
ಮೀರತ್: ಉತ್ತರ ಭಾರತದಲ್ಲಿ ಗಂಡಂದಿರ ಮೇಲಿನ ಪತ್ನಿಯರ ಕ್ರೌರ್ಯದ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ತನ್ನ ಪತ್ನಿ ಮನೆಯಲ್ಲಿ ನಿದ್ರಿಸುತ್ತಿದ್ದ ತನ್ನ ಮೇಲೆ ಇಟ್ಟಿಗೆಯಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾಳೆ ಎಂದು ವ್ಯಕ್ತಿಯೋರ್ವ ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ಮೀರತ್ ನಲ್ಲಿ ಈ ಪ್ರಕರಣ ವರದಿಯಾಗಿದ್ದು, ತನ್ನ ಗಂಡನನ್ನೇ ಇಟ್ಟಿಗೆಯಿಂದ ಹೊಡೆದು ಮನಸೋ ಇಚ್ಚೆ ಥಳಿಸಿರುವ ಪತ್ನಿಯೊಬ್ಬಳು ಆತನನ್ನು ಕೊಂದು ತುಂಡು ತುಂಡುಗಳಾಗಿ ಕತ್ತರಿಸಿ ಡ್ರಮ್ ನಲ್ಲಿ ಹಾಕಿ ಮುಚ್ಚಿ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ. ಪತ್ನಿಯ ದಾಳಿ ಭೀತಿಗೆ ಪತಿ ಮಹಾಶಯ ಮನೆ ಬಿಟ್ಟು ಪರಾರಿಯಾಗಿದ್ದು, ಮಾತ್ರವಲ್ಲದೇ ಈ ಕುರಿತು ವಿಡಿಯೋ ಮಾಡಿ ತನ್ನ ಅಳಲು ತೋಡಿಕೊಂಡಿದ್ದಾನೆ. ಇದೀಗ ಪತಿರಾಯನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಮೀರತ್ ನ ಕಂಕೇರ್ ಖೇರಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ವಿರುದ್ಧ ಪತಿರಾಯ ಪೊಲೀಸ್ ದೂರು ಕೂಡ ದಾಖಲಿಸಿದ್ದಾರೆ ಎನ್ನಲಾಗಿದೆ. ಇದೇ ಮೀರತ್ ನಲ್ಲಿ ಇತ್ತೀಚೆಗೆ ಸೌರಭ್ ಕೊಲೆ ಪ್ರಕರಣ ನಡೆದಿದ್ದು, ಆತನ ಪತ್ನಿ ಮುಸ್ಕಾನ್ ರಸ್ತೋಗಿ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿ ದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಡ್ರಮ್ ನಲ್ಲಿ ಹಾಕಿ ಸಿಮೆಂಟ್ ಸೀಲ್ ಮಾಡಿದ್ದರು. ಇದೇ ಪ್ರಕರಣವನ್ನು ಮುಂದಿಟ್ಟುಕೊಂಡು ಪತ್ನಿ ಪತಿಗೆ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ.
ಮದ್ಯವ್ಯಸನಿ ಗಂಡ, ಬೇಸತ್ತಿದ್ದ ಪತ್ನಿ ಆಕ್ರೋಶ
ಇನ್ನು ಈ ಪ್ರಕರಣವನ್ನು ದಾಖಲಿಸಿಕೊಂಡ ಮೀರತ್ ಪೊಲೀಸರು ತನಿಖೆ ನಡೆಸಿದಾಗ ಪತಿಯ ಮದ್ಯವ್ಯಸನದಿಂದ ಪತ್ನಿ ಬೇಸತ್ತಿದ್ದಳು ಎನ್ನಲಾಗಿದೆ. ಪತಿ ನಿತ್ಯ ಕುಡಿದು ಬರುತ್ತಿದ್ದ. ಕೆಲಸಕ್ಕೆ ಹೋಗುತ್ತಿರಲಿಲ್ಲ. ಅಲ್ಲದೆ ಕುಡಿದುಬಂದು ಮನೆಯವರಿಗೆ ಕಾಟ ನೀಡುತ್ತಿದ್ದ ಎಂದು ಹೇಳಲಾಗಿದೆ. ಆತನ ಕಾಟದಿಂದ ಬೇಸತ್ತು ಪತ್ನಿ ಹೀಗೆ ದಾಳಿ ಮಾಡಿದ್ದಾಳೆ ಎಂದು ಹೇಳಿದ್ದಾರೆ.
ಐದು ವರ್ಷಗಳ ಹಿಂದೆ ಮದುವೆಯಾಗಿದ್ದ ಈ ಜೋಡಿಗೆ ಇಬ್ಬರು ಮಕ್ಕಳಿದ್ದು, ಪತಿ ಮದ್ಯದ ಚಟಕ್ಕೆ ದಾಸನಾಗಿದ್ದ. ತನ್ನ ಮದ್ಯದ ವ್ಯಸನದಿಂದಾಗಿ ಮನೆ ಮಂದಿಗೆ ದೊಡ್ಡ ಸಮಸ್ಯೆಯಾಗಿದ್ದ. ಸಾಕಷ್ಟು ಬಾರಿ ಪತ್ನಿ ಆತನ ಕುಡಿತದ ಚಟ ಬಿಡಿಸಲು ಪ್ರಯತ್ನಿಸಿದ್ದಾರಾದರೂ ಆತ ಮಾತ್ರ ಅದನ್ನು ಬಿಟ್ಟಿರಲಿಲ್ಲ. ರಾತ್ರಿಕೂಡ ಕಂಠಪೂರ್ತಿ ಕುಡಿದು ಬಂದಾಗ ಮನೆಯಲ್ಲಿ ಜಗಳವಾಗಿದೆ. ಈ ವೇಳೆ ಪತ್ನಿ ಕುಡುಕ ಪತಿ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿದ್ದಾರೆ. ಅಲ್ಲದೆ ತನ್ನ ಮದ್ಯವ್ಯಸನಿ ವರ್ತನೆಯನ್ನು ಬದಲಾಯಿಸದಿದ್ದರೆ ಅವನನ್ನು ತುಂಡುಗಳಾಗಿ ಕತ್ತರಿಸಿ ಡ್ರಮ್‌ನಲ್ಲಿ ಮುಚ್ಚಿಡುವುದಾಗಿ ಪತ್ನಿ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತ ಪತಿ ಹೇಳಿದ್ದಾನೆ.
ಪತಿಗಿಂತ ಮೊದಲೇ ಪೊಲೀಸ್ ಠಾಣೆಯಲ್ಲಿ ಪತ್ನಿ ದೂರು
ಇನ್ನು ಹಲ್ಲೆ ವಿಚಾರವಾಗಿ ಪತಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಆತನಿಗಿಂತ ಮೊದಲೇ ಠಾಣೆಗೆ ಬಂದಿದ್ದ ಪತ್ನಿ ಪತಿ ವಿರುದ್ಧ ದೂರು ದಾಖಲಿಸಿದ್ದಾರೆ. ಇಬ್ಬರಿಂದಲೂ ದೂರು ದಾಖಲಿಸಿಕೊಂಡಿರುವ ಪೊಲೀಸರು ಸಂತ್ರಸ್ಥ ಪತಿಯ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ಬಳಿಕ ಪೊಲೀಸ್ ಅಧಿಕಾರಿಗಳು ಪರಸ್ಪರ ರಾಜಿ ಸಂಧಾನ ನಡೆಸಿದ್ದು, ರಾಜಿ ಬಳಿಕ ಮನೆಗೆ ಹೋಗಿದ್ದಾರೆ ಎಂದು ಎಸ್‌ಎಚ್‌ಒ ಕಂಕೇರ್ ಖೇರಾ ವಿನಯ್ ಕುಮಾರ್ ತಿಳಿಸಿದ್ದಾರೆ.
Advertisement