯಕ್ರಮದಲ್ಲಿ ವಿಡಂಬನಾತ್ಮಕ ಹಾಡಿನ ಸಂದರ್ಭದಲ್ಲಿ ಕುನಾಲ್ ಕಮ್ರಾ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಪಕ್ಷವನ್ನು ವಿಭಜಿಸಿದ್ದಕ್ಕಾಗಿ "ಗದ್ದರ್" ಎಂದು ಟೀಕಿಸಿದ್ದರು.
ಈ ಘಟನೆ ಬೆನ್ನಲ್ಲೇ ಶಿವಸೇನಾ ಕಾರ್ಯಕರ್ತರು ಮುಂಬೈನ ದಿ ಹ್ಯಾಬಿಟ್ಯಾಟ್ ಹಾಸ್ಯ ಕ್ಲಬ್ ಮೇಲೆ ದಾಳಿ ಮಾಡಿ ಪೀಠೋಪಕರಣ ಧ್ವಂಸ ಮಾಡಿದ್ದರು. ಭಾನುವಾರ, ಶಿಂಧೆ ಬೆಂಬಲಿತ ಶಿವಸೇನಾ ಕಾರ್ಯಕರ್ತರು ಹಾಸ್ಯ ಕಲಾವಿದ ಕಮ್ರಾಗೆ ಬೆದರಿಕೆ ಹಾಕಿ ನೀನು "ಸ್ವತಂತ್ರವಾಗಿ ಓಡಾಡಲು" ಬಿಡುವುದಿಲ್ಲ ಎಂದು ಎಚ್ಚರಿಸಿದ್ದರು.
ಪೊಲೀಸ್ ಸಮನ್ಸ್ ಬೆನ್ನಲ್ಲೇ ಕಮ್ರಾ ಮತ್ತೊಂದು ವಿಡಿಯೋ
ಈ ಬೆಳವಣಿಗೆ ಬೆನ್ನಲ್ಲೇ ಮುಂಬೈನ ಖಾರ್ ಪೊಲೀಸರು ಸ್ಟ್ಯಾಂಡಪ್ ಕಮಿಡಿಯನ್ ಕುನಾಲ್ ಕಮ್ರಾಗೆ ಸಮನ್ಸ್ ನೀಡಿದರು. ಮಂಗಳವಾರ ಪೊಲೀಸರ ಮುಂದೆ ಹಾಜರಾಗಲು ಅವರನ್ನು ಕೇಳಲಾಗಿದೆ. ಇದೀಗ ಈ ಬೆಳವಣಿಗೆ ಬೆನ್ನಲ್ಲೇ ಕುನಾಲ್ ಕಮ್ರಾ ಮತ್ತೆ ಹೊಸ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ.
ಏತನ್ಮಧ್ಯೆ, ಹೊಸ ವೀಡಿಯೊದಲ್ಲಿ, ಶಿವಸೇನೆ ಸದಸ್ಯರು ದಿ ಹ್ಯಾಬಿಟ್ಯಾಟ್ ಅನ್ನು ಧ್ವಂಸ ಮಾಡುತ್ತಿರುವ ದೃಶ್ಯಗಳು ಪ್ರಸಾರವಾಗುತ್ತಿದ್ದಂತೆ, ಕಮ್ರಾ 'ಹಮ್ ಹೊಂಗೆ ಕಂಗಾಲ್' ('ಹಮ್ ಹೊಂಗೆ ಕನ್ಯಾಬ್' ರಾಗದ ಮಾರ್ಪಡಿಸಿದ ಆವೃತ್ತಿ) ಹಾಡಿದ್ದಾರೆ. ನಾಥುರಾಮ್ ಗೋಡ್ಸೆ ಮತ್ತು ಸ್ವಯಂ ಘೋಷಿತ ದೇವಮಾನವ ಅಸಾರಾಮ್ ಅವರನ್ನು ಕಮ್ರಾ ಉಲ್ಲೇಖಿಸಿ ಸೇನಾ ನಾಯಕರ ಮೇಲೆ ವಾಗ್ದಾಳಿ ಮಾಡಿದ್ದಾರೆ.
'ಹಮ್ ಹೊಂಗೆ ಕಂಗಲ್ ಏಕ್ ದಿನ್, ಮನ್ ಮೇ ಹೈ ಆಂಧ್ವಾಸ್, ದೇಶ್ ಕಾ ಸತ್ಯನಾಶ್' (ನಾವು ಒಂದು ದಿನ ಬಡವರಾಗುತ್ತೇವೆ, ಹೃದಯದಲ್ಲಿ ಕುರುಡು ನಂಬಿಕೆ ಇರುತ್ತದೆ, ದೇಶ ವಿನಾಶದತ್ತ ಸಾಗುತ್ತಿದೆ) ಎಂದು ಕಮ್ರಾ ಹಾಡುತ್ತಿದ್ದಂತೆ, ಸೇನಾ ಕಾರ್ಯಕರ್ತರು ಕುರ್ಚಿಗಳನ್ನು ಎಸೆದು ಮುಂಬೈನ ಜನಪ್ರಿಯ ಹಾಸ್ಯ ಕ್ಲಬ್‌ನಲ್ಲಿ ಆಸ್ತಿಯನ್ನು ಧ್ವಂಸ ಮಾಡುತ್ತಿರುವ ದೃಶ್ಯಗಳು ಕಂಡುಬರುತ್ತವೆ.
Advertisement